ಮೈಸೂರು,ಜು.28(ಎಂಟಿವೈ)- ಯುವಜನರಲ್ಲಿ ವನ್ಯಜೀವಿ ಹಾಗೂ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿ ಸುವುದು ಅನಿವಾರ್ಯವಾಗಿದ್ದು, ಎಲ್ಲರೂ ಸ್ವಯಂ ಪ್ರೇರಣೆಯಿಂದ ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡು ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಕೊಡುಗೆ ನೀಡುವತ್ತ ಗಮನ ಹರಿಸ ಬೇಕೆಂದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಲಹೆ ನೀಡಿದ್ದಾರೆ.
ಮೈಸೂರಿನ ಚಾಮರಾಜೇಂದ್ರ ಮೃಗಾ ಲಯದ ಆ್ಯಂಪಿ ಥಿಯೇಟರ್‍ನಲ್ಲಿ ಭಾನು ವಾರ ನಡೆದ ಯುವ ಸಂಘಟನೆ-2019 ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೈಸೂರಿನ ಮೃಗಾಲಯ ಕೇವಲ ಪ್ರವಾ ಸೋದ್ಯಮಕ್ಕೆ ಮಾತ್ರ ಸೀಮಿತಗೊಳ್ಳದೆ, ಶೈಕ್ಷಣಿಕ ಚಟುವಟಿಕೆ ಮೂಲಕ ಪರಿಸರ ಹಾಗೂ ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುತ್ತಿರುವುದು ಶ್ಲಾಘನೀಯ. ಮೈಸೂರು ಸಂಸ್ಥಾನ 10ನೇ ಅರಸರಾದ ಚಾಮರಾಜೇಂದ್ರ ಒಡೆಯರ್ ಮೈಸೂರಿನ ಮೃಗಾಲಯ ಸ್ಥಾಪಿಸಿದರು. ಅದಕ್ಕೂ ಮುನ್ನ ಮುಮ್ಮಡಿ ಅವರ ಕಾಲದಲ್ಲಿ ಇದೇ ಸ್ಥಳದಲ್ಲಿ 10 ಎಕರೆ ಪ್ರದೇಶದಲ್ಲಿ ಕೆಲವು ಪ್ರಾಣಿ ಗಳನ್ನು ಸಾಕಲಾಗಿತ್ತು. ಈ ಹಿಂದೆ ಮಹಾ ರಾಜರು ಬೇರೆ ಬೇರೆ ಸ್ಥಳಕ್ಕೆ ಹೋದಾಗ ಪ್ರಾಣಿಗಳನ್ನು ಉಡುಗೊರೆಯಾಗಿ ಕೊಡು ತ್ತಿದ್ದರು. ಬೇರೆ ಅರಸರಿಂದ ಉಡುಗೊರೆ ಯಾಗಿ ಬಂದ ಪ್ರಾಣಿಗಳನ್ನು ಇಲ್ಲಿಡ ಲಾಗಿತ್ತು. ಶ್ರೀರಂಗಪಟ್ಟಣ ಮೈಸೂರು ಸಂಸ್ಥಾನದ ರಾಜಧಾನಿಯಾಗಿತ್ತಾದರೂ ಮೃಗಾಲಯದ ಪಕ್ಕದಲ್ಲಿರುವ ಲೋಕರಂಜನ್ ಮಹಲ್‍ನಲ್ಲಿ ಮಹಾರಾಜರು ವಾಸ್ತವ್ಯ ಹೂಡುತ್ತಿದ್ದರು. ಆ ಸಂದರ್ಭದಲ್ಲಿ ಇಲ್ಲಿದ್ದ ಪ್ರಾಣಿಗಳ ಯೋಗಕ್ಷೇಮ ವಿಚಾರಿಸುತ್ತಿದ್ದರು. ಆ ನಂತರ 10ನೇ ಅರಸರು ಮೃಗಾಲಯ ಸ್ಥಾಪಿಸಿ, ವನ್ಯ ಜೀವಿಗಳ ರಕ್ಷಣೆಗೆ ಕ್ರಮ ಕೈಗೊಂಡರು ಎಂದು ಅವರು ವಿವರಿಸಿದರು.
10 ಎಕರೆ ಪ್ರದೇಶದಲ್ಲಿ ಆರಂಭವಾದ ಮೃಗಾಲಯ ಇಂದು 150 ಎಕರೆ ವಿಸ್ತೀರ್ಣದಲ್ಲಿ ವಿಸ್ತರಿಸಿದೆ. ಪ್ರಾಣಿಗಳ ಸಂರಕ್ಷಣೆ ಕಾರ್ಯವನ್ನು ಅರಣ್ಯ ಇಲಾಖೆ ಮುಂದುವರಿಸಿಕೊಂಡು ಬರುತ್ತಿದೆ. ಇತ್ತೀಚಿನ ದಿನಗಳಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ. ಈ ಹಿಂದೆ ರೈತರ ಉಪಯೋಗಕ್ಕಾಗಿ ಅಣೆಕಟ್ಟು, ನಾಲೆಗಳನ್ನು ಮಹಾರಾಜರು ನಿರ್ಮಿಸಿದ್ದರು. ಪರಸರ ಸಮತೋಲನ ಕಾಪಾಡಿಕೊಂಡರೆ ಮಳೆ ಉತ್ತಮವಾಗಿ ಬಂದು ಡ್ಯಾಂಗೆ ನೀರು ತುಂಬುತ್ತದೆ. ಇಲ್ಲದಿದ್ದರೆ ಡ್ಯಾಂ ಹಾಗೂ ನಾಲೆಗಳು ನಿರ್ಮಿಸಿದ್ದರೂ ಯಾವುದೇ ಪ್ರಯೋಜ ನವಿಲ್ಲ. ಈ ಹಿನ್ನೆಲೆಯಲ್ಲಿ ಪರಿಸರ ಸಂರಕ್ಷಣೆಗೆ ಸ್ವಯಂ ಪ್ರೇರಣೆಯಿಂದ ಮುಂದಾಗ ಬೇಕು. ಸ್ವಚ್ಛತೆಯಲ್ಲಿ ಕಳೆದ ಕೆಲವು ವರ್ಷ ಗಳಿಂದ ಉತ್ತಮ ಸ್ಥಾನದಲ್ಲಿದ್ದೇವೆ ಎಂದು ಅಭಿಪ್ರಾಯಪಟ್ಟರು.
ಮೈಸೂರು ವೃತ್ತದ ಸಿಸಿಎಫ್ ಟಿ. ಹೀರಾಲಾಲ್ ಮಾತನಾಡಿ, ಐದು ವರ್ಷದ ಹಿಂದೆ ಕರ್ನಾಟಕದ ಜನಸಂಖ್ಯೆ 4 ಕೋಟಿ ಇತ್ತು. ಅಂದು ರಾಜ್ಯದಲ್ಲಿ 5 ಮಿಲಿಯನ್ ವಾಹನಗಳಿದ್ದವು. ಇದೀಗ ಜನಸಂಖ್ಯೆ ಆರು ಕೋಟಿಗೆ ಹೆಚ್ಚಳ ವಾಗಿದೆ. ವಾಹನಗಳ ಸಂಖ್ಯೆ 16.6 ಮಿಲಿ ಯನ್‍ಗಳಾಗಿವೆ. ಮೈಸೂರು ಜಿಲ್ಲೆಯಲ್ಲಿ ಐದು ವರ್ಷಗಳ ಹಿಂದೆ 9 ಲಕ್ಷ ಜನ ಸಂಖ್ಯೆಯಿತ್ತು. ಇದೀಗ 14 ಲಕ್ಷಕ್ಕೆ ಏರಿಕೆ ಯಾಗಿದೆ. ಐದು ಲಕ್ಷವಿದ್ದ ವಾಹನಗಳ ಸಂಖ್ಯೆ ಇಂದು 9.5 ಲಕ್ಷಕ್ಕೆ ಹೆಚ್ಚಳವಾಗಿದೆ. ಹೆಚ್ಚುತ್ತಿರುವ ವಾಹನಗಳಿಂದಲೂ ಪರಿಸರ ಮಾಲಿನ್ಯವಾಗುತ್ತಿದೆ. ಈ ನಡುವೆ ಪ್ರತಿದಿನವೂ ಅರಣ್ಯ ನಾಶವಾಗುತ್ತಿದೆ. ಜನಸಂಖ್ಯೆ ಹೆಚ್ಚುತ್ತಿದ್ದು, ಅರಣ್ಯದ ಪ್ರಮಾಣ ಕ್ಷೀಣಿಸುತ್ತಿರುವುದರಿಂದ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆ ಯಲ್ಲಿ ಎಲ್ಲರೂ ಪರಿಸರ ಸಂರಕ್ಷಣೆಗೆ ಕೈಜೋ ಡಿಸಬೇಕು ಎಂದು ಸಲಹೆ ನೀಡಿದರು.
ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ಮಾತನಾಡಿ, ನಮ್ಮ ಸುತ್ತಲ ಎಲ್ಲಾ ಸಮಸ್ಯೆಗಳಿಗೂ ನಾವೇ ಕಾರಣ. ನಾವೇ ಅವುಗಳನ್ನು ಸರಿಪಡಿಸ ಬೇಕಾಗಿದೆ. ಇಲ್ಲವಾದಲ್ಲಿ ಪರಿಸರದಲ್ಲಿ ಅಸಮ ತೋಲನ ಉಂಟಾಗಿ ದೊಡ್ಡ ಮಟ್ಟದ ದುಷ್ಪರಿಣಾಮ ಎದುರಿಸಬೇಕಾಗುತ್ತದೆ. ಪ್ರಾಣಿಗಳ ಸಂರಕ್ಷಣೆ ಹೆಚ್ಚಾದಂತೆ ಮನುಷ್ಯ -ಪ್ರಾಣಿಗಳ ನಡುವಿನ ಸಂಘರ್ಷ ಹೆಚ್ಚಾಗುತ್ತಿದೆ. ಇದಕ್ಕೆ ಪರಿಹಾರ ಮಾರ್ಗೋ ಪಾಯಗಳನ್ನು ಕಂಡುಕೊಳ್ಳಬೇಕು. ಮನುಷ್ಯ ತಾನು ಸಮಾಜಕ್ಕೆ ನೀಡಿದ ಕೊಡುಗೆ ಬಗ್ಗೆ ಯೋಚನೆ ಮಾಡಬೇಕು. ಸಣ್ಣಪುಟ್ಟ ಸೂಕ್ಷ್ಮಕೆಲಸಗಳಿಂದಲೂ ನಾವು ಕೊಡುಗೆ ನೀಡಲು ಸಾಧ್ಯವಿದೆ. ನಮ್ಮ ಮನೆಯಲ್ಲಿ ನಿತ್ಯವೂ ಉತ್ಪತ್ತಿ ಯಾಗುವ ಅರ್ಧ ಕೆಜಿ ಹಸಿ ಕಸವನ್ನ ಮನೆಯಲ್ಲಿರುವ ಗಿಡಗಳಿಗೆ ಬಳಕೆ ಮಾಡಿಕೊಳ್ಳಬಹುದು. ಇದರಿಂದ ನಾವು ಪರಿಸರ ಸಂರಕ್ಷಣೆಗೆ ಕೊಡುಗೆ ನೀಡಿದಂತಾ ಗುತ್ತದೆ. ಆ ಕಸದಿಂದ ಬೆಳೆದ ಮರ ನಿಮಗೆ ಮುಂದಿನ ದಿನ ಹಣ್ಣು ನೀಡುತ್ತದೆ ಎಂದು ಸಲಹೆ ನೀಡಿದರು.
ಇದಕ್ಕೂ ಮುನ್ನ ಮೃಗಾಲಯ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲಕರ್ಣಿ ಮಾತನಾಡಿ, 27 ವರ್ಷ ಗಳಿಂದ ಯುವ ಸಂಘಟನೆಯ ಮೂಲಕ 12ರಿಂದ 18 ವರ್ಷದೊಳಗಿನ ವಿದ್ಯಾರ್ಥಿ ಗಳಿಗೆ ಪರಿಸರ ಸಂರಕ್ಷಣೆ, ವನ್ಯಜೀವಿಗಳ ರಕ್ಷಣೆಯ ಮಹತ್ವ, ಜೀವ ವೈವಿಧ್ಯತೆ, ಪ್ರಾಣಿ-ಪಕ್ಷಿಗಳ ಆಹಾರ ಸರಪಳಿ, ಜೀವನ ಕ್ರಮ ಸೇರಿದಂತೆ ಇನ್ನಿತರ ಮಹತ್ತರ ವಿಷಯವನ್ನು ಪ್ರತಿ ಭಾನುವಾರ ತಜ್ಞರಿಂದ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡುತ್ತೇವೆ. ರಾಷ್ಟ್ರ ಹಾಗೂ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಮೈಸೂರು ಮೃಗಾಲಯದಲ್ಲಿ ವಿದ್ಯಾರ್ಥಿಗಳಿಗೆ ಯುವಸಂಘಟನೆ ಮೂಲಕ ಶೈಕ್ಷಣಿಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ರೂಪಿಸಲಾಗುತ್ತಿದೆ ಎಂದರು.
ಇದೇ ವೇಳೆ ಬೆಂಗಳೂರಿನ ಐಐಎಸ್‍ಸಿ ನಿವೃತ್ತ ಪ್ರಾಧ್ಯಾಪಕ ಡಾ.ಎನ್.ಎಚ್. ರವೀಂದ್ರನಾಥ್ ಅವರು, ಹವಾಮಾನದಲ್ಲಿ ಬದಲಾವಣೆ, ಪರಿಸರ ಸಂರಕ್ಷಣೆ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮ ದಲ್ಲಿ ಡಿಸಿಎಫ್ ಡಾ.ಕೆ.ಸಿ.ಪ್ರಶಾಂತ್ ಕುಮಾರ್ ಹಾಗೂ ಇತರರು ಇದ್ದರು.