ಬಹುರೂಪ ರಂಗಪ್ರತಿಭೆ ಅಡ್ಡಂಡ ಕಾರ್ಯಪ್ಪ ಸಾರಥ್ಯದಲ್ಲಿ ಬಹುರೂಪಿ

ಮೈಸೂರು, ಫೆ. 13- ಈ ಬಾರಿ `ಗಾಂಧಿ ಪಥ’ದಲ್ಲಿ ಸಾಗುವ `ಬಹುರೂಪಿ’ ನಾಟಕೋತ್ಸವ ರಂಗಾಸಕ್ತರ ಕುತೂ ಹಲ ಹೆಚ್ಚಿಸಿದೆ. ರಂಗಭೀಷ್ಮ ಬಿ.ವಿ.ಕಾರಂತ್, ಬಸವ ಲಿಂಗಯ್ಯ, ಪ್ರಸನ್ನ, ಚಿದಂಬರರಾವ್ ಜಂಬೆ ಅವರಂತಹ ರಂಗಶಕ್ತಿ ಮಾದರಿಯಲ್ಲೇ ಹಾಲಿ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಜವಾಬ್ದಾರಿ ನಿರ್ವಹಿಸಿ, `ಬಹು ರೂಪಿ’ಯನ್ನು ಯಶಸ್ವಿಗೊಳಿಸುತ್ತಾರೆಂಬ ವಿಶ್ವಾಸ ರಂಗಾ ಸಕ್ತರು ಹಾಗೂ ರಂಗಕರ್ಮಿಗಳಲ್ಲಿದೆ.

ವಿದ್ಯಾರ್ಥಿದೆಸೆಯಿಂದಲೇ ರಂಗಭೂಮಿಗೆ ಅಂಟಿಕೊಂಡು, ಕನ್ನಡ-ಕೊಡವ ರಂಗಭೂಮಿ, ಜಾನಪದ, ಸಾಹಿತ್ಯಕ್ಕೆ ತಮ್ಮದೇ ಕಾಣಿಕೆ ನೀಡುವುದರ ಜೊತೆಗೆ ಆಕಾಶವಾಣಿ, ದೂರದರ್ಶನ, ಕಿರುಚಿತ್ರ, ಚಲನಚಿತ್ರ, ಪತ್ರಿಕೆ ಹೀಗೆ ಎಲ್ಲಾ ಮಾಧ್ಯಮಗಳಲ್ಲೂ ನಾಡಿನ ಸಂಸ್ಕøತಿಯ ಉತ್ಸವಕ್ಕೆ ಪ್ರಯತ್ನಿಸಿರುವ ಅಡ್ಡಂಡ ಕಾರ್ಯಪ್ಪ ಅವರ `ಬಹುರೂಪ’ ಬಹುತೇಕರು ಬಲ್ಲರು. ಅನೇಕ ಸಂದರ್ಭಗಳಲ್ಲಿ ಆರೋಪಗಳ ನಡುವೆ ಸಾಧನೆ ಮರೆಯಾಗಿ ಬಿಡುತ್ತದೆ. ಪೂರ್ವಾಗ್ರಹ ಪೀಡಿತ ದೃಷ್ಟಿಯಿಂದ ಹೊರಬಂದು ಅಂತರಂಗದ ಬೆಳಕಿನಲ್ಲಿ ನೋಡಿದಾಗ ಸತ್ಯ ಗೋಚರಿಸುತ್ತದೆ. ಅದೇನೇ ಇರಲಿ `ಬಹುರೂಪ’ದ ಸಾರಥಿ ಯಿಂದ `ಬಹುರೂಪಿ’ ಯಶಸ್ವಿಯಾಗಿ, ಮತ್ತೊಂದು ಮೈಲಿ ಗಲ್ಲಾಗಲಿದೆ ಎಂದು ಅನೇಕ ರಂಗ ಕಲಾವಿದರು, ರಂಗಾಸಕ್ತರು ಅಭಿಪ್ರಾಯಿಸಿದ್ದಾರೆ.

ಕಾರ್ಯಪ್ಪರ ರಂಗ ಸೇವೆ: ಕೊಡಗಿನ ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ವಿದ್ಯಾರ್ಥಿ ದೆಸೆಯಿಂದಲೇ ರಂಗ ಭೂಮಿ ಚಟುವಟಿಕೆಯಲ್ಲಿ ಭಾಗಿಯಾಗಿ, ಉಲ್ಲಾಳ್ ಶೀಲ್ಡ್ ನಾಟಕ ಸ್ಪರ್ಧೆಯಲ್ಲಿ `ಉತ್ತಮ ವಿದ್ಯಾರ್ಥಿ ನಿರ್ದೇಶಕ’ ಎನಿಸಿ ಕೊಂಡರು. ಕಾಲೇಜು ನಾಟಕ ಸಂಘದ ಅಧ್ಯಕ್ಷರಾಗಿ ಕೊಡ ಗಿನ ರಂಗ ಚಟುವಟಿಕೆಗೆ ಬುನಾದಿ ಹಾಕುವುದರ ಜೊತೆಗೆ `ಸೃಷ್ಟಿ’ ಸಂಸ್ಥೆ ಸ್ಥಾಪಿಸಿದರು. ಭಾರತದ ಪ್ರತಿಷ್ಠಿತ ರಂಗ ಶಿಕ್ಷಣ ಕೇಂದ್ರ `ನೀನಾಸಂ’ನಲ್ಲಿ ರಂಗ ಶಿಕ್ಷಣ ಪಡೆದು, ತಿರುಗಾಟ ನಾಟಕಗಳ ಸಂಘಟಕರಾಗಿ, ನಟರಾಗಿ ದೇಶದಾದ್ಯಂತ ಸಂಚರಿ ಸಿದ್ದಾರೆ. ಕೊಡಗಿನಲ್ಲಿ ರಂಗಭೂಮಿ ಚಟುವಟಿಕೆ ತೀವ್ರ ಗೊಳಿಸಿ, ಭಾರತದಲ್ಲೇ ಮೊಟ್ಟ ಮೊದಲು ಪ್ರಾದೇಶಿಕವಾಗಿ ಪ್ರಾದೇಶಿಕ(ಕನ್ನಡ ಮತ್ತು ಕೊಡವ) ರೆಪರ್ಟರಿ `ಸೃಷ್ಟಿ ಕೊಡವ ರಂಗ ಸಂಸ್ಥೆ’ ಸ್ಥಾಪಿಸಿ, ಸರ್ಕಾರದ ಅನುದಾನವಿಲ್ಲದೆ ಕಲಾವಿದರಿಗೆ ವೇತನ ನೀಡಿ, 12 ವರ್ಷ ಮುನ್ನಡೆಸಿದರು.

ಕೊಡವ ಹಾಗೂ ಕನ್ನಡ ಭಾಷೆ ನಡುವಿನ ಬಾಂಧವ್ಯ ಗಟ್ಟಿ ಗೊಳಿಸಲು ವಿನೂತನ ಕಾರ್ಯ ಯೋಜನೆ ರೂಪಿಸಿದ್ದರು. ಖ್ಯಾತ ರಂಗ ನಿರ್ದೇಶಕರಾದ ಡಾ.ಬಿ.ವಿ.ಕಾರಂತ, ಸಿಜಿಕೆ, ಸುರೇಶ್ ಆನಗಳ್ಳಿ, ಆರ್.ನಾಗೇಶ್, ಚಿದಂಬರ ರಾವ್ ಜಂಬೆ, ಅತುಲ್ ತಿವಾರಿ, ರಥಂ ಥಿಯಾಂ, ಏಣಗಿ ನಾಗರಾಜ್, ಮಂಡ್ಯ ರಮೇಶ್ ಮತ್ತಿತರರನ್ನು ಕೊಡಗಿಗೆ ಆಹ್ವಾನಿಸಿ, ನಾಟಕಗಳ ಕಟ್ಟಿ, ರಂಗಭೂಮಿ ಬೆಳೆಸಿದರು. ದೇಶದ ವಿವಿಧೆಡೆ ಕನ್ನಡ ಹಾಗೂ ಕೊಡವ ನಾಟಕಗಳ ನೂರಾರು ಪ್ರದರ್ಶನ ನಡೆಸಿ ದರು. ಕೊಡಗಿನ ಬುಡಕಟ್ಟು ಹಾಡಿಗಳಲ್ಲಿ ತಂಗಿ ಯರವ ಹಾಗೂ ಜೇನು ಕುರುಬರಿಗೆ ರಂಗ ಶಿಬಿರ ನಡೆಸಿ, ಅನೇಕ ಕಡೆ ಪ್ರದರ್ಶಿಸುವ ಮೂಲಕ ಅವರನ್ನು ಮುಖ್ಯ ವಾಹಿನಿಗೆ ತರುವ ಪ್ರಯತ್ನ ನಡೆಸಿದರು. ಉಚಿತವಾಗಿ `ಮಕ್ಕಳ ರಂಗ ಶಿಬಿರ’ ನಡೆಸಿದರು. ನಟ ದರ್ಶನ್ ತೂಗುದೀಪ ಸೇರಿದಂತೆ ಹಲವರ ರಂಗಪ್ರವೇಶಕ್ಕೆ ಈ ಶಿಬಿರವೇ ಬುನಾದಿಯಾಗಿತ್ತು. ಜಾನಪದ ಕಲೆಗಳನ್ನು ಜನಪ್ರಿಯಗೊಳಿಸಲು ತರಬೇತಿ, ವಿಚಾರ ಸಂಕಿರಣ, ಜಾನಪದ ಜಾತ್ರೆಗಳನ್ನು ನಡೆಸಿದರು.

ಕರ್ನಾಟಕ ನಾಟಕ ಅಕಾಡೆಮಿಯ ಕೊಡಗು ಜಿಲ್ಲೆಯ ಪ್ರಥಮ ಸದಸ್ಯರಾಗಿ ಅನೇಕ ನಾಟಕೋತ್ಸವ ಆಯೋಜನೆ, ಮೊದಲ ಬಾರಿಗೆ `ಬುಡಕಟ್ಟು ರಂಗ ಶಿಬಿರ’ ಜಾರಿಗೆ ತಂದರು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪ್ರಥಮ ಸದಸ್ಯ ರಾಗಿ ಹಲವೆಡೆ ಕೊಡವ ನಾಟಕೋತ್ಸವ ನಡೆಸಿದರು. ಮುಂದೆ 2012ರಲ್ಲಿ ಈ ಅಕಾಡೆಮಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. ಕೊಡಗಿನ ಪರಿಸರಕ್ಕೆ ಮಾರಕ ಯೋಜನೆಗಳ ವಿರುದ್ಧ ಬೀದಿ ನಾಟಕಗಳ ಪ್ರದರ್ಶಿಸಿ, ಜಾಗೃತಿ ಮೂಡಿಸಿ ದರು. ಕೊಡವ ನಾಟಕಗಳ ರಚಿಸಿದ್ದಲ್ಲದೆ, ಹಲವು ನಾಟಕಗಳ ಅನುವಾದಿಸಿದರು. ಮಡಿಕೇರಿ ಆಕಾಶವಾಣಿ ಘಟಕ ಪ್ರಾರಂಭ ವಾದಾಗ ಕೊಡವ ಭಾಷೆ ಕಾರ್ಯಕ್ರಮಗಳ ಚಾಲನೆಗೆ ಕಾರ್ಯ ಯೋಜನೆಯಲ್ಲಿ ಪ್ರಮುಖರಾಗಿದ್ದರು. ಕೊಡವ ಭಾಷೆ ಯಲ್ಲಿ ವಾರ್ತಾ ಪ್ರಸಾರ ಹಾಗೂ ಪ್ರಥಮ ವಾರ್ತಾ ವಾಚಕರಾಗಿ ಹತ್ತಾರು ವರ್ಷ ಸೇವೆ ಸಲ್ಲಿಸಿದರು. ಬೆಂಗ ಳೂರು ದೂರದರ್ಶನದಲ್ಲೂ ಕೊಡವ ಕಾರ್ಯಕ್ರಮಗಳಿಗೆ ಕಾರ್ಯ ಯೋಜನೆ ರೂಪಿಸಿದ್ದರು.

ಕೊಡವ ಭಾಷೆಯ ಟೆಲಿಚಿತ್ರ ಹಾಗೂ `ಬಾಳ್ ಪೊಲಂ ದತ್’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾಗೆ ಉತ್ತಮ ಪ್ರಾದೇಶಿಕ ಚಲನಚಿತ್ರ ರಾಜ್ಯ ಪ್ರಶಸ್ತಿ ದಕ್ಕಿದೆ. ಹತ್ತಾರು ಕನ್ನಡ ಕೊಡವ ಚಲನಚಿತ್ರಗಳಲ್ಲಿ ಅಭಿನಯ. ಖ್ಯಾತ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ, ಡಾ. ಚಂದ್ರಶೇಖರ ಕಂಬಾರ್ ಅವರೊಂದಿಗೆ ಸಹಾಯಕ ನಿರ್ದೇಶಕರಾಗಿಯೂ ಕಾರ್ಯಪ್ಪ ದುಡಿದಿದ್ದಾರೆ. ಅಂಕಣ ಕಾರರಾಗಿ, ವಾರಪತ್ರಿಕೆ ಸಂಪಾದಕರಾಗಿ, ಕೊಡಗು ಜಿಲ್ಲೆ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ಜಿಲ್ಲಾ ಪತ್ರಿಕಾ ಟ್ರಸ್ಟ್‍ನ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ.