ಅರಮನೆ ಆವರಣದಲ್ಲಿ ಮಾವುತರು, ಕಾವಾಡಿಗಳಿಗೆ ಆಯುಷ್ ಶಿಬಿರ ಪ್ರತಿನಿತ್ಯ ಆರೋಗ್ಯ ತಪಾಸಣೆ

ಮೈಸೂರು, ಆ. 26(ಆರ್‍ಕೆ)- ದಸರಾ ಗಜಪಡೆಯೊಂದಿಗೆ ಆಗಮಿಸಿರುವ ಮಾವುತರು ಮತ್ತು ಕಾವಾಡಿಗಳಿಗಾಗಿ ಮೈಸೂರು ಅರಮನೆ ಆವರಣದಲ್ಲಿ ತಾತ್ಕಾಲಿಕ ಆಯುಷ್ ಶಿಬಿರ ಆರಂಭಿಸಲಾಗಿದೆ. ಆಯುಷ್ ಇಲಾಖೆಯಿಂದ ತೆರೆದಿರುವ ಆರೋಗ್ಯ ಶಿಬಿರವನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಇಂದು ಉದ್ಘಾಟಿಸಿದರು. ಪ್ರತೀ ದಿನ ಬೆಳಿಗ್ಗೆ 9ಗಂಟೆಯಿಂದ ಸಂಜೆ 4.30 ರವರೆಗೆ. ಸರ್ಕಾರಿ ರಜಾ ದಿನಗಳಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆವರೆಗೆ ಆಯುರ್ವೇದÀ ವೈದ್ಯರು ಹಾಜರಿದ್ದು ಕಾವಾಡಿಗಳು, ಮಾವುತರು ಹಾಗೂ ಕುಟುಂಬದವರ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ನೀಡುವರು.

ಪ್ರತೀ ಭಾನುವಾರ ನಂಜನಗೂಡು ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಡಾ.ಪಿ. ರಾಘವೇಂದ್ರ ಆಚಾರ್ಯ, ಡಾ.ಬಿ.ಅಶೋಕ್‍ಕುಮಾರ್, ಸೋಮವಾರ ಕಲ್ಲೂರು ನಾಗನಹಳ್ಳಿ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ಡಾ.ಆಶಾಮೇರಿ ಲೂಯಿಸ್, ಮಂಗಳವಾರ ಬೆಲವತ್ತದ ಡಾ.ರೂಪಶ್ರೀ, ಬುಧವಾರ ಶ್ರೀರಾಂಪುರದ ಡಾ. ರೇಣುಕಾದೇವಿ, ಗುರುವಾರ ಉತ್ತನಹಳ್ಳಿಯ ಡಾ.ಎಂ.ಜಿ.ಸುರೇಶ್, ಶುಕ್ರವಾರ ದೇವಲಾ ಪುರದ ಡಾ.ಪಿ.ಗೀತಾ, ಶನಿವಾರ ಹಿನಕಲ್‍ನ ಡಾ.ಸಿ.ಪಿ.ಸುನೀತಾ ಅವರು ಶಿಬಿರದಲ್ಲಿ ಹಾಜರಿರಬೇಕು ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಬಿ.ಎಸ್.ಸೀತಾಲಕ್ಷ್ಮಿ ಆದೇಶ ನೀಡಿದ್ದಾರೆ. ಪ್ರತೀ ದಿನ ಅವರೊಂದಿಗೆ ಪವಿತ್ರ, ಜವರಪ್ಪ, ಶಾಂತಮ್ಮ ಹಾಗೂ ಮಹದೇವಸ್ವಾಮಿ ಕರ್ತವ್ಯ ನಿರ್ವಹಿಸಬೇಕೆಂದೂ ತಿಳಿಸಿದ್ದಾರೆ. ಶಿಬಿರಕ್ಕೆ ಬೇಕಾದ ಔಷಧಿಗಳು, ಆಯುರ್ವೇದÀ ಚಿಕಿತ್ಸಾ ಕ್ರಮಗಳ ಉಪಕರಣಗಳನ್ನು  ಪೂರೈಸಲಾಗಿದೆ.