ಶೌಚಾಲಯದಲ್ಲೇ ಸೂರು ಕಂಡುಕೊಂಡ 13 ಮಂದಿ ಸದಸ್ಯರ ಕುಟುಂಬ ದೇಶದಲ್ಲಿ ಯಾವ ವಸತಿ ಯೋಜನೆ ಇದ್ದರೇನು? ಇವರ ಪಾಲಿಗಿಲ್ಲ!

ಮೈಸೂರು,ಡಿ.17(ವೈಡಿಎಸ್)- ವಾಸಿಸಲು ಸೂರಿಲ್ಲದೆ ಕುಟುಂಬವೊಂದು ಸಾರ್ವಜನಿಕರ ಶೌಚಾಲಯದಲ್ಲೇ ಆಶ್ರಯ ಪಡೆದಿರುವ ಘಟನೆ ಬೆಳಕಿಗೆ ಬಂದಿದೆ.

ರಾಜೇಂದ್ರ ನಗರದ ಕುರಿ ಮಂಡಿ ಎ ಬ್ಲಾಕಿನಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯ ದಲ್ಲೇ ಕಳೆದ 7 ವರ್ಷಗಳಿಂದ ಜೀವನ ಸಾಗಿ ಸುತ್ತಿದೆ. ಈ ಶೌಚಾಲಯದಲ್ಲಿ ಒಂದೂವರೆ ತಿಂಗಳ ಹೆಣ್ಣು ಮಗು, 95 ವರ್ಷದ ವೃದ್ಧೆ ಸೇರಿದಂತೆ 13 ಮಂದಿ ವಾಸಿಸುತ್ತಿದ್ದಾರೆ. ಇವ ರಿಗೆ ಸ್ನಾನದ ಮನೆಯೇ ಬೆಡ್‍ರೂಂ, ಮಲ-ಮೂತ್ರ ವಿಸರ್ಜನೆಯ ಕೊಠಡಿಯೇ ಅಡುಗೆ ಮನೆಯಾಗಿದ್ದು, ಎಲ್ಲರೂ ಅಲ್ಲೇ ಊಟ- ತಿಂಡಿ ಮಾಡಿ ಮಲಗುವ ಹೀನಾಯ ಸ್ಥಿತಿ ಕರುಳು ಹಿಂಡುವಂತಹ ಸಂಗತಿ.

ಈ ಹಿಂದೆ ಮನೆಯ ಸದಸ್ಯೆ ಕೃಷ್ಣಮ್ಮ, ಗಾಂಧಿನಗರದಲ್ಲಿರುವ ಷೆಡ್‍ನಲ್ಲಿ ನೆಲೆಸಿದ್ದರು. ಅದನ್ನು ತೆರವುಗೊಳಿಸಿದ ಬಳಿಕ ಕುರಿಮಂಡಿಯ ಉದ್ಯಾನವನದ ಜಾಗದಲ್ಲಿ ಸಣ್ಣದೊಂದು ಗುಡಿಸಲು ನಿರ್ಮಿಸಿಕೊಂಡು ಜೀವನ ನಡೆಸುತ್ತಿದ್ದರು. ಆದರೆ, ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಇಲ್ಲಿದ್ದ ಎಲ್ಲಾ ಗುಡಿಸಲು ವಾಸಿಗಳಿಗೆ ಮನೆಗಳನ್ನು ನಿರ್ಮಿಸಿ, ಸ್ಥಳಾಂತರ ಮಾಡಿದರು. ಆದರೆ, ಫಲಾನುಭವಿಗಳ ಆಯ್ಕೆ ಪಟ್ಟಿಯಲ್ಲಿ ಕೃಷ್ಣಮ್ಮ ಹೆಸರು ಇರಲಿಲ್ಲ. ಕೊನೆಗೆ ಮಂಡಳಿಯ ಅಧಿಕಾರಿಗಳು, ನೀವು ಕೂಡ ಗುಡಿಸಲು ತೆರವುಗೊಳಿಸಬೇಕು ಎಂದು ಸೂಚಿಸಿದ್ದಾರೆ. ಅದರಂತೆ ತೆರವು ಗೊಳಿಸಿದ್ದರು.

ನಂತರದಲ್ಲಿ ವಾಸಿಸಲು ನೆಲೆಯಿಲ್ಲದ ಕೃಷ್ಣಮ್ಮ ಅವರಿಗೆ ನೆರೆಯ ನಿವಾಸಿಗಳು, ನಿರುಪಯುಕ್ತವಾಗಿರುವ ಶೌಚಾಲಯದಲ್ಲಿಯೇ ಇರಬಹುದು ಎಂದು ಸಲಹೆ ನೀಡಿದ್ದಾರೆ. ಅದರಂತೆ ಗಿಡ-ಗಂಟಿಗಳು ಬೆಳೆದು ವಿಷ ಜಂತುಗಳ ಆವಾಸ ಸ್ಥಾನವಾಗಿದ್ದ ಶೌಚಾಲಯ ವನ್ನು ಸ್ವಚ್ಛಗೊಳಿಸಿ 13 ಮಂದಿ ವಾಸವಿದ್ದಾರೆ.