ಆರ್‍ಟಿಓ ಕಚೇರಿ ಮೇಲೆ ಎಸಿಬಿ ದಾಳಿ ಪ್ರಕರಣ: ಹೆಚ್ಚುವರಿ ಹಣ ಪತ್ತೆ: 15 ಅಧಿಕಾರಿ, ನೌಕರರಿಗೆ ನೋಟೀಸ್ ಜಾರಿ

ಚಾಮರಾಜನಗರ, ಫೆ.19(ಎಸ್‍ಎಸ್)- ಚಾಮರಾಜನಗರದ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‍ಟಿಓ) ಮೇಲೆ ಭ್ರಷ್ಟಚಾರ ನಿಗ್ರಹ ದಳ (ಎಸಿಬಿ)ದ ಅಧಿಕಾರಿಗಳು ದಾಳಿ ನಡೆಸಿದಾಗ ಪತ್ತೆಯಾದ ಹೆಚ್ಚುವರಿ ಹಣದ ಬಗ್ಗೆ ವಿವರಣೆ ನೀಡುವಂತೆ ಕಚೇರಿಯ ಅಧಿಕಾರಿಗಳು, ನೌಕರರು ಮತ್ತು ಏಜೆಂಟ ರಿಗೆ ಎಸಿಬಿ ನೋಟಿಎಸ್ ನೀಡಿದೆ.

ದಾಳಿ ನಡೆಸಿ ತಪಾಸಣೆ ನಡೆಸಿದಾಗ ಹೆಚ್ಚುವರಿಯಾಗಿ 1.12 ಲಕ್ಷ ರೂ. ಪತ್ತೆ ಆಗಿದೆ ಎಂದು ಮೊದಲಿಗೆ ಹೇಳಲಾಗಿತ್ತು. ಆದರೆ ಅಧಿಕೃತ ಶುಲ್ಕ (ರಶೀದಿ) ಸಂಗ್ರಹ ವನ್ನು ಹೊರತುಪಡಿಸಿದಾಗ ಅಂತಿಮ ವಾಗಿ 69,555 ರೂ. ಹೆಚ್ಚುವರಿ ಹಣ ಪತ್ತೆ ಯಾಗಿದೆ ಎಂದು ಎಸಿಬಿ ಇನ್ಸ್‍ಪೆಕ್ಟರ್ ಶ್ರೀಕಾಂತ್ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

ಅಧಿಕೃತ ಶುಲ್ಕ ಸಂಗ್ರಹವನ್ನು ಹೊರತು ಪಡಿಸಿ ಹೆಚ್ಚುವರಿಯಾಗಿ ಕಚೇರಿಯ ಅಧಿಕಾರಿ, ನೌಕರರ ಮತ್ತು ಏಜೆಂಟರಿಂದ ಹಣ ಪತ್ತೆ ಆಗಿರುವುದರಿಂದ 15 ಮಂದಿಗೆ ನೋಟಿಸ್ ಜಾರಿ ಮಾಡಲಾಗಿದೆ. ಈ ನೋಟಿಸ್‍ಗೆ ಅವರಿಂದ ಉತ್ತರ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗು ವುದು ಎಂದು ಅವರು ತಿಳಿಸಿದರು.

ಆರ್‍ಟಿಓ ಕಚೇರಿಯ ಮೋಟಾರು ನಿರೀಕ್ಷಕ ಸೈಫುದ್ದೀನ್, ಎಸ್‍ಡಿಸಿ ದೀಪಾ, ಹೋಂಗಾರ್ಡ್ ಶಿವಕುಮಾರ್, ಕ್ಲರ್ಕ್ ಜಯಮ್ಮ, ದ್ವಿತೀಯ ದರ್ಜೆ ಸಹಾಯಕ ರಾಜಣ್ಣ, ಶೀಘ್ರಲಿಪಿಗಾರರಾದ ಶಶಿಕಲಾ, ಏಜೆಂಟ್‍ಗಳಾದ ಶಿವಲಿಂಗಯ್ಯ, ನವೀನ್, ಪಾಷ, ರಮೀಜ್, ವಸೀರ್ ಅಹಮದ್ ಸೇರಿದಂತೆ ಒಟ್ಟು 15 ಮಂದಿಗೆ ನೋಟಿಸ್ ಜಾರಿಗೊಳಿಸಿರುವುದಾಗಿ ಶ್ರೀಕಾಂತ್ ತಿಳಿಸಿದರು. ಆರ್‍ಟಿಓ ಕಚೇರಿಯಲ್ಲಿ ವ್ಯಾಪಕ ಭ್ರಷ್ಟಚಾರ ನಡೆಯುತ್ತಿದೆ. ಮಧ್ಯ ವರ್ತಿಗಳು ಇಲ್ಲದೆ ಯಾವುದೇ ಕೆಲಸ-ಕಾರ್ಯಗಳು ಆಗುವುದಿಲ್ಲ ಎಂಬ ಸಾರ್ವಜನಿಕರ ಆರೋಪದ ಮೇರೆಗೆ ಕಚೇರಿಗೆ ಎಸಿಬಿ ಅಧಿಕಾರಿಗಳು ಸೋಮ ವಾರ ಸಂಜೆ ದಿಢೀರ್ ದಾಳಿ ನಡೆಸಿದರು.