ಮುಚ್ಚಿಹೋಗಿದ್ದ 7 ವರ್ಷದ ಹಿಂದಿನ ಕೊಲೆ ಪ್ರಕರಣ ಪತ್ತೆ

ಮಹಿಳೆ ಬಂಧನ, 1.20 ಲಕ್ಷ ಮೌಲ್ಯದ ಚಿನ್ನಾಭರಣ ವಶ
ಹಾಸನ: ಪತ್ತೆಯಾಗದ ಪ್ರಕರಣವೆಂದು ಮುಚ್ಚಿಹೋಗಿದ್ದ ಕಳೆದ 7 ವರ್ಷಗಳ ಹಿಂದಿನ ಕೊಲೆ ಪ್ರಕರಣ ವನ್ನು ಪತ್ತೆಹಚ್ಚಿ ಮಹಿಳೆಯನ್ನು ಬಂಧಿಸಿ 1.20 ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳುವಲ್ಲಿ ಹಾಸನ ಗ್ರಾಮಾಂ ತರ ಪೊಲೀಸರು ಯಶಸ್ವಿಯಾಗಿದ್ದಾರೆ.

ತಾಲೂಕಿನ ಸಾಲಗಾಮೆ ಗ್ರಾಮದ ಮನೆಗೆಲಸದ ಮಹಿಳೆ ಸುನಂದಮ್ಮ (65) ಎಂಬಾಕೆಯೇ ಬಂಧಿತಳಾಗಿದ್ದು, ಈಕೆ ಮತ್ತೋರ್ವ ಮಹಿಳೆಯನ್ನು ಹತ್ಯೆ ಮಾಡಿ ಅಪಹರಿಸಿದ್ದ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ವಿವರ: ತಾಲೂಕಿನ ಸಾಲಗಾಮೆ ಹೋಬಳಿ ನರಸೀಪುರ ಗ್ರಾಮದ ಶ್ರೀಮತಿ ಶಾರದಾಮಣಿ ಅಲಿಯಾಸ್ ಪಾರ್ವತಿ (52) ಎಂಬಾಕೆ 2011 ರಲ್ಲಿ ನರಸೀ ಪುರ ಗ್ರಾಮದ ತಮ್ಮ ಜಮೀನಿಗೆ ಹೋಗಿ ಮನೆಗೆ ವಾಪಸ್ಸಾಗುತ್ತಿದ್ದಾಗ ಈಕೆಗೆ ತಲೆ ಹೊಡೆದುಹಾಕಿ ಮಾಂಗಲ್ಯ ಸರ, ಚಿನ್ನದ ಬಳೆಗಳು ಹಾಗೂ ಕಿವಿ ಓಲೆಯನ್ನು ಬಿಚ್ಚಿಕೊಂಡು, ಮೃತದೇಹವನ್ನು ಕಡಗಾ ಕೆರೆಕೋಡಿಯ ಕಾಲುವೆಯ ನೀರಿನಲ್ಲಿ ಸೊಪ್ಪಿನಿಂದ ಮುಚ್ಚಲಾಗಿತ್ತು.

ಈ ಸಂಬಂಧ ಅಂದು ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ, ಕೊಲೆ ಆರೋಪಿಗಳು ಪತ್ತೆಯಾಗದ ಕಾರಣ ಅಂದಿನ ಪೊಲೀಸ್ ಅಧಿಕಾರಿಗಳು ಪತ್ತೆ ಯಾಗದ ಪ್ರಕರಣ ಎಂದು ಕಡತವನ್ನು ನಿಶ್ಚಲ ಸ್ಥಿತಿ ಯಲ್ಲಿ ಇಟ್ಟಿದ್ದರು. ಅದೇ ರೀತಿ ನ್ಯಾಯಾ ಲಯಕ್ಕೆ ಸಿ ರಿಪೋರ್ಟ್ ಸಲ್ಲಿಸಿದ್ದರು.

ಇತ್ತೀಚೆಗೆ ಮಾಹಿತಿದಾರರೊಬ್ಬರು ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಶ್ರೀಮತಿ ರೇಖಾಬಾಯಿ ಅವರನ್ನು ಸಂಪರ್ಕಿಸಿ, ಮನೆಗೆಲಸದ ಮಹಿಳೆ ಸುನಂದಮ್ಮ ಅವರು ಕಳೆದ ಹಲವು ವರ್ಷ ಗಳ ಹಿಂದೆ ಹತ್ಯೆಗೀಡಾಗಿದ್ದ ಶಾರದಾ ಮಣಿ ಅವರ ಒಡವೆಗಳನ್ನು ಹಾಕಿಕೊಂಡಿ ದ್ದಾರೆ ಎಂದು ನೀಡಿದ ಮಾಹಿತಿಯನ್ನಾ ಧರಿಸಿ ಸಬ್‍ಇನ್ಸ್‍ಪೆಕ್ಟರ್ ರೇಖಾಬಾಯಿ ಅವರು ಸರ್ಕಲ್ ಇನ್ಸ್‍ಪೆಕ್ಟರ್ ವಸಂತ್ ಅವರ ಮಾರ್ಗದರ್ಶನದ ಮೇರೆಗೆ ಹಳೆ ಕಡತಗಳನ್ನು ಪರಿಶೀಲಿಸಿದಾಗ 2011 ರಲ್ಲಿ ನಡೆದಿದ್ದ ಶಾರದಾಮಣಿ ಹತ್ಯೆ ಪ್ರಕರಣಕ್ಕೆ ಸಿ ರಿಪೋರ್ಟ್ ಸಲ್ಲಿಸಿರು ವುದು ಪತ್ತೆಯಾಗಿದೆ.

ಈ ವಿಚಾರವನ್ನು ಜಿಲ್ಲಾ ಎಸ್ಪಿ ಪ್ರಕಾಶ್ ಗೌಡ ಅವರಿಗೆ ತಿಳಿಸಲಾಗಿ, ಎಎಸ್ಪಿ ಶ್ರೀಮತಿ ಬಿ.ಎನ್. ನಂದಿನಿ, ಡಿವೈಎಸ್ಪಿ ಟಿ.ಆರ್. ಪುಟ್ಟಸ್ವಾಮಿ ಗೌಡ ಅವರುಗಳ ಮಾರ್ಗದರ್ಶನದಲ್ಲಿ ಕಾರ್ಯಚರಣೆಗಿಳಿದ ಸರ್ಕಲ್ ಇನ್ಸ್‍ಪೆಕ್ಟರ್ ಕೆ.ಎಂ. ವಸಂತ್, ಸಬ್‍ಇನ್ಸ್‍ಪೆಕ್ಟರ್ ರೇಖಾಬಾಯಿ, ಸಿಬ್ಬಂದಿ ಗಳಾದ ದೇವರಾಜು, ಬಿ.ಆರ್. ಮಂಜು ನಾಥ್, ಕೃಷ್ಣಶೆಟ್ಟಿ ಅವರುಗಳಿದ್ದ ತಂಡ ಗ್ರಾಮಕ್ಕೆ ತೆರಳಿ ಸಮಗ್ರ ಮಾಹಿತಿಯನ್ನು ಕಲೆಹಾಕಿ ಸುನಂದಮ್ಮನನ್ನು ಬಂಧಿಸಿ, ವಿಚಾರಣೆಗೊಳಪಡಿಸಿದ ವೇಳೆ ಆಕೆ ಚಿನ್ನಾಭರಣದ ಆಸೆಗಾಗಿ ಶಾರದಾಮಣಿ ಅವರನ್ನು ಹತ್ಯೆ ಮಾಡಿದ್ದನ್ನು ಒಪ್ಪಿ ಕೊಂಡಿದ್ದಾಳೆ. ಅಲ್ಲದೆ, ಆಕೆಯ ಬಳಿ ಯಿದ್ದ 40 ಗ್ರಾಂ ತೂಕದ ಎರಡೆಳೆ ಚಿನ್ನದ ಸರ ಹತ್ಯೆಗೀಡಾದ ಶಾರದಾ ಮಣಿ ಅವರಿಗೆ ಸೇರಿದ್ದೇ ಎಂಬುದು ಕೂಡ ಖಚಿತಪಟ್ಟಿದೆ. ಮುಚ್ಚಿಹೋಗಿದ್ದ 7 ವರ್ಷದ ಹಳೆಯ ಪ್ರಕರಣವನ್ನು ಬೇಧಿ ಸುವಲ್ಲಿ ಯಶಸ್ವಿಯಾದ ಪೊಲೀಸರ ತಂಡವನ್ನು ಜಿಲ್ಲಾ ಎಸ್ಪಿ ಡಾ. ಎ.ಎನ್. ಪ್ರಕಾಶ್‍ಗೌಡ ಶ್ಲಾಘಿಸಿದ್ದಾರೆ.