ಅಂತರಿಕ್ಷ ಯಾನಕ್ಕೆ ವಾಯುಪಡೆಯ ನಾಲ್ವರು ಪೈಲಟ್‍ಗಳ ಆಯ್ಕೆ: ಇಸ್ರೋ

ನವದೆಹಲಿ, ಜ.2- ಭಾರತೀಯ ಬಾಹ್ಯಾಕಾಶ ಸಂಸ್ಥೆ 2022ರಲ್ಲಿ ಕೈಗೊಳ್ಳಲಿರುವ ಪ್ರಪ್ರಥಮ ಮಾನವ ಸಹಿತ ಅಂತರಿಕ್ಷ ಯಾನಕ್ಕೆ ಭಾರತೀಯ ವಾಯುಪಡೆಯ ನಾಲ್ವರು ಪೈಲಟ್‍ಗಳು ಆಯ್ಕೆಯಾಗಿದ್ದಾರೆ ಎಂದು ಇಸ್ರೋ ಮುಖ್ಯಸ್ಥ ಕೆ. ಶಿವನ್ ತಿಳಿಸಿದ್ದಾರೆ. ರಾಷ್ಟ್ರೀಯ ಸುದ್ದಿ ವಾಹಿನಿ ಜೊತೆ ಮಾತನಾಡಿರುವ ಶಿವನ್, ಆಯ್ಕೆಯಾದ ನಾಲ್ವರು ಪೈಲಟ್‍ಗಳಿಗೆ ಭಾರತ ಮತ್ತು ರಷ್ಯಾದಲ್ಲಿ ವೈದ್ಯಕೀಯ ತಪಾಸಣೆಗಳನ್ನೂ ಮಾಡಲಾಗಿದೆ. ಅಲ್ಲಿ ಅವರಿಗೆ ತರಬೇತಿಯನ್ನೂ ನೀಡಲಾಗುತ್ತಿದೆ. ಅಲ್ಲದೆ, ಮಾನವ ಸಹಿತ ಅಂತರಿಕ್ಷ ಯಾನದ ರೂಪುರೇಷೆ ಈಗಾಗಲೇ ಸಿದ್ಧವಾಗಿದೆ ಎಂದು ಹೇಳಿದ್ದಾರೆ.

ಅಂತರಿಕ್ಷ ಯಾನಕ್ಕೆ ಆಯ್ಕೆಯಾಗಿರುವ ನಾಲ್ವರು ಪೈಲಟ್‍ಗಳು ಯಾರು ಎಂಬ ಗುಟ್ಟನ್ನು ಶಿವನ್ ಅವರು ಬಿಟ್ಟುಕೊಟ್ಟಿಲ್ಲ. ಹೀಗಾಗಿ ಮಾಹಿತಿ ರಹಸ್ಯವಾಗಿಯೇ ಉಳಿದಿದೆ. ಆರೋಗ್ಯ, ಸದೃಢರಾಗಿರುವ ಕಾರಣಕ್ಕೆ ಪೈಲಟ್‍ಗಳನ್ನು ಈ ಮಹತ್ವದ ಕಾರ್ಯಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

ಅಂತರಿಕ್ಷ ಯಾನಕ್ಕೆ ಸಿದ್ಧರಿರುವವರ ದೊಡ್ಡ ಪಟ್ಟಿಯೇ ಇಸ್ರೋದ ಬಳಿ ಇದೆ. ಈಗ ಆಯ್ಕೆಯಾಗಿರುವ ನಾಲ್ವರಲ್ಲಿ ಯಾವುದೇ ಸಮಸ್ಯೆ ಕಂಡು ಬಂದರೆ, ಪಟ್ಟಿಯ ಕುರಿತು ಚರ್ಚೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಗಗನಯಾನ ಯೋಜನೆಯನ್ನು ಈ ವರ್ಷವೇ ಪೂರ್ಣಗೊಳಿಸಬೇಕು ಎಂಬುದು ನಮ್ಮ ಗುರಿ. ಆದರೆ, ಬಹುತೇಕ ಮುಂದಿನ ವರ್ಷ ಅದು ಸಾಧ್ಯವಾಗಬಹುದು ಎಂದಿದ್ದಾರೆ.

ಪ್ರಧಾನಿ ಅಪ್ಪುಗೆ: ಚಂದ್ರಯಾನ ವಿಫಲವಾದ ಸಂದರ್ಭದಲ್ಲಿ ಪ್ರಧಾನಿ ಮೋದಿ ನನ್ನನ್ನು ಅಪ್ಪಿಕೊಂಡರು. ಅವರ ಅಪ್ಪುಗೆ ನನ್ನಲ್ಲಿ ನಿರಾಳ ಭಾವ ಮೂಡಿಸಿತ್ತು ಎಂದು ಇಸ್ರೋ ಮುಖ್ಯಸ್ಥ ಕೆ. ಶಿವನ್ ಹೇಳಿದ್ದಾರೆ. ಮೋದಿ ಅವರ ಈ ನಡೆ ಮುಂದೆ ಬಾಹ್ಯಾಕಾಶದಲ್ಲಿ ಸಾಧನೆ ಮಾಡಲು ನನಗೆ ಪ್ರೇರಣಾದಾಯಕವಾಯಿತು. ಆ ಘಟನೆ ನಂತರ ನಾವು ಮತ್ತಷ್ಟು ಪರಿಣಾಮಕಾರಿಯಾಗಿ ಬಾಹ್ಯಾಕಾಶ ಅಧ್ಯಯನದಲ್ಲಿ ತೊಡಗಿ ದ್ದೇವೆ. ಮತ್ತಷ್ಟು ಸಾಧನೆಯತ್ತ ಮುಖ ಮಾಡಿದ್ದೇವೆ ಎಂದು ಶಿವನ್ ಹೇಳಿದ್ದಾರೆ.