ದೇವಾಲಯದ ಬೀಗ ಮುರಿದು 5 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಮಡಿಕೇರಿ, ಡಿ.9- ದೇವಸ್ಥಾನದ ಬೀಗ ಮುರಿದು 5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಎರಡು ಹುಂಡಿಯಲ್ಲಿದ್ದ ಹಣವನ್ನು ಖದೀಮರು ಕಳವು ಮಾಡಿರುವ ಘಟನೆ ನಗರದ ಹೊರವಲಯದ ಶ್ರೀಭಗವತಿ ಮಹಿಷಿ ಮರ್ದಿನಿ ದೇವಾಲಯದಲ್ಲಿ ನಡೆದಿದೆ.

ಸೋಮವಾರ ಬೆಳಗಿನ ಜಾವ ದೇವಾಲಯದ ಅರ್ಚಕರು ಪೂಜೆಗೆಂದು ದೇವಾಲಯಕ್ಕೆ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಕಳ್ಳರ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.

ಘಟನೆ ವಿವರ: ಶ್ರೀಭಗವತಿ ಮಹಿಷಿ ಮರ್ದಿನಿ ದೇವಾಲಯ ನಗರದ ಶಕ್ತಿ ದೇವತೆಗಳಲ್ಲಿ ಒಂದಾಗಿದ್ದು, ಭಾನುವಾರ ರಾತ್ರಿ 12 ಗಂಟೆಯಿಂದ ಸೋಮವಾರ ಬೆಳಗಿನ ಜಾವ 3 ಗಂಟೆಯ ಸಮಯ ದಲ್ಲಿ ಕಳ್ಳರ ತಂಡ ದೇವಾಲಯದ ಬಾಗಿಲ ಬೀಗ ಮುರಿದು ಒಳನುಗ್ಗಿ ಕಳ್ಳತನ ನಡೆಸಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ದೇವಾಲಯದ ಮುಖ್ಯ ದ್ವಾರದಲ್ಲಿದ್ದ ಸಿ.ಸಿ.ಕ್ಯಾಮರಾವನ್ನು ಬೇರೆಡೆಗೆ ತಿರುಗಿಸಿ, ಬಾಗಿಲಿಗೆ ಅಳವಡಿಸಿದ್ದ ಚಿಲಕವನ್ನು ಕಳಚಿ ಕಳ್ಳರು ಒಳ ನುಗ್ಗಿದ್ದಾರೆ. ಬಳಿಕ ಗರ್ಭಗುಡಿಯಲ್ಲಿದ್ದ ಭಗವತಿ ದೇವಿಯ ವಿಗ್ರಹಕ್ಕೆ ಶೃಂಗಾರ ಮಾಡಲಾಗಿದ್ದ, ಬೆಳ್ಳಿಯ 2 ಕವಚ, 2 ದೀಪಗಳು ಮತ್ತು ದೇವಿಯ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ತಾಳಿ ಸರವನ್ನು ಕಳವು ಮಾಡಿದ್ದಾರೆ.
ಗರ್ಭ ಗುಡಿಯ ಪಕ್ಕದಲ್ಲಿರುವ ಶ್ರೀಗಣಪತಿ ಗುಡಿಗೆ ತೆರಳಿದ ಕಳ್ಳರು ಗಣಪತಿಯ ವಿಗ್ರಹಕ್ಕೆ ಅಳವಡಿಸಿದ್ದ 2 ಬೆಳ್ಳಿಯ ಕವಚ, ಅಲ್ಲಿದ್ದ 2 ದೀಪಗಳನ್ನು ಕೂಡ ಕಳವು ಮಾಡಿದ್ದಾರೆ. ದೇವಾಲಯದ ಆವರಣದಲ್ಲಿದ್ದ 2 ಬಂಡಾರದ ಹುಂಡಿಯ ಬೀಗ ಮುರಿದು ಹುಂಡಿಯ ಲ್ಲಿದ್ದ ಅಂದಾಜು 10 ಸಾವಿರ ರೂ. ಹಣವನ್ನು ಕೂಡ ಕದ್ದೊಯ್ದಿದ್ದಾರೆ. ಎರಡೂ ಗರ್ಭ ಗುಡಿಗಳಲ್ಲಿ ಅಮೂಲ್ಯ ವಸ್ತುಗಳಿಗಾಗಿ ಶೋಧ ನಡೆಸಿರುವ ಕಳ್ಳರು ನೈವೇದ್ಯ, ಕುಂಕುಮವನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಬಳಿಕ ದೇವಾಲಯದ ಹಿಂಬದಿಯ ಬಾಗಿಲನ್ನು ತೆಗೆದು ಪರಾರಿ ಯಾಗಿದ್ದಾರೆ. ಒಟ್ಟು 5 ಲಕ್ಷ ರೂ. ಮೌಲ್ಯದ ಆಭರಣ ಕಳವು ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ.

ಸೋಮವಾರ ಬೆಳಿಗ್ಗೆ ದೇವಾಲಯಕ್ಕೆ ಅರ್ಚಕರು ಬಂದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಅವರು ಸ್ಥಳೀಯರಿಗೆ ಮಾಹಿತಿ ನೀಡಿದ ಮೇರೆಗೆ ಅಲ್ಲಿನ ನಿವಾಸಿಗಳು ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದರು. ಬಳಿಕ ಬೆರಳಚ್ಚು ಸಿಬ್ಬಂದಿಗಳು ಮತ್ತು ಶ್ವಾನದಳವನ್ನು ಕೂಡ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು. ಘಟನಾ ಸ್ಥಳಕ್ಕೆ ಡಿವೈಎಸ್‍ಪಿ ದಿನೇಶ್ ಕುಮಾರ್, ಗ್ರಾಮಾಂತರ ವೃತ್ತ ನಿರೀಕ್ಷಕ ದಿವಾಕರ್, ನಗರ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ನಗರ ಕ್ರೈಂ ಬ್ರಾಂಚ್ ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ನಡೆಸಿದರು.

ಕುಂಕುಮ ಸುರಿದ ಕಳ್ಳರು: ಇನ್ನು ಶ್ರೀ ಭಗವತಿ ದೇವಿಯ ವಿಗ್ರಹದ ಶಿರದಿಂದ ಪಾದ ಪೀಠದವರೆಗೆ ಕುಂಕುಮವನ್ನು ಸುರಿದಿದ್ದಾರೆ. ಗರ್ಭ ಗುಡಿಯ ಹೊಸ್ತಿಲಿನ ಮೇಲೆ ಇಡಲಾಗಿದ್ದ ಮಂತ್ರ ಪಾರಣ ಪುಸ್ತಕವನ್ನು ಹೊರತೆಗೆದು ಭಗವತಿ ದೇವಿಯ ಪಾದದ ಬಳಿ ಇಟ್ಟಿರುವುದು ಕಂಡು ಬಂದಿದೆ. ಆಭರಣ ಕಳವು ಮಾಡುವ ಮುನ್ನ ಕಳ್ಳರು ದೇವಿಗೆ ಪೂಜೆ ಸಲ್ಲಿಸಿದರೇ ಎಂಬ ಶಂಕೆಯನ್ನು ಭಕ್ತರು ವ್ಯಕ್ತಪಡಿಸಿದ್ದಾರೆ.