ರಾಜ್ಯದಲ್ಲಿ ಇನ್ನೂ ಸೂರಿಲ್ಲದ ಕುಟುಂಬಗಳು ಇವೆಯೇ?

ಡಿಸಿಎಂ ಡಾ.ಪರಮೇಶ್ವರ್ ಅಚ್ಚರಿ ಪ್ರಶ್ನೆ
ಬೆಂಗಳೂರು: ಪ್ರತಿ ವರ್ಷ ಸಾವಿರಾರು ಕೋಟಿ ರೂ. ವೆಚ್ಚ ಮಾಡಿದರೂ ರಾಜ್ಯ ದಲ್ಲಿ ಇನ್ನೂ ಸೂರಿಲ್ಲದ ಕುಟುಂಬ ಗಳು ಇವೆಯೇ ಎಂದು ಉಪಮುಖ್ಯ ಮಂತ್ರಿ ಡಾ.ಜಿ.ಪರಮೇಶ್ವರ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ವಿಧಾನ ಸೌಧದಲ್ಲಿ ಜಿಲ್ಲಾಡಳಿತದೊಂದಿಗೆ ಎರಡನೇ ದಿನವಾದ ಇಂದು ಕೂಡ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಸತಿ ಯೋಜನೆಗಳಿಗೆ ಸಂಬಂಧಿಸಿದಂತೆ ನಡೆದ ಚರ್ಚೆ ಸಮಯದಲ್ಲಿ ಮಾತನಾಡಿದ ಅವರು, ಇನ್ನು ಎಷ್ಟು ವರ್ಷ ಗಳ ಕಾಲ ಮನೆಗಳನ್ನು ನಿರ್ಮಿಸುತ್ತಾ ಹೋಗುತ್ತೀರಿ ಎಂದು ಪ್ರಶ್ನಿಸಿದರು. ಪರಿಶಿಷ್ಟ ಜಾತಿ, ವರ್ಗಕ್ಕೆ ಸೇರಿದ ಸೂರಿಲ್ಲದ ಕುಟುಂಬ ಗಳಿಗೆ ಒಂದೇ ಬಾರಿಗೆ ಅನ್ವಯ ಆಗುವಂತೆ ಎಸ್‍ಟಿಪಿ ಹಣದಲ್ಲಿ 15ರಿಂದ 20,000 ಕೋಟಿ ರೂ. ವೆಚ್ಚ ಮಾಡಿ, ನಿರ್ಮಿಸಿಕೊಡಿ. ಎಸ್‍ಟಿಪಿ ಹಣ ಸದ್ಬಳಕೆ ಆಗಬೇಕು, ಅದನ್ನು ಬಿಟ್ಟು ಪೆನ್, ಲ್ಯಾಪ್‍ಟಾಪ್ ಕೊಟ್ಟು ಹಾಳು ಮಾಡಬೇಡಿ. ಈ ಹಣವನ್ನು ಆ ವರ್ಗದ ಜನತೆಗೆ ಶಾಶ್ವತ ಸೌಲಭ್ಯ ಕಲ್ಪಿಸುವ ಕೆಲಸ ಮಾಡಿ ಎಂದು ಜಿಲ್ಲಾಡಳಿತಕ್ಕೆ ಕಿವಿಮಾತು ಹೇಳಿದರು. ಇದಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಸಹ ದನಿಗೂಡಿಸಿದರು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಅನುದಾನದ ಶೇ.75ರಷ್ಟನ್ನು ಬಿಡುಗಡೆ ಮಾಡಲಾಗುವುದು. ಕೂಡಲೇ ಅಲ್ಪಾವಧಿ ಟೆಂಡರ್ ಕರೆದು ಕಾಮಗಾರಿಗಳಿಗೆ ಚಾಲನೆ ನೀಡಿ ಎಂದು ಸೂಚಿಸಿದರು.