ಕೊಲಂಬಿಯಾ ಏಷಿಯಾ ಆಸ್ಪತ್ರೆ ವೈದ್ಯರ ಸಾಧನೆ

ಮೈಸೂರು:ಕಿಡ್ನಿ ವೈಫಲ್ಯದ ಎರಡು ಪ್ರಕರಣಗಳಲ್ಲಿ ರಕ್ತದ ಗುಂಪು ಹೊಂದಾಣಿಕೆಯಾಗದಿದ್ದರೂ ಅವರ ಪತ್ನಿಯರೇ ನೀಡಿದ ಕಿಡ್ನಿಯನ್ನು ಯಶಸ್ವಿಯಾಗಿ ಕಿಡ್ನಿ ಕಸಿ ಮಾಡುವ ಮೂಲಕ ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆ ಸಾಧನೆ ಮಾಡಿದೆ ಎಂದು ಆಸ್ಪತ್ರೆಯ ಕಿಡ್ನಿ ತಜ್ಞ ಡಾ.ಪಿ.ಎಂ.ಉತ್ತಪ್ಪ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಮಂಡ್ಯದ ಉದ್ಯಮಿ ರಾಮಕೃಷ್ಣ ಮತ್ತು ಮೈಸೂರಿನ ನಿವೃತ್ತ ಎಲ್‍ಐಸಿ ಏಜೆಂಟ್ ಕೋದಂಡರಾಮಯ್ಯ ಅವರಿಗೆ ಕಿಡ್ನಿ ವೈಫಲ್ಯವಾಗಿತ್ತು. ಚಿಕಿತ್ಸೆಗೆ ಬಂದ ಅವರಿಗೆ ಕಿಡ್ನಿ ಕಸಿ ಅನಿವಾರ್ಯವಾಗಿತ್ತು. ಈ ಇಬ್ಬರು ರೋಗಿಗಳ ಪತ್ನಿಯರೇ ತಮ್ಮ ಪತಿಗೆ ಕಿಡ್ನಿ ದಾನ ಮಾಡಲು ಮುಂದಾದರು. ಆದರೆ ಪತಿ, ಪತ್ನಿ ಇಬ್ಬರ ರಕ್ತದ ಗುಂಪು ಬೇರೆಯಾಗಿದ್ದರಿಂದ ಹೊಂದಾಣಿಕೆಯಾಗುತ್ತಿರಲಿಲ್ಲ. ಇಂತಹ ಸಂದರ್ಭದಲ್ಲಿ ಕಿಡ್ನಿ ಕಸಿ ಮಾಡಿದರೆ ರೋಗಿಯ ದೇಹ ಅದನ್ನು ತಿರಸ್ಕರಿಸುವ ಸಾಧ್ಯತೆಯೇ ಹೆಚ್ಚು. ಆದ್ದರಿಂದ ಇದನ್ನು ವಿಶಿಷ್ಟ ವಿಧಾನದ ಮೂಲಕ ಇಬ್ಬರಲ್ಲಿಯೂ ಆಂಟಿಬಾಡಿಸ್‍ಗಳನ್ನು ಹಂತಹಂತ ವಾಗಿ ಕಡಿಮೆಗೊಳಿಸಿ, ಅವು ಮತ್ತೆ ಉತ್ಪಾದನೆಯಾಗದಂತೆ ಚಿಕಿತ್ಸೆ ನೀಡಿದ ಬಳಿಕ ಕಸಿ ಮಾಡಿದ ಮೂತ್ರಪಿಂಡವನ್ನು ದೇಹ ತಿರಸ್ಕರಿಸುವುದಿಲ್ಲ ಎಂಬುದನ್ನು ಖಾತರಿಪಡಿಸಿ ಕೊಂಡು ಕಿಡ್ನಿ ಕಸಿ ಮಾಡುವುದರಲ್ಲಿ ಯಶಸ್ವಿಯಾದೆವು. ಇಂತಹ ವಿಶಿಷ್ಟ ವಿಧಾನದ ಶಸ್ತ್ರಚಿಕಿತ್ಸೆ ಮೈಸೂರಿನಲ್ಲಿಯೇ ಮೊದಲ ಬಾರಿಗೆ ನಡೆಸಲಾಗಿದೆ ಎಂದು ತಿಳಿಸಿದರು.

ಇದೀಗ ಇಬ್ಬರೂ ರೋಗಿಗಳು ಸಂಪೂರ್ಣ ಆರೋಗ್ಯವಾಗಿದ್ದು ಎಲ್ಲರಂತೆ ಜೀವನ ನಡೆಸುವಂತಾಗಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಚಿಕಿತ್ಸೆ ಪಡೆದು ಆರೋಗ್ಯವಾಗಿರುವ ರಾಮಕೃಷ್ಣ ಮತ್ತು ಕೋದಂಡರಾಮಯ್ಯ ಹಾಜರಿದ್ದು, ತಮ್ಮ ಅನುಭವವನ್ನು ವಿವರಿಸಿ ದರು. ರಾಮಕೃಷ್ಣ ಅವರ ಪತ್ನಿ ಮಮತಾ, ಕೋದಂಡರಾಮಯ್ಯರ ಪತ್ನಿ ಕಮಲಮ್ಮ, ಆಸ್ಪತ್ರೆಯ ಡಾ.ದಿನೇಶ್‍ಕುಮಾರ್, ಡಾ.ಉಪೇಂದ್ರ ಶೆಣೈ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.