ಮೈಸೂರು: `ವಿಶ್ವ ತಂಬಾಕು ಮುಕ್ತ ದಿನ’ದ ಹಿನ್ನೆಲೆಯಲ್ಲಿ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ಗುರುವಾರ ಮೈಸೂರಿನಲ್ಲಿ ಆಯೋಜಿಸಿದ್ದ ತಂಬಾಕು ಸೇವನೆ ವಿರೋಧಿ ಜಾಗೃತಿ ಜಾಥಾದಲ್ಲಿ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡು ಗಮನ ಸೆಳೆದರಲ್ಲದೆ, ತಂಬಾಕಿನಿಂದ ಉಂಟಾಗುವ ದುಷ್ಪರಿಣಾಮ ಕುರಿತ ಬೀದಿ ನಾಟಕ ಪ್ರದರ್ಶಿಸಿ ಅರಿವು ಮೂಡಿಸಿದರು.
ಮೈಸೂರಿನ ಸರ್ಕಾರಿ ಆಯುರ್ವೇದ ಕಾಲೇಜು ಆವ ರಣದಿಂದ ಆರಂಭವಾದ ಜಾಥಾ ಇರ್ವಿನ್ ರಸ್ತೆ ಮೂಲಕ ರೈಲ್ವೆ ನಿಲ್ದಾಣ, ಜೆಎಲ್‍ಬಿ ರಸ್ತೆ, ದಾಸಪ್ಪ ವೃತ್ತ, ಧನ್ವಂತರಿ ರಸ್ತೆ, ಸಯ್ಯಾಜಿರಾವ್ ರಸ್ತೆ ಮೂಲಕ ಸಾಗಿ ಕಾಲೇಜು ಆವರಣಕ್ಕೆ ಮರಳಿತು. ವಿದ್ಯಾರ್ಥಿಗಳು `ತಂಬಾಕು ಬೇಕೇ, ಆರೋಗ್ಯ ಬೇಕೇ – ಆಯ್ಕೆ ನಿಮ್ಮದು’, `ತಂಬಾಕು ಸೇವನೆಗೆ ಇಂದೇ ಕೊನೆ ಹೇಳಿ’, `ಧೂಮಪಾನ ಅನಾರೋಗ್ಯ ಕಾರಣ’, `ತಂಬಾಕು ಸೇವನೆ ಸಾವಿಗೆ ಆಹ್ವಾನ’ ಘೋಷಣೆಗಳುಳ್ಳ ಫಲಕ ಹಿಡಿದಿದ್ದರು.
ಚಲುವಾಂಬ ಆಸ್ಪತ್ರೆಯ ಅಧೀಕ್ಷಕಿ ಡಾ.ರಾಧಾಮಣಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು. ತಂಬಾಕು ಚಟಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು. ತಂಬಾಕಿನ ದುಷ್ಪರಿಣಾಮ ಅನುಭವಿಸುತ್ತಿರುವವರನ್ನು ರಕ್ಷಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವುದಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಸಲಹೆ ನೀಡಿದರು. ಸರ್ಕಾರಿ ಆಯುರ್ವೆದ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಗಜಾನನ ಹೆಗಡೆ ಮಾತ ನಾಡಿ, ದೇಶದಲ್ಲಿ ಎರಡು ಕೋಟಿ ಮಂದಿ ಕ್ಯಾನ್ಸರ್‍ನಿಂದ ಬಳಲುತ್ತಿದ್ದು, ಅದರಲ್ಲಿ ಶೇ.30ರಷ್ಟು ಮಂದಿ ತಂಬಾಕು ಸೇವನೆಯಿಂದಲೇ ಕ್ಯಾನ್ಸರ್‍ಗೆ ತುತ್ತಾಗಿದ್ದಾರೆ. ಇದು ಸ್ವಯಂಕೃತ ಅಪರಾಧ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವುದು ಅನಿವಾರ್ಯ ಎಂದರು.
ಬಳಿಕ ತಂಬಾಕು ಸೇವನೆ ದುಷ್ಪಾರಿಣಾಮಗಳ ಕುರಿತು ಬೀದಿ ನಾಟಕ ಪ್ರದರ್ಶಿಸಲಾಯಿತು. ಗುಟ್ಕಾ ಹಾಗೂ ಸಿಗರೇಟ್ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಮನಮುಟ್ಟುವಂತೆ ಅಭಿನಯಿಸಿದ ವಿದ್ಯಾರ್ಥಿ ಗಳು, ತಂಬಾಕು ಸೇವನೆಗೆ ದಾಸರಾಗಿರುವವರ ಕಣ್ತೆರೆಸಲು ಯತ್ನಿಸಿದರು. ಈ ವೇಳೆ ಆಸ್ಪತ್ರೆಯ ಡಾ.ವೆಂಕಟಕೃಷ್ಣ, ಡಾ. ಆದರ್ಶ, ಡಾ.ಪ್ರವೀಣ್ ಇನ್ನಿತರರು ಉಪಸ್ಥಿತರಿದ್ದರು.