ಅಂಬೇಡ್ಕರ್‍ರವರ ಅಪರೂಪದ ಛಾಯಾಚಿತ್ರ ಪ್ರದರ್ಶನ

ಮೈಸೂರು: ನಗರದ ಕ್ಯಾತಮಾರನಹಳ್ಳಿಯ ಜೈಭೀಮ್ ಪ್ರಜ್ಞಾವಂತ ಯುವಕರ ಬಳಗದ ವತಿಯಿಂದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಅಂಗವಾಗಿ ಇಲ್ಲಿನ ಚಿಕ್ಕಗರಡಿ ಮುಂಭಾಗ ಡಾ.ಅಂಬೇಡ್ಕರ್‍ರವರ ಅಪ ರೂಪದ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು.

ಡಾ.ಅಂಬೇಡ್ಕರ್‍ರವರ ಜೀವನಾಧಾರಿತ ಅಪರೂಪದ ಛಾಯಾಚಿತ್ರ ಪ್ರದರ್ಶನವನ್ನು ನಗರಪಾಲಿಕೆ ಸದಸ್ಯ ಶ್ರೀಧರ್ ಉದ್ಘಾಟಿಸಿ, ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ನಂತರ ಮಾತನಾಡಿದ ಅವರು, ಬಾಬಾ ಸಾಹೇಬ್ ಅಂಬೇಡ್ಕರ್ ಬರೆದ ಸಂವಿಧಾನದಿಂದ ಇಂದು ಸಮಾಜದಲ್ಲಿ ಸಮಾನತೆ ಕಾಣಲು ಸಾಧ್ಯವಾಗಿದೆ. ದಲಿತರು, ಹಿಂದುಳಿದವರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿದಾಗ ಮಾತ್ರ ಸಮಾಜದಲ್ಲಿ ಮುಂದೆ ಬರಲು ಸಾಧ್ಯ ಎಂದರು.

ಶಿಕ್ಷಣ, ಸಂಘಟನೆ, ಹೋರಾಟ ಇವು ಡಾ.ಅಂಬೇಡ್ಕರ್‍ರವರ ಪ್ರಮುಖ ತತ್ವಗಳಾಗಿದ್ದು, ಇವುಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ಪ್ರದರ್ಶನಕ್ಕೆ ಚಾಲನೆ ನೀಡಿದ ಪಾಲಿಕೆ ಸದಸ್ಯ ಶ್ರೀಧರ್ ಅವರನ್ನು ಬಳಗದ ವತಿಯಿಂದ ಶಾಲುಹೊದಿಸಿ ಸನ್ಮಾನಿಸಲಾಯಿತು.

ಈ ವೇಳೆ ಕ್ಯಾತಮಾರನಹಳ್ಳಿ ಮುಖಂಡರಾದ ಇಂದ್ರೇಶ್ ಹಾಗೂ ಬಳಗದ ಹರೀಶ್, ಗಿರೀಶ್, ಸೋಮಶೇಖರ್, ಸಿದ್ಧಾರ್ಥ, ರಾಕೇಶ್, ಮಂಜು, ಪ್ರವೀಣ, ಮಹದೇವಸ್ವಾಮಿ, ರಘು, ಕುಮಾರ ಸ್ವಾಮಿ, ಈಶ್ವರ್, ಸ್ವಾಮಿ ಸೇರಿದಂತೆ ಇತರರು ಹಾಜರಿದ್ದರು.