`ಮತ್ತೆ ಕಲ್ಯಾಣ.. ನಮ್ಮ ನಡಿಗೆ ಕಲ್ಯಾಣದೆಡೆಗೆ..’ ಸಂದೇಶ ಸಾರಿದ ಜಾಥಾ

ಮೈಸೂರು,ಜು.30(ಆರ್‍ಕೆಬಿ)- ಇವ ನಾರವ… ಇವನಾರವ… ಎಂದೆನಿಸಯ್ಯಾ.. ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ, ನೆಲವೊಂದೆ ಹೊಲಗೇರಿ ಶಿವಾಲಯಕ್ಕೆ, ವೇದಕ್ಕೆ ಒರೆಯ ಕಟ್ಟುವೆ ಶಾಸ್ತ್ರಕ್ಕೆ ನಿಗುಳ ನಿಕ್ಕುವೆ, ದೇವಲೋಕ ಮತ್ಸ್ಯ ಲೋಕ ವೆಂಬುದು ಬೇರಿಲ್ಲ ಕಾಣಿರೋ.. ಸತ್ಯವ ನುಡಿವುದೇ ದೇವಲೋಕ- ಮಿಥ್ಯವ ನುಡಿವುದೇ ಮತ್ಸ್ಯ ಲೋಕ.

ಇಂತಹ ಹತ್ತಾರು ಬಿತ್ತಿ ಪತ್ರಗಳನ್ನು ಹಿಡಿದ ನೂರಾರು ಮಂದಿ ಕಾಲೇಜು ವಿದ್ಯಾರ್ಥಿಗಳು ಮಂಗಳವಾರ ಮೈಸೂ ರಿನ ಪುರಭವನ ಆವರಣದಿಂದ ಗಾಂಧಿ ವೃತ್ತದ ಮೂಲಕ ಅರಮನೆ ಆವರಣ ದವರೆಗೆ ಮತ್ತೆ ಕಲ್ಯಾಣ, ನಮ್ಮ ನಡಿಗೆ ಕಲ್ಯಾಣದೆಡೆಗೆ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಜಾತಿ, ಮತ, ಪಂಥ ಗಳ ಭೇದ ಮರೆತು, ಸಮಾಜದಲ್ಲಿ ನಾವೆ ಲ್ಲರೂ ಒಂದೇ ಎಂಬ ಸೌಹಾರ್ಧತೆ ತರಲು ಸಹಮತ ವೇದಿಕೆ ಈ ಜಾಥಾ ಆಯೋಜಿಸಿತ್ತು.

ಆತ್ಮಂಗೆ ಕಾಯವೆ ರೂಪು, ಕುಲಭ್ರಮೆ ಜಾತಿ ಭ್ರಮೆ ನಾಮ ವರ್ಣ ಆಶ್ರಮ ಮತ ಶಾಸ್ತ್ರ ಭ್ರಮೆ, ಓದಿ ಓದಿ ವಾದಕ್ಕಿಕ್ಕಿತ್ತು, ಕೇಳಿ ಕೇಳಿ ಶಾಸ್ತ್ರ ಸಂದೇಹಕ್ಕಿಕ್ಕಿತ್ತು, ಒಲೆ ಹತ್ತಿ ಉರಿದೊಡೆ ನಿಲಬಹುದಲ್ಲದೆ ನೆಲ ಹತ್ತಿ ಉರಿದೊಡೆ ನಿಲ ಬಹುದೇ ಎಂಬಿತ್ಯಾದಿ ಬಿತ್ತಿ ಪತ್ರಗಳು ಮತ್ತೆ ಕಲ್ಯಾಣ ಸಂದೇಶ ಸಾರಿದವು.

ಹಿರಿಯ ರಂಗಕರ್ಮಿ ಹೆಚ್.ಜನಾರ್ಧನ್ (ಜನ್ನಿ) ಮೈಸೂರಿನ ಪುರಭವನದ ಬಳಿ ಅಭಿಯಾನಕ್ಕೆ ಚಾಲನೆ ನೀಡಿದರು. ಇತಿಹಾಸದಲ್ಲಿ ವಚನ ಚಳವಳಿ ಎಲ್ಲರ ಆತ್ಮ, ಸತ್ಯ, ಮನುಷ್ಯತ್ವ, ಸಮಾನತೆ ಬಯಸಿ, ಪ್ರಪಂಚಕ್ಕೆ ನೀತಿ ಬೋಧಿಸಿದ ಚಳವಳಿ ಗಳು. ಅಂತಹ ಚಳವಳಿಗಳ ಎಲ್ಲಾ ನೀತಿ, ತತ್ವಗಳೂ ಧೂಳೀಪಟವಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ನಿಟ್ಟಿನಲ್ಲಿ ವಚನ ಚಳವಳಿಯ ಮರು ಚಿಂತನೆಗಾಗಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಅಭಿಯಾನದಡಿ, ಐದು ದಿನಗಳ ಕಾಲ ಮೈಸೂರು ಜಿಲ್ಲೆಯ ಎಲ್ಲಾ ತಾಲೂಕಿನ ಕಾಲೇಜುಗಳಲ್ಲಿ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗಿದೆ. ಆ.5 ಮತ್ತು 6ರಂದು ಕಲಾಮಂದಿರದಲ್ಲಿ ಇಡೀ ಚಳ ವಳಿಯ ಒಂದೊಂದು ಪದರವನ್ನೂ ಬಿಚ್ಚಿ ಡುತ್ತಾ, ಎಲ್ಲರ ಆತ್ಮ ತೆರೆಸುವ ಕಾರ್ಯ ಮಾಡಲಾಗುತ್ತದೆ ಎಂದು ಹೇಳಿದರು.

ವೇದಿಕೆ ಸಂಚಾಲಕ ಶರಣ ಮಹದೇವಪ್ಪ, ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೈ.ಡಿ.ರಾಜಣ್ಣ, ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್, ಮೊರಬದ ಮಲ್ಲಿಕಾರ್ಜುನ, ಕೆ.ಆರ್.ಗೋಪಾಲಕೃಷ್ಣ, ಕುಮಾರ್ ಇನ್ನಿತರರು ಅಭಿಯಾನದಲ್ಲಿ ಭಾಗವಹಿಸಿದ್ದರು.