ಇಂದಿನಿಂದ ರಾಜ್ಯದಲ್ಲಿ ಮೊದಲ ಹಂತದ ಹಣಾಹಣಿ

ಬೆಂಗಳೂರು: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆ, ಹಿಂತೆಗೆದುಕೊಳ್ಳುವ ಪ್ರಕ್ರಿಯೆ ಪೂರ್ಣ ಗೊಂಡು, ಮೊದಲ ಹಂತದ ಚುನಾವಣೆಗೆ ಸ್ಪಷ್ಟ ಚಿತ್ರಣ ಹೊರಬಿದ್ದಿದೆ.

ಕಾಂಗ್ರೆಸ್ ವರಿಷ್ಠರಿಗೆ ತೀವ್ರ ತಲೆನೋವು ತಂದಿದ್ದ ತುಮ ಕೂರು ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ಮುದ್ದಹನುಮೇ ಗೌಡ ತಮ್ಮ ಉಮೇದುವಾರಿಕೆ ಹಿಂದಕ್ಕೆ ಪಡೆಯುವುದರೊಂದಿಗೆ ಮೈತ್ರಿ ಗೊಂದಲಕ್ಕೆ ತೆರೆ ಎಳೆದಿದ್ದಾರೆ. ಇಲ್ಲಿ ಕಣಕ್ಕಿಳಿದಿರುವ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡರು, ಮುದ್ದಹನುಮೇಗೌಡರ ನಿರ್ಧಾರದಿಂದ ನಿರಾಳ ರಾಗಿದ್ದಾರೆ. ಮೊದಲ ಹಂತದಲ್ಲಿ ನಡೆಯುತ್ತಿರುವ ಚುನಾವಣೆ ಯಲ್ಲಿ ಮೂರು ಪಕ್ಷಗಳಿಗೂ ಬಂಡಾಯದ ಬಿಸಿ ಇಲ್ಲ. ಆದರೆ ಒಳೇಟಿನ ಆತಂಕ ಎಲ್ಲರಿಗೂ ಕಾಡುತ್ತಿದೆ. ಏಪ್ರಿಲ್ 18 ರಂದು ಈ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಅದರೊಳಗಾಗಿ ಆಂತರಿಕ ಭಿನ್ನಾಭಿಪ್ರಾಯ ಸರಿ ಮಾಡಿಕೊಂಡರೆ ಮೈತ್ರಿ ಪಕ್ಷದ ಅಭ್ಯರ್ಥಿಗಳ ಹೋರಾಟದ ಹಾದಿ ಸುಗಮವಾಗಲಿದೆ. ಕಾಂಗ್ರೆಸ್ ವರಿಷ್ಠರ ಎಚ್ಚರಿಕೆಗೆ ಮಣಿದ ಸಂಸದ ಮುದ್ದಹನುಮೇಗೌಡ, ಮಾಜಿ ಶಾಸಕ ಕೆ.ಎನ್. ರಾಜಣ್ಣ ಕಡೇ ಗಳಿಗೆಯಲ್ಲಿ ಕಣ ದಿಂದ ಹಿಂದಕ್ಕೆ ಸರಿದಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ, ರಾಜಕೀಯ ಕಾರ್ಯ ದರ್ಶಿ ಅಹಮದ್ ಪಟೇಲ್, ಗೌಡರನ್ನು ಸಂಪರ್ಕಿಸಿ ಮನವೊಲಿಸಿದ್ದರು. ಇದಾದ ನಂತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್, ಉಪಮುಖ್ಯಮಂತಿ ಡಾ. ಜಿ. ಪರಮೇಶ್ವರ್, ಮುದ್ದಹನುಮೇಗೌಡರ ನಿವಾಸಕ್ಕೆ ತೆರಳಿ ಅವರ ಜೊತೆ ಸಮಾಲೋಚನೆ ಮಾಡಿ, ನಾಮಪತ್ರ ಹಿಂತೆಗೆಯುವಂತೆ ಮನವಿ ಮಾಡಿದ್ದರು.

ಇದಾದ ನಂತರ ತುಮಕೂರಿಗೆ ತೆರಳಿದ ಗೌಡರು, ಅಲ್ಲಿನ ತಮ್ಮ ಬೆಂಬಲಿಗರೊಟ್ಟಿಗೆ ಸಮಾಲೋಚನೆ ನಡೆಸಿ, ವರಿಷ್ಠರ ಎಚ್ಚರಿಕೆಗೆ ಮಣಿದು ಕೊನೆಗಳಿಗೆಯಲ್ಲಿ ನಾಮಪತ್ರ ಹಿಂದಕ್ಕೆ ಪಡೆದರು. ಮೊದಲ ಹಂತದ 14 ಕ್ಷೇತ್ರಗಳಲ್ಲೂ ಮೈತ್ರಿಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಆದರೆ ಕಾರ್ಯಕರ್ತರು ಚುನಾವಣೆಯಲ್ಲಿ ಸ್ಪರ್ಧಿಸಿರುವ ಮೈತ್ರಿ ಪಕ್ಷದ ಅಭ್ಯರ್ಥಿಗೆ ಯಾವ ರೀತಿ ಸಹಕಾರ ನೀಡುತ್ತಾರೆ ಎಂದು ಕಾದು ನೋಡಬೇಕು.

ಏಪ್ರಿಲ್ 23 ರಂದು ಎರಡನೇ ಹಂತದಲ್ಲಿ ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಈ ಕ್ಷೇತ್ರಗಳಿಗೆ ನಿನ್ನೆಯಿಂದ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭಗೊಂಡಿದೆ. ಬಿಜೆಪಿ ತನ್ನ ಉಳಿದ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿ ಗಳನ್ನು ಇಂದು ಪ್ರಕಟಿಸಿದ್ದರೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಈಗಾಗಲೇ ತಮ್ಮ ಅಭ್ಯರ್ಥಿಗಳನ್ನು ಹೆಸರಿಸಿ, ಚುನಾವಣಾ ಹೋರಾಟಕ್ಕೆ ಅಣಿಗೊಳಿಸಿದ್ದಾರೆ.