ಕಾರ್ಮಿಕರ ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ

ಮೈಸೂರು,ಜ.8(ಎಂಟಿವೈ)-ಕಾರ್ಮಿಕ ಸಂಘ ಟನೆಗಳು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾ ಯಿಸಿ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದರೂ, ಮೈಸೂರಿನಲ್ಲಿ ಸಾರಿಗೆ ಸಂಸ್ಥೆ ಮತ್ತು ಖಾಸಗಿ ಬಸ್ ಗಳು ಹಾಗೂ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿ ರುವ ವಾಹನಗಳ ಸಂಚಾರ ಎಂದಿನಂತೆ ರಸ್ತೆಗಿಳಿದಿದ್ದವು.

ಮೈಸೂರು ನಗರದಲ್ಲಿ ಬುಧವಾರ ದಿನವಿಡೀ ಮುಷ್ಕರದ ಕಾವು ಕಾಣಲಿಲ್ಲ. ಮುಷ್ಕರದ ಕರೆಗೆ ಓಗೊಡದೆ ವರ್ತಕರು, ಉದ್ಯಮಿಗಳು ಎಂದಿನಂತೆ ವಹಿವಾಟು ನಡೆಸಿದರು. ಮಡಿಕೇರಿಯಲ್ಲಿ ಮಂಡ್ಯ ಡಿಪೊ ಬಸ್ ವೊಂದಕ್ಕೆ ಕಿಡಿಗೇಡಿಗಳು ಕಲ್ಲು ತೂರಿದ ಘಟನೆ ನಡೆದಿದೆ. ಇದರ ಹೊರತಾಗಿ ರಾಜ್ಯದ ಬೇರಾವುದೇ ಜಿಲ್ಲೆ ಗಳಲ್ಲೂ ಅಹಿತಕರ ಘಟನೆ ನಡೆಯದೇ ಇದ್ದುದ ರಿಂದ ಬಸ್ ಚಾಲಕರು ನಿರಾತಂಕವಾಗಿ ಕರ್ತವ್ಯ ನಿಭಾ ಯಿಸಿದರು. ಮುಷ್ಕರದಲ್ಲಿ ಸಾರಿಗೆ ಸಂಸ್ಥೆಗಳ ನೌಕರರು ಹಾಗೂ ಅಸಂಘಟಿತ ವಲಯಗಳ ಕಾರ್ಮಿಕರು ಪೂರ್ಣ ಪ್ರಮಾಣದಲ್ಲಿ ಪಾಲ್ಗೊಳ್ಳದೇ ಕರ್ತವ್ಯ ನಿರ್ವಹಿಸಿದ್ದರಿಂದ ಮುಷ್ಕರದ ಕರೆಗೆ ನೀರಸ ಪ್ರತಿ ಕ್ರಿಯೆ ಕಂಡು ಬಂದಿತು.

ನಗರ ಬಸ್ ನಿಲ್ದಾಣ: ಮೈಸೂರು ನಗರದಲ್ಲಿ ಸಾರಿಗೆ ಸಂಸ್ಥೆಯ ನಗರ ವಿಭಾಗದ ಬಸ್ಸುಗಳ ಸಂಚಾರ ಎಂದಿನಂತೆ ನಡೆಯಿತು. ಮೈಸೂರು ನಗರ ವಿಭಾಗ ದಲ್ಲಿ ನಾಲ್ಕು ಡಿಪೋಗಳಿದ್ದು, ಅವುಗಳಲ್ಲಿ 444 ಬಸ್ಸುಗಳು 434 ರೂಟ್‍ಗಳಲ್ಲಿ ದಿನಕ್ಕೆ 6 ಸಾವಿರ ಟ್ರಿಪ್‍ಗಳಲ್ಲಿ ಸಂಚರಿಸುತ್ತವೆ. ಇಂದು ಬೆಳಿಗ್ಗೆಯಿಂದ ಸಂಜೆವರೆಗೂ ಎಲ್ಲಾ ಬಸ್ಸುಗಳ ಸಂಚಾರ ಎಂದಿನಂತೆ ನಡೆಯಿತು. ಈ ಕುರಿತಂತೆ ನಗರ ವಿಭಾಗದ ವಿಭಾ ಗೀಯ ನಿಯಂತ್ರಣಾಧಿಕಾರಿ ಎಸ್.ಪಿ.ನಾಗರಾಜು `ಮೈಸೂರು ಮಿತ್ರ’ದೊಂದಿಗೆ ಮಾತನಾಡಿ, ಎಲ್ಲಿಯೂ ಬಸ್‍ಗಳ ಸಂಚಾರಕ್ಕೆ ಅಡೆತಡೆ ಉಂಟಾಗಿಲ್ಲ. ಎಲ್ಲಾ 444 ಬಸ್ಸು ಗಳನ್ನೂ ಪ್ರಯಾಣಿಕರ ಸೇವೆಗೆ ಬಳಸಲಾಗಿದೆ ಎಂದರು.

ಗ್ರಾಮೀಣ ವಿಭಾಗ: ಗ್ರಾಮಾಂತರ ಬಸ್ ನಿಲ್ದಾಣ ದಿಂದಲೂ ಬೇರೆ ಬೇರೆ ಜಿಲ್ಲೆ, ಅಂತಾರಾಜ್ಯಗಳ ಬಸ್‍ಗಳ ಸಂಚಾರವೂ ಎಂದಿನಂತೆ ನಡೆಯಿತು. ಪ್ರಯಾ ಣಿಕರ ಸಂಖ್ಯೆಯಲ್ಲೂ ಕೊರತೆ ಕಂಡು ಬರಲಿಲ್ಲ. ಗ್ರಾಮಾಂತರ ಘಟಕದ ವಿಭಾಗೀಯ ನಿಯಂತ್ರಣಾ ಧಿಕಾರಿ ಆರ್.ಅಶೋಕ್‍ಕುಮಾರ್ ಮಾತನಾಡಿ, ಗ್ರಾಮಾಂತರ ವಿಭಾಗದಿಂದ ಪ್ರತಿದಿನ 700 ಬಸ್ಸು 672 ರೂಟ್‍ಗಳಲ್ಲಿ 3 ಸಾವಿರಕ್ಕೂ ಹೆಚ್ಚು ಟ್ರಿಪ್‍ಗಳಲ್ಲಿ ಸಂಚರಿಸುತ್ತವೆ. ಇಂದು ಸಹ ಯಾವುದೇ ಅಡಚಣೆ ಯಿಲ್ಲದೆ ಬಸ್ ಸೇವೆ ನೀಡಲಾಗಿದೆ. ಎಲ್ಲಿಯೂ ಅಹಿತಕರ ಘಟನೆ ನಡೆದಿರುವ ಬಗ್ಗೆ ಸಿಬ್ಬಂದಿ ವರದಿ ಸಲ್ಲಿಸಿಲ್ಲ ಎಂದು ತಿಳಿಸಿದರು.

ಖಾಸಗಿ ಬಸ್‍ಗಳ ಸಂಚಾರ: ಖಾಸಗಿ ಬಸ್‍ಗಳ ಸಂಚಾರಕ್ಕೂ ಯಾವುದೇ ತಡೆ ಇರಲಿಲ್ಲ. ಮೈಸೂ ರಿಂದ ಪ್ರತಿದಿನ ಬೇರೆ ನಗರ, ಜಿಲ್ಲೆ, ಪಟ್ಟಣಗಳಿಗೆ ಪ್ರಯಾಣಿಸುವ 150ಕ್ಕೂ ಹೆಚ್ಚು ಬಸ್‍ಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿಲ್ಲ.

ಆಟೋರಿಕ್ಷಾಗಳಿಗೂ ತೊಂದರೆಯಿಲ್ಲ: ಕಾರ್ಮಿಕ ಸಂಘಟನೆಗಳ ಒಕ್ಕೂಟ ಕರೆ ನೀಡಿದ್ದ ಮುಷ್ಕರದಿಂದ ಆಟೋ ಚಾಲಕರು ದೂರವುಳಿದಿದ್ದರು. ಬೆಳಿಗ್ಗೆ ಕಾರ್ಮಿ ಕರ ಪ್ರತಿಭಟನಾ ಮೆರವಣಿಗೆಯಲ್ಲೂ ಆಟೋರಿಕ್ಷಾ ಚಾಲಕರು ಪಾಲ್ಗೊಂಡಿರಲಿಲ್ಲ. ಎಲ್ಲಾ ಬಡಾವಣೆ ಗಳಲ್ಲೂ ಆಟೋ ಸಂಚಾರ ಎಂದಿನಂತೆ ಇತ್ತು.

ಹೋಟೆಲ್‍ಗಳು ತೆರೆದಿದ್ದವು: ಕಾರ್ಮಿಕರ ಮುಷ್ಕರಕ್ಕೆ ನೈತಿಕ ಬೆಂಬಲ ನೀಡುವುದಾಗಿ ಹೋಟೆಲ್ ಮಾಲೀಕರ ಸಂಘ ಘೋಷಣೆ ಮಾಡಿದ್ದರಿಂದ ಮೈಸೂರಿನಲ್ಲಿರುವ ಎಲ್ಲಾ ಹೋಟೆಲ್, ಬೇಕರಿ, ರೆಸ್ಟೋರೆಂಟ್‍ಗಳು ತೆರೆದಿದ್ದವು.

ಶಾಲಾ-ಕಾಲೇಜು, ಸರ್ಕಾರಿ ಕಚೇರಿ: ಮೈಸೂರು ನಗರ ಹಾಗೂ ಜಿಲ್ಲೆಯ ಸರ್ಕಾರಿ, ಅನುಧಾನಿತ ಹಾಗೂ ಖಾಸಗಿ ಶಾಲಾ-ಕಾಲೇಜುಗಳು ಹಾಗೂ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು.