ಧಾರ್ಮಿಕ ಕೇಂದ್ರದ ಸತ್ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಸಲಹೆ

ಅರಸೀಕೆರೆ: ಸಂಸ್ಕಾರಯುತ ಜೀವನದ ಕೊರತೆಯಿಂದ ಇಂದಿನ ಆಧುನೀಕತೆಯ ಬದುಕಿನಲ್ಲಿ ಮನುಷ್ಯ ಸುಖ, ಶಾಂತಿ, ನೆಮ್ಮದಿ ಕಳೆದುಕೊಳ್ಳುತ್ತಿದ್ದಾನೆ. ಹಾಗಾಗಿ, ಧಾರ್ಮಿಕ ಕೇಂದ್ರ ಗಳ ಸತ್ಕಾರ್ಯಗಳಲ್ಲಿ ಭಾಗವಹಿಸಿ ಆಧ್ಯಾತ್ಮಿಕ ಶಾಂತಿಯನ್ನು ಪಡೆದು ಜೀವನ ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದರು.

ತಾಲೂಕಿನ ಕಣಕಟ್ಟೆ ಹೋಬಳಿ ಬೊಮ್ಮಸಂದ್ರ ಗ್ರಾಮದಲ್ಲಿ ಮಂಗಳವಾರ ಗ್ರಾಮಸ್ಥರು ಆಯೋಜಿಸಿದ್ದ ಗ್ರಾಮ ದೇವರು ಚನ್ನಬಸವೇಶ್ವರ ಸ್ವಾಮಿ ದಿವ್ಯ ರಥೋತ್ಸವ ನಿಮಿತ್ತ ಜಂಪೋತ್ಸವ ಹಾಗೂ ಕೊಂಡೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಸುಂದರ ಬದುಕು ಕಟ್ಟಿಕೊಂಡು ಧರ್ಮದ ಹಾದಿಯಲ್ಲಿ ನಡೆದಾಗ ಮಾತ್ರ ನಮ್ಮೆಲ್ಲರ ಜೀವನ ಹಸನಾಗುತ್ತದೆ. ಹಿಂದೂ ಧರ್ಮವನ್ನು ಧಾರ್ಮಿಕ ನಂಬಿಕೆಯ ಮೇಲೆ ಪ್ರತಿಷ್ಠಾಪನೆ ಮಾಡಲಾಗಿದ್ದು, ದೇವರು ಧರ್ಮವನ್ನು ಅವಲಂಬಿಸಿರುವವರು ಸಹಾ ಹಸನ್ಮುಖಿಗಳಾಗಿರುತ್ತಾರೆ ಎಂದರು.

ಗ್ರಾಮದ ದೇವರುಗಳಾದ ಚನ್ನ ಬಸವೇಶ್ವರ ಉತ್ಸವ ಮೂರ್ತಿ, ಬೊಮ್ಮಲಿಂಗೇಶ್ವರ ಸ್ವಾಮಿಯವರನ್ನು ಪುಷ್ಪಾಲಂಕೃತವಾದ ಮಂಟಪದಲ್ಲಿ ಪ್ರತಿಷ್ಠಾಪಿಸಿ ಮಂಗಲ ಕರಡೇವು ವಾದ್ಯದೊಂದಿಗೆ ಮೆರವಣಿಗೆ ನಡೆಸಿ ಸ್ವಾಮೀಜಿಯವರ ಸಮ್ಮುಖದಲ್ಲಿ ಕೊಂಡೋತ್ಸವ ಜಾಗಕ್ಕೆ ಕರೆತರಲಾಯಿತು. ನಂತರ ಅಗ್ನಿಕುಂಡವನ್ನು ಧಾರ್ಮಿಕ ವಿದಿ-ವಿಧಾನಗಳಿಂದ ಪೂಜಾ ಕೈಂಕರ್ಯವನ್ನು ನೆರವೇರಿಸಿ ದೇವರುಗಳ ಪಲ್ಲಕ್ಕಿ ಸಮೇತ ಕೊಂಡ ಹಾಯಿಸಲಾಯಿತು.

ಈ ವೇಳೆ ಗ್ರಾಮದ ಗುಡಿಗೌಡ ಬಸವೇಗೌಡ, ಗ್ರಾಪಂ ಸದಸ್ಯ ಕುಂಬಾರಗಟ್ಟೆ ಚನ್ನಬಸಪ್ಪ, ಮುಖಂಡರಾದ ಬಿ.ಎಂ.ಮಲ್ಲಿಕಾರ್ಜುನಪ್ಪ, ಮಹೇಶ್ವರಪ್ಪ, ಚನ್ನಬಸಪ್ಪ, ಕೊಡ್ಲಿಬಸವರಾಜ್, ಡಿ.ಎಂ.ಕುರ್ಕೆ ತಿಪ್ಪೇರುದ್ರಸ್ವಾಮಿ, ಚನ್ನಬಸಪ್ಪ, ಕೆ.ಎಸ್.ನಂದನ, ಕೆ.ಎಸ್.ಬಸವರಾಜ್ ಉಪಸ್ಥಿತರಿದ್ದರು.