ಶವಸಂಸ್ಕಾರಕ್ಕೆ ಹೋಗಿ ತಾವೇ ಶವವಾದರು!

ಬೆಟ್ಟದಪುರ: ಶವಸಂಸ್ಕಾರಕ್ಕೆಂದು ಹೋದ ಯುವಕರಿಬ್ಬರು ತಾವೇ ಶವವಾದ ದುರಂತ ಘಟನೆ ಬೆಟ್ಟದಪುರ ಸಮೀಪದ ಮಂಟಿ ಬಿಳಗುಲಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. 80 ವರ್ಷದ ಹಿರಿಯರೊಬ್ಬರು ಗ್ರಾಮದಲ್ಲಿ ಸಾವಿಗೀಡಾಗಿದ್ದು. ಅವರ ಶವಸಂಸ್ಕಾರ ಮುಗಿಸಿದ ನಂತರ ಸ್ನಾನ ಮಾಡಲೆಂದು ಕೆರೆಗೆ ಇಳಿದ ಯುವಕರಿಬ್ಬರು ನೀರು ಪಾಲಾಗಿದ್ದಾರೆ. ಒಂದು ಸಾವು ಸಂಭವಿಸಿ ಕೆಲವೇ ಗಂಟೆಗಳಲ್ಲಿ ಮತ್ತೆರಡು ದುರಂತ ಸಾವುಗಳಿಗೆ ಸಾಕ್ಷಿಯಾಗಿದ್ದಕ್ಕೆ ಇಡೀ ಗ್ರಾಮವೇ ಶೋಕ ಸಾಗರದಲ್ಲಿ ಮುಳುಗಿದೆ.

ನೀರುಪಾಲಾಗಿರುವ ಮಂಟಿಬಿಳ ಗುಲಿಯ ಮಣಿಕಂಠ(30) ಹಾಗೂ ತಿಮ್ಮನಾಯಕ(28) ಇಬ್ಬರೂ ಕೃಷಿಕರು. ನೆರೆಹೊರೆಯವರಾದ ಇಬ್ಬರೂ ಆತ್ಮೀಯ ಸ್ನೇಹಿತರು. ಇಬ್ಬರಿಗೂ ಇನ್ನೂ ಮದುವೆ ಆಗಿರಲಿಲ್ಲ.

ಇವರು ತಂದೆ-ತಾಯಿ, ಸೋದರ, ಸೋದರಿಯರನ್ನು ಅಗಲಿದ್ದಾರೆ. ಸದಾಜತೆಗೇ ಇರುತ್ತಿದ್ದ ಈ ಗೆಳೆಯರು ಸಾವಿನಲ್ಲೂ ಒಂದಾಗಿರುವುದನ್ನು ಕಂಡು ಗ್ರಾಮಸ್ಥರು ಮಮ್ಮಲು ಮರುಗುತ್ತಿದ್ದಾರೆ.

ನಡೆದಿದ್ದೇನು?: ಹಿರಿಯರ ಶವಸಂಸ್ಕಾರ ಮುಗಿಸಿದ ಬಳಿಕ ಮಂಗಳವಾರ ಸಂಜೆ 4 ಗಂಟೆ ವೇಳೆಗೆ ಸ್ನಾನ ಮಾಡಲೆಂದು ಗೆಳೆಯರಿಬ್ಬರೂ ತಮ್ಮದೇ ಜಮೀನಿನ ಪಕ್ಕದಲ್ಲಿದ್ದ ಕೆರೆಗೆ ತೆರಳಿದ್ದಾರೆ. ಬಳಿಕ ಎಷ್ಟು ಹೊತ್ತಾದರೂ ವಾಪಸಾಗದೇ ಇದ್ದುದನ್ನು ಕಂಡು ಬಂಧುಗಳು ಹುಡುಕುತ್ತಾ ಹೋದಾಗ ಇಬ್ಬರ ಉಡುಪುಗಳು, ಮೊಬೈಲ್ ಹಾಗೂ ಚಪ್ಪಲಿಗಳು ಕೆರೆಯ ದಡದಲ್ಲಿ ಕಂಡುಬಂದಿವೆ. ಸುತ್ತಲೂ ಹುಡುಕಾಡಿದಾಗ ಇಬ್ಬರ ಸುಳಿವೇ ಕಂಡುಬಂದಿಲ್ಲ. ಆಳವಾದ ಕೆರೆಯಲ್ಲಿ ಮುಳುಗಿ ಇಬ್ಬರೂ ಸಾವನ್ನಪ್ಪಿದ್ದಾರೆ ಎಂದು ಅವರ ಮನೆಯವರು ಮತ್ತು ಗ್ರಾಮಸ್ಥರು ಬೆಟ್ಟದಪುರ ಪೊಲೀಸರಿಗೆ ದೂರವಾಣಿ ಕರೆ ಮಾಡಿ, ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸರು ಶೋಧಿಸಿದಾಗಲೂ ಯುವಕರಿಬ್ಬರ ಬಗ್ಗೆ ಸಣ್ಣ ಸುಳಿವೂ ಕಾಣದೇ ಹೋಗಿದ್ದರಿಂದ ಅಗ್ನಿಶಾಮಕ ಠಾಣೆಗೆ ಕರೆ ಮಾಡಲಾಗಿದೆ. ಬಳಿಕ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳ ಸಿಬ್ಬಂದಿ ಶವಗಳಿಗಾಗಿ ಕತ್ತಲಾಗುವವರೆಗೂ ಹುಡುಕಾಟ ನಡೆಸಿದರೂ ಯಾವುದೇ ಫಲ ನೀಡಲಿಲ್ಲ. ಕತ್ತಲಾಗಿದ್ದರಿಂದ ಶೋಧ ಕಾರ್ಯ ಸ್ಥಗಿತಗೊಳಿಸಲಾಗಿದೆ. ಯುವಕರಿಬ್ಬರ ಮನೆಯವರು ಮತ್ತು ಪೊಲೀಸ್ ಸಿಬ್ಬಂದಿ ಕೆರೆ ಬಳಿ ಕಾವಲಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಬುಧವಾರ ಬೆಳಿಗ್ಗೆ ಶೋಧ ಕಾರ್ಯ ಮುಂದುವರಿಸಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.