ಮೊಬೈಲ್ ಸಂಭಾಷಣೆಯಲ್ಲಿ ಮೈ ಮರೆತ ಟಿಪ್ಪರ್ ಚಾಲಕ ನೆಲಕ್ಕುರುಳಿದ ವಿದ್ಯುತ್ ಕಂಬಗಳು, ಟ್ರಾನ್ಸ್‍ಫಾರ್ಮರ್

ವಿದ್ಯುತ್ ಕಡಿತಗೊಂಡಿದ್ದರಿಂದ ತಪ್ಪಿದ್ದ ಭಾರೀ ಅನಾಹುತ
ಹುಣಸೂರು: ಟಿಪ್ಪರ್ ಚಾಲಕನೋರ್ವನ ಬೇಜವಾಬ್ದಾರಿತನದಿಂದ ನಗರದಲ್ಲಿ ಟ್ರಾನ್ಸ್‍ಫಾರ್ಮರ್ ಸೇರಿದಂತೆ 10 ವಿದ್ಯುತ್ ಕಂಬಗಳು ಧರೆಗುರುಳಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಭಾರೀ ಅವಘಡ ತಪ್ಪಿದಂತಾಗಿದೆ.

ನಗರದ ಎಪಿಎಂಸಿ ಬಳಿಯಲ್ಲಿನ ದಿವಂಗತ ದೇವರಾಜ ಅರಸರ ಪುತ್ಥಳಿ ಬಳಿ ರಾಷ್ಟ್ರೀಯ ಹೆದ್ದಾರಿ-275ರಲ್ಲಿ ಬೆಳಿಗ್ಗೆ 8 ಗಂಟೆ ಟಿಪ್ಪರ್ ಟ್ರ್ಯಾಲಿಗೆ ಸಿಕ್ಕಿಹಾಕಿಕೊಂಡ ವಿದ್ಯುತ್ ಲೈನ್(ವಿದ್ಯುತ್ ತಂತಿ) ಎಳೆದೊಯ್ದ ಕಾರಣ ವಿದ್ಯುತ್ ಟಿಸಿ, ಹತ್ತು ವಿದ್ಯುತ್ ಕಂಬಗಳು ನೆಲಕ್ಕುರುಳಿರುವೆ. ಸದ್ಯ ಯಾವುದೇ ಸಾವು-ನೋವು ಸಂಭವಿಸಿಲ್ಲ.

ಘಟನೆ ವಿವರ: ಕೆ.ಆರ್.ನಗರದ ಶಫಿ ಅವರಿಗೆ ಸೇರಿದ ಟಿಪ್ಪರ್(ಕೆಎ41, 6233)ಅನ್ನು ತಾಲೂಕಿನ ಹನಗೂಡು ಗ್ರಾಮದ ಕೃಷ್ಣೇಗೌಡರ ಪುತ್ರ, ಚಾಲಕ ನಾಗ ಚಲಾಯಿಸುತ್ತಿದ್ದ. ಎಂದಿನಂತೆ ಇಂದು ಬೆಳಿಗ್ಗೆ ಲಾರಿಗೆ ಡಿಸೇಲ್ ತುಂಬಿಸಲು ಎಪಿಎಂಸಿ ಬಳಿಯಲ್ಲಿರುವ ಶ್ರೀ ಮೈಲಾರಲಿಂಗೇಶ್ವರ ಪೆಟ್ರೋಲ್ ಬಂಕ್‍ಗೆ ಬಂದ ನಾಗ, ಟ್ಟಿಪ್ಪರ್‍ನ ಟ್ರ್ಯಾಲಿ ಮೇಲಕ್ಕೆತ್ತಿ ಡಿಸೇಲ್ ತುಂಬಿಸಿದ್ದಾನೆ. ಈ ವೇಳೆ ಮನೆಯಿಂದ ಫೋನ್ ಕರೆ ಬಂದಿದೆ. ಫೋನ್ ಸಂಭಾಷಣೆಯಲ್ಲಿ ಮೈಮರೆತು ಟಿಪ್ಪರ್‍ನ ಟ್ರ್ಯಾಲಿ ಕೆಳಗಿಳಿಸದೆ ಚಾಲಕ ನಾಗ ಹಾಗೇ ವಾಹನ ಚಲಾಯಿಸಿಕೊಂಡು ಬಂದಿದ್ದಾನೆ.

ಉರುಳಿದ ಟಿಸಿ, 10 ವಿದ್ಯುತ್ ಕಂಬ:ದೇವರಾಜ ಅರಸರ ಪುತ್ಥಳಿ ಬಳಿ ರಸ್ತೆಗೆ ಅಡ್ದಲಾಗಿ ಹಾದುಹೋಗಿದ್ದ ವಿದ್ಯುತ್ ಲೈನ್ ತಂತಿ ಟಿಪ್ಪರ್‍ನ ಟ್ರ್ಯಾಲಿಗೆ ಸಿಲುಕಿ ತೊಂಡಾಗಿದೆ. ಇದನ್ನು ಗಮನಿಸದ ಚಾಲಕ ಹಾಗೇ ವಾಹನ ಚಲಾಯಿಸಿಕೊಂಡು ಬಂದಿದ್ದಾನೆ. ಪರಿಣಾಮ ಒಂದು ಟಿಸಿ, ಹತ್ತು ವಿದ್ಯುತ್ ಕಂಬಗಳು ನೆಲಕುರುಳಿವೆ.

ದಿಕ್ಕೆಟ್ಟ ಜನತೆ: ಘಟನೆ ಸಂಭವಿಸುತ್ತಿದ್ದಂತೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರು, ಚಾಲಕರು, ಸಾರ್ವಜನಿಕರು ಭಯಬೀತರಾಗಿ ದಿಕ್ಕು ಕಾಣದೆ ಸ್ಥಳದಿÀಂದ ದೌಡಾಯಿಸಲು ಆರಂಭಿಸಿದರು. ಟಿಪ್ಪರ್‍ಗೆ ವಿದ್ಯುತ್ ತಂತಿ ತಗುಲುತ್ತಿದ್ದಂತೆ ವಿದ್ಯುತ್ ಸಂಪರ್ಕ ಕಡಿದು ಹೋಗಿದ್ದರಿಂದ ಯಾವುದೇ ಅನಾಹುತಗಳು ಸಂಭವಿಸಿಲ್ಲ. ಘಟನೆ ಬಗ್ಗೆ ತಿಳಿದ ಬಳಿಕ ತಕ್ಷಣ ಚಾಲಕ ನಾಗ ವಾಹನ ಅಲ್ಲೇ ಬಿಟ್ಟು ಪರಾರಿಯಗಿದ್ದಾನೆ.

ಸೆಸ್ಕ್‍ನಿಂದ ತಕ್ಷಣ ದುರಸ್ತಿ: ಸುದ್ದಿ ತಿಳಿಯುತ್ತಿದ್ದಂತೆ ಸೆಸ್ಕ್ ಎಇಇ ಸಿದ್ದಪ್ಪ, ಎಇ ಪುರುಷೋತ್ತಮ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ ಪರಿಶೀಲಿಸಿದರು. ಬಳಿಕ ಟಿಪ್ಪರ್‍ಅನ್ನು ವಶಕ್ಕೆ ಪಡೆದರಲ್ಲದೆ, ಘಟನೆಯಿಂದ ನೆಲಕ್ಕುರುಳಿರುವ ಟಿಸಿ, ವಿದ್ಯುತ್ ಕಂಬಗಳನ್ನು ಬದಲಿಸಿ ವಿದ್ಯುತ್ ಮಾರ್ಗ ದುರಸ್ತಿಪಡಿಸಿದರು.

ಈ ಸಂಬಂಧ ನಗರ ಪೆÇಲೀಸರು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದು, ಚಾಲಕ ನಾಗ ನಗರ ಠಾಣೆಗೆ ಹಾಜರಾಗಿ ಶರಣಾಗಿದ್ದಾನೆ ಎಂದು ಪೆÇಲೀಸರು ತಿಳಿಸಿದ್ದಾರೆ.

ಘಟನೆ ವೇಳೆ ವಿದ್ಯುತ್ ಸಂಪರ್ಕ ಕಡಿತವಾಗದಿದ್ದರೆ ಭಾರೀ ಅನಾಹುತವೇ ಸಂಭವಿಸುತ್ತಿತ್ತು. ಇದರಿಂದ ವಿದ್ಯುತ್ ಮಂಡಳಿಗೆ ಅಂದಾಜು 4 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ. ಈ ನಷ್ಟವನ್ನು ಲಾರಿ ಮಾಲೀಕರಿಂದ ವಸೂಲಿ ಮಾಡಲಾಗುವುದು.
-ಸಿದ್ದಪ್ಪ, ಸೆಸ್ಕ್ ಎಇಇ,