ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಅಭ್ಯರ್ಥಿಗಳಿಂದ ಬಿರುಸಿನ ಮತಯಾಚನೆ

ಮೈಸೂರು,ಫೆ.3(ಎಂಟಿವೈ)- ಮೈಸೂರು ಮಹಾ ನಗರಪಾಲಿಕೆಯ 18ನೇ ವಾರ್ಡ್‍ಗೆ ಫೆ.9ರಂದು ನಡೆ ಯಲಿರುವ ಉಪಚುನಾವಣೆ ಪ್ರಚಾರ ಕಾವೇರುತ್ತಿದ್ದು, ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳು ವಾರ್ಡ್ ವ್ಯಾಪ್ತಿಯಲ್ಲಿ ಬೆಂಬಲಿಗರೊಂದಿಗೆ ಪಾದಯಾತ್ರೆ ಮೂಲಕ ಬಿರುಸಿನಿಂದ ಮತ ಯಾಚಿಸುತ್ತಿದ್ದಾರೆ.

ಮತದಾನಕ್ಕೆ 6 ದಿನ ಬಾಕಿ ಇದ್ದು, ಮನೆ ಮನೆಗೆ ತೆರಳಿ ವಾರ್ಡ್ ಅಭಿವೃದ್ಧಿ ಮಂತ್ರದೊಂದಿಗೆ ಬೆಂಬಲ ಕೋರುತ್ತಿದ್ದಾರೆ. ಚುನಾವಣಾ ಕಣದಲ್ಲಿ ಮೂರು ಪಕ್ಷಗಳ ಅಭ್ಯರ್ಥಿಗಳು ಮಾತ್ರ ಇದ್ದು, ತ್ರಿಕೋನ ಸ್ಪರ್ಧೆ ಏರ್ಪ ಟ್ಟಿದೆ. ಶತಾಯ ಗತಾಯ ಗೆಲುವು ಸಾಧಿಸಲೇಬೇ ಕೆಂದು ಮತದಾರನ ಮನವೊಲಿಕೆ ಯತ್ನದಲ್ಲಿದ್ದಾರೆ.

ಬಿಜೆಪಿ:  ಮಂಜುನಾಥಪುರದ ಚಾಮುಂಡೇಶ್ವರಿ ದೇವಾಲಯದಲ್ಲಿ ಸೋಮವಾರ ಬೆಳಿಗ್ಗೆ ಶಾಸಕ ಎಲ್. ನಾಗೇಂದ್ರ, ಬಿಜೆಪಿ ಅಭ್ಯರ್ಥಿ ಬಿ.ವಿ.ರವೀಂದ್ರ ಬೆಂಬಲಿ ಗರೊಂದಿಗೆ ಪೂಜೆ ಸಲ್ಲಿಸಿ, ಮನೆ ಮನೆಗೆ ತೆರಳಿ ಮತಯಾಚಿಸಿದರು.  ವಾರ್ಡ್ ಅಭಿವೃದ್ಧಿಗಾಗಿ ಈ ಬಾರಿ ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿದರು.

ಈ ವೇಳೆ ಶಾಸಕ ಎಲ್.ನಾಗೇಂದ್ರ ಮಾತನಾಡಿ, ಸೋಮವಾರ ಮಂಜುನಾಥಪುರದಲ್ಲಿ ದಿನವಿಡೀ ಮತಯಾಚನೆ ಮಾಡುತ್ತೇವೆ. ಈ ಬಡಾವಣೆಯಲ್ಲಿ 3 ಸಾವಿರ ಮತದಾರರಿದ್ದು, ಪ್ರತಿ ಮನೆಗೂ ತೆರಳಿ ಪಕ್ಷದ ಅಭ್ಯರ್ಥಿ ಬಿ.ಪಿ.ರವೀಂದ್ರ ಪರ ಮತಯಾಚಿ ಸುತ್ತಿದ್ದೇವೆ. ಈಗಾಗಲೇ ಬಂಬೂಬಜಾóóರ್, ಯಾದವ ಗಿರಿಯಲ್ಲಿ ಮೊದಲ ಹಂತದ ಮತಯಾಚನೆ ಪೂರ್ಣ ಗೊಳಿಸಲಾಗಿದೆ. ವಾರ್ಡ್‍ನಲ್ಲಿ ತಲಾ 20 ಕಾರ್ಯಕರ್ತ ರುಳ್ಳ 20 ತಂಡ ರಚಿಸಲಾಗಿದ್ದು, ಮುಖಂಡರ ಪ್ರಚಾರ ಹೊರತುಪಡಿಸಿ ಈ ತಂಡದ ಸದಸ್ಯರು ಪ್ರಚಾರ ಮಾಡುತ್ತಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ  ಯೋಜನೆ, ಸಾಧನೆ ಹಾಗೂ ವಾರ್ಡ್ ಅಭಿವೃದ್ಧಿಗೆ ಕೈಗೊಳ್ಳಲಿರುವ ಯೋಜನೆಗಳನ್ನು ವಿವರಿಸಿ ಮತಯಾಚಿಸುತ್ತಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಸುಬ್ಬಯ್ಯ, ಪ್ರಮೀಳಾ, ಮುಖಂಡರಾದ ರಾಮಣ್ಣ, ಮಹೇಶ್, ಶ್ರೀವತ್ಸ, ಕೆ.ಮಾದೇಶ್, ಶಿವಣ್ಣ, ಉಮೇಶ, ಬಸವ ರಾಜು, ಕವಿತ, ಚಾಮರಾಜ ಕ್ಷೇತ್ರ ಬಿಜೆಪಿ ಅಧ್ಯಕ್ಷ ಸೋಮಶೇಖರ್ ರಾಜು ಇನ್ನಿತರರು ಉಪಸ್ಥಿತರಿದ್ದರು.

ಜೆಡಿಎಸ್: ಜೆಡಿಎಸ್ ಅಭ್ಯರ್ಥಿ ಸ್ವಾಮಿ ಸೋಮ ವಾರ ಬೆಳಿಗ್ಗೆ ಪಕ್ಷದ ಮುಖಂಡರು ಹಾಗೂ ಮಾಜಿ ಮೇಯರ್ ಆರ್.ಲಿಂಗಪ್ಪ, ಜೆಡಿಎಸ್ ನಗರಾಧ್ಯಕ್ಷ ಕೆ.ಟಿ. ಚಲುವೇಗೌಡ ಸೇರಿದಂತೆ ಇನ್ನಿತರರೊಂದಿಗೆ ಮಂಜು ನಾಥಪುರದಲ್ಲಿ ಪಾದಯಾತ್ರೆ ನಡೆಸಿ ಮತಯಾಚಿಸಿ ದರು. ಬಡಾವಣೆಯಲ್ಲಿರುವ ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮನೆ ಮನೆಗೆ ತೆರಳಿ ಈ ಬಾರಿ ಜೆಡಿಎಸ್ ಅಭ್ಯರ್ಥಿಯನ್ನು ಬೆಂಬ ಲಿಸುವಂತೆ ಮನವಿ ಮಾಡಿದರು.

ಈ ವೇಳೆ ಮಾಜಿ ಮೇಯರ್ ಆರ್.ಲಿಂಗಪ್ಪ ಮಾತನಾಡಿ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಆಡಳಿತ ಅವಧಿಯಲ್ಲಿ ಎಲ್ಲಾ ವರ್ಗದ ಜನರ ಹಿತ ಕಾಯುವ ನಿಟ್ಟಿನಲ್ಲಿ ಹಲವಾರು ಯೋಜನೆ ಜಾರಿ ಗೊಳಿಸಿದರು. 18ನೇ ವಾರ್ಡ್ ಸೇರಿದಂತೆ ಚಾಮರಾಜ ಕ್ಷೇತ್ರದ ಅಭಿವೃದ್ಧಿಗೂ ಕೊಡುಗೆ ನೀಡಿದ್ದರು. ಈ ಹಿನ್ನೆಲೆ ಯಲ್ಲಿ ಜೆಡಿಎಸ್ ಬೆಂಬಲಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಚಾಮರಾಜ ಕ್ಷೇತ್ರದ ಅಧ್ಯಕ್ಷ ಮಂಜುನಾಥ್, ಎನ್.ಆರ್.ಕ್ಷೇತ್ರದ ಅಧ್ಯಕ್ಷ ಎಂ.ಎನ್. ರಾಮು, ಮುಖಂಡರಾದ ಶ್ರೀನಿವಾಸ್‍ಗೌಡ, ವಿನಯ್, ಬೋರೇಗೌಡ ಇನ್ನಿತರರು ಉಪಸ್ಥಿತರಿದ್ದರು.

ಕಾಂಗ್ರೆಸ್: ಕಾಂಗ್ರೆಸ್ ಅಭ್ಯರ್ಥಿಯಾಗಿ ಆರ್.ರವೀಂದ್ರ ಕುಮಾರ್ ಪಕ್ಷದ ಸ್ಥಳೀಯ ಮುಖಂಡರು, ಮಾಜಿ ಮೇಯರ್‍ಗಳೊಂದಿಗೆ ಬಿರುಸಿನ ಮತಯಾಚನೆ ನಡೆಸಿ ದರು. ಬೆಳಿಗ್ಗೆ ಯಾದವಗಿರಿ, ಬಂಬೂಬಜಾóóರ್‍ನಲ್ಲಿ ಮನೆ ಮನೆಗೆ ತೆರಳಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ನಗರಾಭಿವೃದ್ಧಿಗೆ ನೂರಾರು ಕೋಟಿ ರೂ. ಬಿಡು ಗಡೆ ಮಾಡುವ ಮೂಲಕ ಜನರ ಹಿತ ಕಾಪಾಡಲು ಬದ್ಧತೆ ಪ್ರದರ್ಶಿಸಿದ್ದರು. ಅಲ್ಲದೆ ಕೊಳಚೆ ಪ್ರದೇಶದಲ್ಲಿ ವಾಸಿಸುತ್ತಿದ್ದವರಿಗೆ ಮನೆ ಮಂಜೂರು ಮಾಡುವ ಮೂಲಕ ನಾನಾ ಯೋಜನೆ ಪ್ರಕಟಿಸಿದ್ದರು. ಸಾಮಾಜಿಕ ನ್ಯಾಯದ ಆಧಾರದಲ್ಲಿ ಕಾಂಗ್ರೆಸ್ ಎಲ್ಲಾ ವರ್ಗದ ಜನರ ಹಿತವನ್ನು ಬಯಸುವ ಪಕ್ಷವಾಗಿದೆ. ಈ ಹಿನ್ನೆಲೆಯಲ್ಲಿ ಉಪಚುನಾವಣೆಯಲ್ಲಿ ನನ್ನ ಗೆಲ್ಲಿಸುವಂತೆ ಮನವಿ ಮಾಡಿದರು. ಮಾಜಿ ಉಪ ಮೇಯರ್ ಪುಷ್ಪವಲ್ಲಿ, ಮುಖಂಡ ಕವೀಶ್‍ಗೌಡ, ವೆಂಕಟೇಶ್, ಬ್ಲಾಕ್ ಅಧ್ಯಕ್ಷ ಕುಮಾರ್, ಬಸವರಾಜು, ರಮೇಶ್, ಚೌಹಳ್ಳಿ ರಾಚಪ್ಪ, ಮಂಜುಳಾ ಇನ್ನಿತರರು ಈ ವೇಳೆ ಉಪಸ್ಥಿತರಿದ್ದರು.