ಆಷಾಢ ಶುಕ್ರವಾರಗಳಂದು ಪೊಲೀಸ್ ಸೇರಿದಂತೆ ಎಲ್ಲಾ ಸರ್ಕಾರಿ ವಾಹನಗಳಿಗೂ ಚಾಮುಂಡಿಬೆಟ್ಟಕ್ಕೆ ಪ್ರವೇಶ ನಿರ್ಬಂಧಕ್ಕೆ ಚಿಂತನೆ

ಮೈಸೂರು, ಜೂ.30(ಆರ್‍ಕೆ)- ಭಕ್ತಾದಿ ಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶ ದಿಂದ ಆಷಾಢ ಶುಕ್ರವಾರಗಳಂದು ಪೊಲೀಸ್ ಸೇರಿದಂತೆ ಎಲ್ಲಾ ಸರ್ಕಾರಿ ವಾಹನಗಳಿಗೂ ಚಾಮುಂಡಿಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸಲು ಪೊಲೀಸ್ ಇಲಾಖೆ ಮುಂದಾಗಿದೆ.

ಸಹಸ್ರಾರು ಮಂದಿ ಭಕ್ತರು ದೇವರ ದರ್ಶನಕ್ಕೆ ಬರು ವುದರಿಂದ ಚಾಮುಂಡಿಬೆಟ್ಟದಲ್ಲಿ ಉಂಟಾ ಗುವ ನೂಕು-ನುಗ್ಗಲು, ಸಂಚಾರ ದಟ್ಟಣೆ ನಿಭಾಯಿಸಲು ಪ್ರತೀ ವರ್ಷದಂತೆ ಈ ಬಾರಿಯೂ ಸಾರ್ವಜನಿಕರ ವಾಹನ ಪ್ರವೇಶ ನಿಷೇಧಿಸಲಾಗಿದ್ದು, ಲಲಿತ ಮಹಲ್ ಹೆಲಿ ಪ್ಯಾಡ್‍ನಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿ ಅಲ್ಲಿಂದ ನಗರ ಸಾರಿಗೆ ಬಸ್ಸುಗಳಲ್ಲಿ ಬೆಟ್ಟಕ್ಕೆ ಉಚಿತ ಪ್ರಯಾಣಕ್ಕೆ ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ. ಆದರೆ, ಪೊಲೀಸ್ ಅಧಿಕಾರಿಗಳು ಹಾಗೂ ಇನ್ನಿತರ ಸರ್ಕಾರಿ ಇಲಾಖೆಗಳ ವಾಹನಗಳಲ್ಲಿ ಕುಟುಂಬದವನ್ನು ಕರೆದೊಯ್ಯು ವುದು ಕಂಡುಬರುತ್ತಿತ್ತು. ಅದರಿಂದ ಇತರ ರಿಗೆ ಕಿರಿಕಿರಿ ಉಂಟಾಗುತ್ತಿತ್ತಲ್ಲದೆ, ಬೆಟ್ಟದಲ್ಲಿ ಟ್ರಾಫಿಕ್ ಜಾಮ್ ಆಗುವ ಜೊತೆಗೆ ಪಾರ್ಕಿಂಗ್ ಸಮಸ್ಯೆ ಉಂಟಾಗುವುದನ್ನು ಮನಗಂಡ ಪೊಲೀಸ್ ಇಲಾಖೆಯು ಎಲ್ಲಾ ಸರ್ಕಾರಿ ವಾಹನಗಳ ಪ್ರವೇಶವನ್ನೂ ನಿರ್ಬಂಧಿಸಲು ಗಂಭೀರ ಚಿಂತನೆ ನಡೆಸಿದೆ.

ಗಣ್ಯರು, ಅತೀ ಗಣ್ಯರು, ಹಿರಿಯ ಅಧಿಕಾರಿಗಳನ್ನು ಹೊರತು ಪಡಿಸಿ ಉಳಿದ ಸರ್ಕಾರಿ ವಾಹನಗಳಲ್ಲಿ ಕುಟುಂಬಸ್ಥರನ್ನು ಬೆಟ್ಟಕ್ಕೆ ಕರೆದೊಯ್ಯುವಂತಿಲ್ಲ. ಅವರೂ ಎಲ್ಲರಂತೆ ಲಲಿತ ಮಹಲ್ ಹೆಲಿ ಪ್ಯಾಡ್‍ನಲ್ಲಿ ವಾಹನ ಪಾರ್ಕ್ ಮಾಡಿ, ಕೆಎಸ್ ಆರ್‍ಟಿಸಿ ಬಸ್‍ನಲ್ಲೇ ಹೋಗಿ ದರ್ಶನ ಮಾಡಿ ಬಸ್ಸಲ್ಲೇ ಹಿಂದಿರುಗಬೇಕೆಂಬ ಆದೇಶ ಹೊರಬೀಳುವ ಸಾಧ್ಯತೆ ಇದೆ.