ಸಮುದಾಯ ಭವನ ಸದ್ಬಳಕೆಗೆ ಶಾಸಕರ ಸಲಹೆ

ಗುಂಡ್ಲುಪೇಟೆ, ಡಿ.10(ಸೋಮ್.ಜಿ)- ಸಮುದಾಯ ಭವನಗಳನ್ನು ಶುಭ ಕಾರ್ಯಗಳಿಗೆ ಸದ್ಬಳಕೆ ಮಾಡಿಕೊಳ್ಳಿ ಎಂದು ಶಾಸಕ ಸಿ.ಎಸ್. ನಿರಂಜನಕುಮಾರ್ ಹೇಳಿದರು.

ತಾಲೂಕಿನ ಸೋಮಹಳ್ಳಿ ಗ್ರಾಮದ ಮಡಿವಾಳ ಸಮಾಜದ ಸಮುದಾಯ ಭವನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈಗಾಗಲೇ ತಾಲೂಕಿ ನಲ್ಲಿ ಹಲವಾರು ಸಮಾಜದ ಸಮುದಾಯ ಭವನ ಗಳು ಗ್ರಾಮಗಳಲ್ಲಿದೆ. ಆದರೆ ಅದರ ಸಮರ್ಪ ಕವಾದ ನಿರ್ವಹಣೆ ಕೊರತೆಯಿಂದ ಕಟ್ಟಡಗಳು ಶಿಥಿಲಾವಸ್ತೆ ತಲುಪುತ್ತಿದೆ. ಇದನ್ನು ಮನಗಂಡು ಸಮುದಾಯ ಭವನಗಳನ್ನು ಶುಭ ಕಾರ್ಯಗಳಿಗೆ ಸದ್ಭಳಕೆ ಮಾಡಿಕೊಳ್ಳುವುದರೊಂದಿಗೆ ಅವುಗಳ ನಿರ್ವಹಣೆಯನ್ನು ನೋಡಿಕೊಳ್ಳಿ ಎಂದರು.

ರಸ್ತೆ ಅಭಿವೃದ್ಧಿ: ಈಗಾಗಲೇ ಕ್ಷೇತ್ರದ ಹಲವು ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಪ್ರಾರಂಭವಾಗಿದೆ. ಎಸ್.ಸಿ/ಎಸ್‍ಟಿ ಬಡಾವಣೆಗಳಲ್ಲಿ ತೀರಾ ಅಗತ್ಯವಿದ್ದ ಕಡೆಗಳಲ್ಲಿ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿಯೂ ಹೆಚ್ಚಿನ ಅನುದಾನ ತಂದು ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ದಿ ಮಾಡಲಾಗುವುದು. ಈಗಾಗಲೇ ಮೂಲಸೌಕರ್ಯಗಳಿಂದ ವಂಚಿತವಾಗಿದ್ದ ಹಲವು ಗ್ರಾಮಗಳಲ್ಲಿ ಚಾಲನೆಯಲ್ಲಿರುವ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಯಾವುದೇ ಲೋಪದೋಷಗಳಾಗದಂತೆ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು. ಈ ವೇಳೆ ಸೋಮಹಳ್ಳಿ ವೀರಸಿಂಹಾಸನ ಶಿಲಾಮಠಾಧ್ಯಕ್ಷ ಶ್ರೀಸಿದ್ದಮಲ್ಲಪ್ಪಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಕೆ.ಎಸ್.ಮಹೇಶ್, ತಾಪಂ ಅಧ್ಯಕ್ಷ ಎಸ್.ಎಸ್.ಮಧುಶಂಕರ್, ಬಿಜೆಪಿ ಮುಖಂಡ ರಘುಕೌಟಿಲ್ಯ, ಸದಾಶಿವಪ್ಪ, ಮಂಡಲಾಧ್ಯಕ್ಷ ದೊಡ್ಡಹುಂಡಿ ಜಗದೀಶ್, ಗ್ರಾಪಂ ಸದಸ್ಯ ರಾಘವಾಪುರ ದೇವಯ್ಯ ಸೇರಿದಂತೆ ಹಲವರು ಇದ್ದರು.