ನಿರುದ್ಯೋಗ ನಿವಾರಿಸಲು ಪ್ರಯತ್ನ: ಶಾಸಕ ಕೆ.ಎಂ.ಶಿವಲಿಂಗೇಗೌಡ

ಅರಸೀಕೆರೆ: ಬೃಹತ್ ಕೈಗಾರಿಕಾ ಘಟಕ ಸ್ಥಾಪನೆ ಮಾಡುವುದರ ಮೂಲಕ ತಾಲೂಕಿನಲ್ಲಿ ನಿರುದ್ಯೋಗ ನಿವಾರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.

ತಾಲೂಕಿನ ತಳಲೂರು ಸಮೀಪದ ದೊಡ್ಮನೆ ಫಾರಂಹೌಸ್‍ನಲ್ಲಿ ನಡೆದ ಅಭಿ ನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ನಮ್ಮ ಸಮ್ಮಿಶ್ರ ಸಹಕಾರದೊಂದಿಗೆ ಸ್ಥಳೀಯ ವಾಗಿ ತರಕಾರಿ ಮಾರುಕಟ್ಟೆಯನ್ನು 5 ಎಕರೆ ಜಾಗದಲ್ಲಿ ನಿರ್ಮಿಸಿ, ಬೆಲೆ ಕುಸಿತದ ವೇಳೆ ಅವರು ಉತ್ಪನ್ನ ಶೇಖರಿಸಲು ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಮಾಡಲು ಶ್ರಮಿಸ ಲಾಗುವುದು. ಅಲ್ಲದೆ ನಗರದ ಬಸ್ ನಿಲ್ದಾಣ ಅಭಿವೃದ್ಧಿ, ಕುಡಿಯುವ ನೀರಿನ ಕಾಮಗಾರಿಗಳು, ಎತ್ತಿನಹೊಳೆ ಕಾಮಗಾರಿ ಮುಗಿಯುವವರೆಗೂ ಎಲ್ಲರೂ ಪಕ್ಷಾತೀತ ಮತ್ತು ಜಾತ್ಯಾತೀತವಾಗಿ ನಮ್ಮೊಂದಿಗೆ ಕೈಜೋಡಿಸಬೇಕು ಎಂದರು.

ಪ್ರತಿಯೊಂದು ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಸಾರ್ವಜನಿಕ ಸಭೆ ಮಾಡಿ ಇಲಾಖೆಗೆ ಸಂಬಂಧಪಟ್ಟ 28 ಜನ ಅಧಿಕಾರಿಗಳನ್ನು ಕರೆದುಕೊಂಡು ಹೋಗಿ ಸ್ಥಳದಲ್ಲೇ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳುವ ಕಾರ್ಯಕ್ರಮವನ್ನು ಹಮ್ಮಿಕೊಂಡು ರೈತರ ನೆರವಿಗೆ ಧಾವಿಸಲಾಗುವುದು. ದೈವ ಸಂಕಲ್ಪದಿಂದ ಜೆಡಿಎಸ್ ಅಧಿಕಾರಕ್ಕೆ ಬಂದಿದ್ದು, ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಯಾಗಿದ್ದರಿಂದ ರಾಜ್ಯದಲ್ಲಿ ಉತ್ತಮ ಮಳೆಯಾಗುವ ಮೂಲಕ ರಾಜ್ಯ ರೈತರ ದೊಡ್ಡ ನೀರಿನ ಸಮಸ್ಯೆಯನ್ನೇ ಬಗೆಹರಿಸಿದೆ ಎಂದು ಎಲ್ಲರೂ ಒಪ್ಪುತ್ತಿದ್ದಾರೆ ಎಂದರು. ತಾವು 3ನೇ ಬಾರಿ ಆಯ್ಕೆಯಾಗಲು ಕಾರಣೀಭೂತರಾದ ಜೆಡಿಎಸ್‍ನ ನಿಷ್ಠಾವಂತ ಕಾರ್ಯಕರ್ತರು, ಮುಖಂಡರಿಗೆ ಸನ್ಮಾನಿಸುವ ಕಾರ್ಯ ಕ್ರಮವನ್ನು ಹಮ್ಮಿಕೊಳ್ಳಲಿದ್ದು, ಹಲವು ಉಪ ಚುನಾವಣೆ ಸೇರಿದಂತೆ ಸರ್ಕಾರ ರಚನೆಯಲ್ಲಿ ಸಮಯ ಹೋಗಿರುವುದರಿಂದ ಶೀಘ್ರದಲ್ಲೇ ಸಚಿವ ರೇವಣ್ಣನವರನ್ನು ಆಹ್ವಾನಿಸಿ ಅಭಿನಂದನಾ ಸಮಾವೇಶ ಹಮ್ಮಿಕೊಳ್ಳಲಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ಬಿಳಿಚೌಡಯ್ಯ, ನಗರಸಭಾಧ್ಯಕ್ಷ ಸಮೀವುಲ್ಲಾ, ಉದ್ಯಮಿ ಅರುಣ್ ಕುಮಾರ್, ಬಿ.ಎನ್.ವಿದ್ಯಾಧರ್, ಪಾರ್ಥ ಸಾರಥಿ, ಎಸ್‍ಎಂಎಸ್ ರವಿ, ಹೇಮಂತ್ ಕುಮಾರ್, ಧರ್ಮಶೇಖರ್, ಧರ್ಮಣ್ಣ, ಸುಬ್ರಹ್ಮಣ್ಯ ಬಾಬು, ಮನು, ರೈಲ್ವೆ ರಂಗಣ್ಣ, ಕದಂಬ ಶ್ರೀನಿವಾಸ್ ಇದ್ದರು.