ಮೈಸೂರು: ಕನ್ನಡ ಮತ್ತು ಸಂಸ್ಕøತಿ ಇಲಾಖೆ ರಂಗಭೂಮಿಗೆ ಕೋಟ್ಯಾಂತರ ಹಣ ಖರ್ಚು ಮಾಡುತ್ತಿದೆ. ಆದರೆ, ಆ ಹಣ ಉಪಯೋಗಿಸಿಕೊಂಡ ಹವ್ಯಾಸಿ ರಂಗ ಕಲಾವಿದರು ಎಷ್ಟು ಒಳ್ಳೆಯ ನಾಟಕಗಳನ್ನು ನೀಡಿದ್ದಾರೆ ಎಂಬುದನ್ನು ಇಲಾಖೆ ಪರಿಶೀಲಿಸಬೇಕು. ಜತೆಗೆ ಹಣ ದುರುಪಯೋಗವಾಗದಂತೆ ಎಚ್ಚರ ವಹಿಸಿ ತಲುಪಬೇಕಾದವರಿಗೆ ತಲುಪಿಸಬೇಕು ಎಂದು ಹಿರಿಯ ರಂಗಕರ್ಮಿ ಮೈಮ್ ರಮೇಶ್ ಹೇಳಿದರು.
ಕಲಾಮಂದಿರದ ಕಿರುರಂಗಮಂದಿರದಲ್ಲಿ ಮೈಮ್ ರಮೇಶ್ ಅವರಿಗೆ ‘ನಾಟಕ ಅಕಾಡೆಮಿ ಪ್ರಶಸ್ತಿ’ ಬಂದ ಸಲುವಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗ ದೊಂದಿಗೆ ಪ್ರತಿಬಿಂಬ ರಂಗತಂಡದ ವತಿಯಿಂದ ಆಯೋಜಿಸಿರುವ ಮೂರು ದಿನಗಳ ನಾಟಕೋತ್ಸವ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಇಂದು ರಂಗಭೂಮಿಗೆ ಬರುವ ಕಲಾವಿದರು ಯಾವುದಾದರೊಂದು ನಾಟಕದಲ್ಲಿ ಅಭಿನಯ ಮಾಡಿ ಸಿನಿಮಾ ಕ್ಷೇತ್ರದತ್ತ ಹೊರಟು ಹೋಗುತ್ತಾರೆ. ಅಲ್ಲಿ ಯಾರಾದರೂ ಪ್ರಶ್ನಿಸಿದಾಗ ರಂಗಭೂಮಿಯಿಂದ ಬಂದವರು ಎಂದು ಸುಳ್ಳು ಹೇಳುತ್ತಾರೆ. ಸಲ್ಪ ದಿನ ಆದ ನಂತರ ಕತ್ತಿಗೆ ಕ್ಯಾಮರಾ ನೇತು ಹಾಕಿಕೊಂಡು ನಾನು ಡಾಕ್ಯುಮೆಂಟರಿ ಸಿನಿಮಾ ಮಾಡುತ್ತಿದ್ದೇನೆ ಎಂದು ತಿರುಗುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಯುವಜನತೆ ಸತ್ಯ ಅರಿಯಬೇಕು. ದೇಶದಲ್ಲಿ ನಡೆಯುತ್ತಿರುವ ಅನಾಚಾರ ತಡೆಯುವ ಜ್ಞಾನ ಪಡೆಯಬೇಕು. ಇದು ಶಿಕ್ಷಣದಿಂದ ಮಾತ್ರ ಸಾಧ್ಯ. ಆದ್ದರಿಂದ ಶಿಕ್ಷಕರು ಹಾಗೂ ಪೋಷಕರು ತಮ್ಮ ಮಕ್ಕಳನ್ನು ಸರಿಯಾದ ದಾರಿಯಲ್ಲಿ ನಡೆಸಬೇಕಾಗಿದೆ. ತಪ್ಪಿದರೆ ನಿರ್ಗತಿಕರಾಗಿ ಬದುಕಬೇಕಾಗುತ್ತದೆ. ಅದಕ್ಕಾಗಿ ನಾಟಕಗಳನ್ನು ಹೆಚ್ಚು ನೋಡಬೇಕು ಮತ್ತು ಓದಬೇಕು ಎಂದರು.
ಯಾರೂ ಪ್ರಶಸ್ತಿ ಬೇಕು ಎಂದು ದುಂಬಾಲು ಬೀಳಬೇಕಿಲ್ಲ. ನಿರಂತರ ಸೇವೆಯಲ್ಲಿ ತೊಡಗಿದ್ದರೆ ಪ್ರಶಸ್ತಿ ತಾನಾಗಿಯೇ ಹುಡುಕಿಕೊಂಡು ಬರುತ್ತದೆ. ನಾನು ಕೆಲಸದಲ್ಲಿ ಶ್ರದ್ಧೆ ವಹಿಸಿ ಕರ್ತವ್ಯ ನಿರ್ವಹಿಸಿದ್ದರಿಂದ ನಾಟಕ ಅಕಾಡೆಮಿ ಪ್ರಶಸ್ತಿ ಬಂದಿದೆ. ಸಾಮಾಜಿಕ ಚಿಂತನೆಯಿಂದ ರಂಗಭೂಮಿ ಕಟ್ಟಬೇಕು. ಆಗ ಮಾತ್ರ ರಂಗಭೂಮಿಗೆ ಉತ್ತಮ ಸ್ಥಾನಮಾನ ಸಿಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ರಂಗ ಕಲಾವಿದೆ ನಂದಾ ಹಳೆಮನೆ, ಚಲನಚಿತ್ರ ನಿರ್ದೇಶಕ ಮಧುಚಂದ್ರ, ಶಿವು, ಸೌಭಾಗ್ಯವತಿ ಮತ್ತಿತರರು ಉಪಸ್ಥಿತರಿದ್ದರು.