ನಮಗೆ ಇದೇ ಖಾತೆ ಬೇಕು…

ಬೆಂಗಳೂರು, ಆ.22(ಕೆಎಂಶಿ)-ವರಿಷ್ಠರ ಜೊತೆ ಚರ್ಚಿಸಿ ನೂತನ ಸಚಿ ವರಿಗೆ ಖಾತೆ ಹಂಚಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಮತ್ತಿತರರನ್ನು ಭೇಟಿಯಾ ಗುತ್ತೇನೆ. ಈ ವೇಳೆ ನೂತನ ಸಚಿವರಿಗೆ ಖಾತೆ ನೀಡುವ ಸಂಬಂಧ ಚರ್ಚಿಸಿ ಅಂತಿಮಗೊಳಿಸಲಾಗುವುದು ಎಂದರು.

ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸಚಿವರು ಪ್ರವಾಸ ನಡೆಸಿ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದ್ದಾರೆ. ಅತಿವೃಷ್ಟಿಯಿಂದ ಹಾನಿಗೊಳ ಗಾಗಿರುವವರಿಗೆ ಸರ್ಕಾರ ಎಲ್ಲಾರೀತಿಯ ನೆರವು ನೀಡಲಿದೆ. ಯಾರೊಬ್ಬರೂ ಆತಂಕಕ್ಕೆ ಒಳಗಾಗಬಾರದು ಎಂದು ಮನವಿ ಮಾಡಿದರು. ಕೇಂದ್ರದಿಂದ ನಮಗೆ ಎಲ್ಲಾ ರೀತಿಯ ನೆರವು ಸಿಗುತ್ತದೆ. ಒಂದೆರಡು ದಿನಗಳಲ್ಲಿ  ಕೇಂದ್ರ ಅಧ್ಯಯನ ತಂಡ ಆಗಮಿಸುವ ಸಾಧ್ಯತೆ ಇದೆ. ಅತೀ ಶೀಘ್ರ ದಲ್ಲಿ ರಾಜ್ಯಕ್ಕೆ  ಕೇಂದ್ರ ದಿಂದ ಪರಿಹಾರ ಹಣ ಬಿಡುಗಡೆ ಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿ ಸಿದರು. ಈ ಮಧ್ಯೆ ಕೆಲವು ಸಚಿವರು ಪ್ರಭಾವಿ ಖಾತೆಗಳಿಗೆ ಬೇಡಿಕೆ ಇಟ್ಟಿದ್ದಾರೆ. ಇವರ ಜೊತೆ ಅನರ್ಹ ಶಾಸಕರು ತಮಗೂ ಇಂತಹ ಖಾತೆ ಗಳನ್ನೇ ಮೀಸಲಿಟ್ಟಿರಬೇಕು ಎಂದು ಮುಖ್ಯ ಮಂತ್ರಿಯವರ ಮೇಲೆ ಒತ್ತಡ ಹೇರಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ವರಿಷ್ಠರೇ ತೀರ್ಮಾನ ತೆಗೆದುಕೊಳ್ಳಲಿ ಎಂಬ ನಿರ್ಧಾ ರಕ್ಕೆ  ಯಡಿಯೂರಪ್ಪ ಬಂದಿದ್ದಾರೆ.

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ತಮಗೆ ಲೋಕೋಪ ಯೋಗಿ ಖಾತೆ ಬೇಕಂತೆ, ನೀವು ಗೃಹ ಖಾತೆ ವಹಿಸಿಕೊಳ್ಳಿ ಎಂದರೂ ಬೇಡ ವೆನ್ನುತ್ತಿದ್ದಾರೆ. ಆರ್.ಅಶೋಕ್ ಅವರಿಗೂ ಗೃಹ ಖಾತೆ ಬೇಡವಂತೆ, ಇಂಧನ ಇಲಾಖೆ ಕೊಡಿ ಎನ್ನುತ್ತಿದ್ದಾರೆ.

ಬಿ.ಶ್ರೀರಾಮುಲು ಅವರು ತಮಗೆ ಕಂದಾಯ ಖಾತೆ ಬೇಕು, ಇಷ್ಟೆಲ್ಲದರ ನಡುವೆ ಶಾಸಕ ಸ್ಥಾನದಿಂದ ಅನರ್ಹ ಗೊಂಡಿರುವ ರಮೇಶ್ ಜಾರಕಿಹೊಳಿ ಅವರು,ತಮಗೆ ಜಲಸಂಪನ್ಮೂಲ ಖಾತೆಯೇ ಬೇಕು. ಹೀಗಾಗಿ ನಮ್ಮ ವಿಷಯ ಇತ್ಯರ್ಥವಾಗುವವರೆಗೆ ಅದನ್ನು ಯಾರಿಗೂ ಕೊಡಬೇಡಿ ಎಂದು ಯಡಿಯೂರಪ್ಪ ಅವರನ್ನು ಒತ್ತಾಯ ಮಾಡಿದ್ದಾರೆ.

ಈ ಹಿಂದೆ ಅಸ್ತಿತ್ವದಲ್ಲಿದ್ದ ಸರ್ಕಾರದಲ್ಲಿ ತಮ್ಮ ಕಡುವೈರಿ ಡಿ.ಕೆ.ಶಿವಕುಮಾರ್ ಜಲ ಸಂಪನ್ಮೂಲ ಸಚಿವರಾಗಿದ್ದುದನ್ನು ಗಮನದಲ್ಲಿಟ್ಟುಕೊಂಡಿರುವ ಅವರು ಸದರಿ ಖಾತೆಯನ್ನು ಪಡೆಯುವ ಮೂಲಕ ಟಿಟ್ ಫಾರ್ ಟ್ಯಾಟ್‍ಗೆ ಮುಂದಾಗಿದ್ದಾರೆ ಎನ್ನಲಾಗಿದೆ.