ಮೈಸೂರಿನ ಸುತ್ತೂರು ಶಾಖಾ ಮಠದಲ್ಲಿ ನಾಳೆಯಿಂದ ಅದ್ಧೂರಿ ಬಸವ ಜಯಂತಿ

ಮೈಸೂರು:  ಅಖಿಲ ಭಾರತ ವೀರಶೈವ ಮಹಾಸಭಾ, ವೀರಶೈವ ಲಿಂಗಾಯತ ಸಂಘ ಸಂಸ್ಥೆಗಳು, ಬಸವ ಬಳಗಗಳ ಒಕ್ಕೂಟದ ಆಶ್ರಯದಲ್ಲಿ ಆ.4 ಮತ್ತು 5ರಂದು ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನ ಸುತ್ತೂರು ಮಠದಲ್ಲಿ ಎರಡು ದಿನಗಳ ಬಸವ ಜಯಂತಿ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಒಕ್ಕೂಟದ ಅಧ್ಯಕ್ಷ ಕೆ.ಶಿವಕುಮಾರ್ ದೂರ ಇಂದಿಲ್ಲಿ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಬಸವ ಜಯಂತಿ ಕಾರ್ಯಕ್ರಮದ ವಿವರಗಳನ್ನು ನೀಡಿದ ಅವರು, ಬಸವಣ್ಣನವರ ಪುತ್ಥಳಿಯ ಬೃಹತ್ ಮೆರವಣಿಗೆ, ವಚನ ಸಂಗೀತ, ವಿಚಾರ ಗೋಷ್ಠಿ, ವಿಶೇಷ ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮ, ವಚನ ಗಾಯನ ಹಾಗೂ ರಾಜ್ಯದ ವೀರಶೈವ-ಲಿಂಗಾಯತ ಸಚಿವರು, ಸಂಸದರು, ಶಾಸಕರಿಗೆ ಅಭಿನಂದನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಆ.4ರಂದು ಬೆಳಿಗ್ಗೆ 11 ಗಂಟೆಗೆ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕನಕಪುರ ದೇಗುಲ ಮಠದ ಮುಮ್ಮಡಿ ನಿರ್ವಾಣ ಸ್ವಾಮೀಜಿ ಅವರ ಸಮ್ಮುಖದಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆ ವಹಿಸಲಿದ್ದು, ಸಚಿವರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಸಿ.ಪುಟ್ಟರಂಗಶೆಟ್ಟಿ, ಎನ್.ಮಹೇಶ್, ವಿವಿಧ ಕೃತಿಗಳನ್ನು ಬಿಡುಗಡೆ ಮಾಡಲಿದ್ದಾರೆ. ಸಂಸದ, ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಮಧ್ಯಾಹ್ನ 2.30ಕ್ಕೆ `ವಚನ ಸಾಹಿತ್ಯ ಪರಂಪರೆ ಮತ್ತು ಸಾಂಸ್ಕøತಿಕ ಸ್ಥಿತಿಗತಿಗಳು’ ಕುರಿತ ವಿಚಾರಗೋಷ್ಟಿ ನಡೆಯಲಿದ್ದು, ಪ್ರಾಧ್ಯಾಪಕ ಡಾ.ಬಸವರಾಜ ಸಬರದ ಅಧ್ಯಕ್ಷತೆ ವಹಿಸುವರು. ಸಂಜೆ 4ಕ್ಕೆ ಪ್ರೊ.ರವೀಂದ್ರ ರೇಷ್ಮೆ ಅವರಿಂದ `ಪ್ರಚಲಿತ ವೀರಶೈವ-ಲಿಂಗಾಯತ ಸಮಾಜದ ಸಾಮಾಜಿಕ ಸ್ಥಿತಿಗತಿಗಳು ಕುರಿತ ವಿಶೇಷ ಉಪನ್ಯಾಸವಿದೆ ಎಂದರು.

ಆ.5ರಂದು ಬೆಳಿಗ್ಗೆ 11 ಗಂಟೆಗೆ ರಾಜ್ಯದ ವೀರಶೈವ-ಲಿಂಗಾಯತ ಸಚಿವರು, ಸಂಸದರು, ಶಾಸಕರಿಗೆ ಅಭಿನಂದನಾ ಕಾರ್ಯಕ್ರಮವಿದ್ದು, ತುಮಕೂರು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ, ಹೊಸಮಠ ಶ್ರೀ ಚಿದಾನಂದಸ್ವಾಮೀಜಿ ಸಮ್ಮುಖದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟನೆ ನೆರವೇರಿಸುವರು. ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆ ವಹಿಸುವರು. ಸಚಿವರಾದ ಎಂ.ಸಿ.ಮನಗೂಳಿ, ಶಿವಾನಂದ ಎಸ್.ಪಾಟೀಲ್, ವೆಂಕಟರಾವ್ ನಾಡಗೌಡ, ರಾಜಶೇಖರ್ ಬಸವರಾಜ್ ಪಾಟೀಲ್ ಇನ್ನಿತರರು ಭಾಗವಹಿಸುವರು. ಆ.4ರಂದು ಬೆಳಿಗ್ಗೆ 9.30ಕ್ಕೆ ವಿದ್ವಾನ್ ಅಂದಗಾರ ನವೀನ್ ಮತ್ತು ವೃಂದದಿಂದ ವಚನ ಸಂಗೀತ, ಆ.5ರಂದು ಬೆಳಿಗ್ಗೆ 9.30ಕ್ಕೆ ಡಾ.ಶ್ವೇತಾ ಮಡಪ್ಪಾಡಿ ತಂಡದಿಂದ ವಚನ ಗಾಯನ ಕಾರ್ಯಕ್ರಮವಿದೆ ಎಂದು ತಿಳಿಸಿದರು.

ಬಸವ ಪುತ್ಥಳಿಯ ಬೃಹತ್ ಮೆರವಣಿಗೆ: ಆ.4ರಂದು ಬೆಳಿಗ್ಗೆ 8.30ಕ್ಕೆ ಜೆಎಸ್‍ಎಸ್ ವಿದ್ಯಾಪೀಠದ ಮುಂಭಾಗದಿಂದ ಹೊರಡಲಿರುವ ಬಸವ ಪುತ್ಥಳಿಯ ಮೆರವಣಿಗೆಗೆ ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಚಾಲನೆ ನೀಡಲಿದ್ದಾರೆ. ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾತಂಡಗಳು, ಭಜನೆ ಮೇಳ ಭಾಗವಹಿಸಲಿದೆ. ಡಾ.ಶಿವರಾತ್ರಿ ರಾಜೇಂದ್ರ ವೃತ್ತದಿಂದ ಹೊರಡುವ ಮೆರವಣಿಗೆ, ಬಸವೇಶ್ವರ ವೃತ್ತ, ಚಾಮರಾಜ ಜೋಡಿ ರಸ್ತೆ, ತ್ಯಾಗರಾಜ ರಸ್ತೆ, ಎನ್.ಮಾಧವರಾವ್ ವೃತ್ತ (ಅಗ್ರಹಾರ ವೃತ್ತ), 101 ಗಣಪತಿ ದೇವಸ್ಥಾನ ವೃತ್ತ, ಬಸವೇಶ್ವರ ರಸ್ತೆ, ರಾಮಾನುಜ ರಸ್ತೆ, ಕಂಸಾಳೆ ಮಹದೇವಯ್ಯ ವೃತ್ತದ ಮೂಲಕ ಸುತ್ತೂರು ಮಠವನ್ನು ತಲುಪಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ತೋಂಟದಾರ್ಯ, ಕೆ.ಎನ್.ಪುಟ್ಟಬುದ್ಧಿ ಇನ್ನಿತರರು ಉಪಸ್ಥಿತರಿದ್ದರು.