ಅರಸೀಕೆರೆ: ಗುಡುಗು, ಸಿಡಿಲ ಆರ್ಭಟದ ನಡುವೆ ನಗರದಲ್ಲಿ ಭಾನುವಾರ ಸಂಜೆ ಸುರಿದ ಮಳೆ ವಿದ್ಯುತ್ ಕಂಬಗಳನ್ನು ನೆಲಕ್ಕುರುಳಿಸಿದ್ದು, ಕಾರಿನ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ.
ನಗರದ ಶಿವಾಲಯ ಬಡಾವಣೆ, ಕೃಷಿ ಮಾರುಕಟ್ಟೆ ಪ್ರಾಗಂಣದ ಮುಖ್ಯದ್ವಾರದ ಮುಂಭಾಗ, ಮೊದಲೀಯಾರ್ ಬೀದಿ, ಮಿನಿ ವಿಧಾನಸೌಧದ ಹಿಂಭಾಗ ಮರ ಹಾಗೂ ವಿದ್ಯುತ್ ಕಂಬಗಳು ನೆಲಕ್ಕುರು ಳಿವೆ. ಸಂಜೆ 4.30ರ ವೇಳೆಗೆ ಪ್ರಾರಂಭ ವಾದ ಮಳೆ ಒಂದು ಗಂಟೆಗೂ ಹೆಚ್ಚು ಕಾಲ ಧಾರಾಕಾರವಾಗಿ ಸುರಿದ ಪರಿಣಾಮ ಜನ ಜೀವನ, ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.
ಗುಡುಗಿನ ಆರ್ಭಟ: ಬೆಳಿಗ್ಗೆಯಿಂದ ಸುಡುಬಿಸಿಲಿದ್ದು, ಸಂಜೆ ವೇಳೆಗೆ ಗುಡುಗಿನ ಆರ್ಭಟ, ಸಿಡಿಲು ನಗರದ ಜನತೆಯನ್ನು ಬೆಚ್ಚಿಬೀಳುವಂತೆ ಮಾಡಿತು. ಗಾಳಿ ಮಳೆಯಿಂದಾಗಿ ರಸ್ತೆ ಬದಿಯಲ್ಲಿದ್ದ ಮರ, ವಿದ್ಯುತ್ ಕಂಬಗಳು ಕಾಂಪೌಂಡ್, ರಸ್ತೆಗಳ ಮೇಲೆ ಬಿದ್ದು ರಸ್ತೆ ಸಂಚಾರಕ್ಕೆ ಅಡ್ಡಿಯಾಯಿತು. ವಿದ್ಯುತ್ ಕಂಬಗಳು ನೆಲಕ್ಕುರುಳಿದ ಪರಿಣಾಮ ಭಾನುವಾರ ಇಡೀ ರಾತ್ರಿ ನಗರದ ಜನತೆ ವಿದ್ಯುತ್ ಸಮಸ್ಯೆಯಿಂದ ಪರಿತಪಿಸುವಂತಾಯಿತು. ನಗರದ ಕೆಲವೆಡೆ ಕಾರು-ಬೈಕ್ ಮೇಲೆ ಮರುಬಿದ್ದು ಜಖಂಗೊಂಡಿತು.
ಧಾರಾಕಾರ: ಈ ಬಾರಿ ಕೆಲದಿನದಿಂದ ಬೀಳುತ್ತಿರುವ ಮಳೆಗೆ ಹೋಲಿಕೆ ಮಾಡಿದರೆ ಭಾನುವಾರ ಸುರಿದ ಧಾರಾಕಾರ ಮಳೆ ಸಾಕಷ್ಟು ಹಾನಿಯನ್ನುಂಟು ಮಾಡಿತು. ರಸ್ತೆಯಲ್ಲೆಲ್ಲ ನೀರು ಹರಿದು ಸಂಚಾರಕ್ಕೆ ಅಡ್ಡಿಯನ್ನುಂಟು ಮಾಡಿದರೆ, ಗಾಳಿ, ಮಳೆಗೆ ಕೆಲವೊಂದು ಮನೆಯ ಮೇಲ್ಛಾವಣಿ ಹಾರಿ ಹೋಗಿದ್ದವು. ಕಸಬಾ ಹೋಬಳಿಯ ಬೈರನಾಯ್ಕನಹಳ್ಳಿ ಗ್ರಾಮದಲ್ಲಿ ಗಾಳಿ ಮಳೆಗೆ ಮನೆಯೊಂದರ ಮೇಲ್ಛಾವಣಿ ಹಾರಿ ಹೋಗಿದೆ.