ವೋಟರ್ ಐಡಿಗೆ ಆಧಾರ್ ಜೋಡಣೆ

ನವದೆಹಲಿ, ಆ.18- ವೋಟರ್ ಐಡಿಗೆ ಆಧಾರ್ ಸಂಖ್ಯೆ ಜೋಡಣೆ ಕಡ್ಡಾಯ ಮಾಡಿ ಎಂದು ಚುನಾವಣಾ ಆಯೋಗವು ಕೇಂದ್ರ ಕಾನೂನು ಸಚಿವಾಲಯಕ್ಕೆ ಪತ್ರ ಬರೆದಿದೆ. ಸದ್ಯ ದೇಶಾದ್ಯಂತ ನಕಲಿ ವೋಟರ್ ಐಡಿಗಳ ದಂಧೆ ನಡೆಯುತ್ತಿದೆ. ಇಲ್ಲಿನ ಜನ ಒಂದಕ್ಕಿಂತ ಹೆಚ್ಚು ಮತದಾರರ ಗುರುತಿನ ಚೀಟಿ ಹೊಂದಿರುತ್ತಾರೆ. ಈ ನಕಲಿ ವೋಟರ್ ಐಡಿಗಳ ಜಾಲವನ್ನು ತಪ್ಪಿಸಲು ಇದು ಅನಿವಾರ್ಯ. ಕೂಡಲೇ ವೋಟರ್ ಐಡಿಗೆ ಆಧಾರ್ ಜೋಡಣೆ ಮಾಡುವಂತಹ ಕಾನೂನು ತನ್ನಿ ಎಂದು ಆಯೋಗ ಪತ್ರದಲ್ಲಿ ಬರೆದಿದೆ. ಇನ್ನು ಮತದಾರರ ಗುರು ತಿನ ಚೀಟಿಗೆ ಅರ್ಜಿ ಸಲ್ಲಿಸುವ ವೇಳೆ ಆಧಾರ್ ಸಂಖ್ಯೆ ಜೋಡಣೆ ಕಡ್ಡಾಯ ಮಾಡ ಬೇಕು. ಈ ಮೂಲಕ ಒಂದಕ್ಕಿಂತ ಹೆಚ್ಚು ವೋಟರ್ ಐಡಿ ಹೊಂದಿರುವ ಜನರಿಗೆ ಬುದ್ಧಿ ಕಲಿಸಬೇಕು. ಇದಕ್ಕಾಗಿ ಕಾನೂನು ಬದಲಾವಣೆ ತರಬೇಕು. ಸಂಸತ್‍ನಲ್ಲಿ ಈ ಕಾಯ್ದೆಗೆ ಜನಪ್ರತಿನಿಧಿಗಳು ತಿದ್ದುಪಡಿ ತರಬೇಕು ಎಂದು ಆಯೋಗವು ಒತ್ತಾಯಿಸಿದೆ.
ಚುನಾವಣೆಗಳಲ್ಲಿ ನಕಲಿ ಮತದಾನಕ್ಕೆ ಕಡಿವಾಣ ಹಾಕಲು ಕೇಂದ್ರ ಚುನಾವಣಾ ಆಯೋಗ ಈ ಮಹತ್ವದ ತೀರ್ಮಾನ ಕೈಗೊಂಡಿದೆ. ಮತದಾರರ ಗುರುತಿನ ಚೀಟಿಗೆ 12 ಸಂಖ್ಯೆಗಳ ‘ಆಧಾರ್’ ಜೋಡಣೆ ಮಾಡಲು ಮುಂದಾಗಿದೆ ಎನ್ನಲಾಗಿದೆ. ಈ ಹಿಂದೆಯೇ ಆಯೋಗವು ಮತದಾರರ ಗುರುತಿನ ಚೀಟಿಗೆ ಆಧಾರ್ ಜೋಡಿಸುವ ಅಭಿಯಾನಕ್ಕೆ ಚಾಲನೆ ನೀಡಿತ್ತು. ಆದರೆ, ಈ ಕ್ರಮಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿತ್ತು.