ಮೈತ್ರಿ ಸರ್ಕಾರದ ಕೌಂಟ್‍ಡೌನ್ ಆರಂಭ

ಬೆಂಗಳೂರು,ಜು.1(ಕೆಎಂಶಿ)-ಕಾಂಗ್ರೆಸ್‍ನ ಶಾಸಕರಾದ ಆನಂದ್‍ಸಿಂಗ್ ಮತ್ತು ರಮೇಶ್ ಜಾರಕಿಹೊಳಿ ಅವರುಗಳು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿದೇಶ ಪ್ರವಾಸ ದಲ್ಲಿರುವಾಗಲೇ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಕೌಂಟ್‍ಡೌನ್ ಆರಂಭವಾಗಿದೆ.

ಇವರಿಬ್ಬರು ಮಾತ್ರವಲ್ಲದೇ, ಇನ್ನೂ ಏಳು ಶಾಸಕರು ರಾಜೀನಾಮೆ ನೀಡ ಲಿದ್ದಾರೆ ಎಂಬ ಮಾತುಗಳು ಕೇಳಿಬರು ತ್ತಿದ್ದು, ಈ ಹಿಂದೆ `ರಾಜೀನಾಮೆ ಕೊಟ್ಟರೆ ನಾನೊಬ್ಬನೇ ಕೊಡುವುದಿಲ್ಲ, ನಾವೆಲ್ಲಾ ಒಂದು ಗುಂಪಾಗಿ ರಾಜೀನಾಮೆ ಕೊಡು ತ್ತೇವೆ’ ಎಂದು ರಮೇಶ್ ಜಾರಕಿಹೊಳಿ ನೀಡಿದ್ದ ಹೇಳಿಕೆ ನಿಜವಾಗುವುದೇ? ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

ಆನಂದ್‍ಸಿಂಗ್ ಅವರು, ವಿಧಾನಸಭಾ ಅಧ್ಯಕ್ಷರ ಕಚೇರಿಗೆ ಮಾತ್ರವಲ್ಲದೇ, ರಾಜ್ಯ ಪಾಲರಿಗೂ ತಮ್ಮ ರಾಜೀನಾಮೆ ಪತ್ರ ವನ್ನು ಸಲ್ಲಿಸಿದ್ದರೆ, ರಮೇಶ್ ಜಾರಕಿಹೊಳಿ ಫ್ಯಾಕ್ಸ್ ಮೂಲಕ ವಿಧಾನಸಭಾಧ್ಯಕ್ಷರಿಗೆ ರಾಜೀನಾಮೆ ರವಾನಿಸಿದ್ದು, ತಮ್ಮ ಬೆಂಬ ಲಿಗರ ಮೂಲಕ ರಾಜೀನಾಮೆ ಪತ್ರವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.

ಜಿಂದಾಲ್ ಕಂಪನಿಯ ಉಕ್ಕು ಸ್ಥಾವರಕ್ಕೆ ಬಳ್ಳಾರಿ ಜಿಲ್ಲೆಯಲ್ಲಿ 3,667 ಎಕರೆ ಭೂಮಿ ಪರಭಾರೆ ಮಾಡಲು
ಹೊರಟಿರುವುದನ್ನು ವಿರೋಧಿಸಿ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಭೂಮಿ ಪರಭಾರೆ ಜೊತೆಗೆ ತಮ್ಮ ಮೇಲೆ ಹಲ್ಲೆ ಮಾಡಿದ್ದ ಪಕ್ಷದ ಶಾಸಕ ಕಂಪ್ಲಿ ಗಣೇಶ್ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲು ಸರ್ಕಾರ ಹಿಂಜರಿಯುತ್ತಿದೆ ಎಂಬ ಅಸಮಾಧಾನವೂ ಸೇರಿದೆ.

ಆನಂದ್ ಸಿಂಗ್ ರಾಜ್ಯಪಾಲರನ್ನು ಭೇಟಿ ಮಾಡಿ, ತಮ್ಮ ರಾಜೀನಾಮೆ ಪತ್ರನ್ನು ನೀಡಿದ್ದಲ್ಲದೆ, ಇದನ್ನು ಅಂಗೀಕರಿಸುವಂತೆ ವಿಧಾನಮಂಡಲ ಸಚಿವಾಲಯಕ್ಕೆ ಶಿಫಾರಸು ಮಾಡಬೇ ಕೆಂದು ಮನವಿ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ ತಾವು ಯಾವ ಕಾರಣಕ್ಕೆ ರಾಜೀನಾಮೆ ನೀಡುತ್ತಿದ್ದೇವೆ ಎಂಬ ಬಗ್ಗೆ ಪೂರ್ಣ ಮಾಹಿತಿಯನ್ನು ದಾಖಲೆ ಸಮೇತ ರಾಜ್ಯಪಾಲರ ಗಮನಕ್ಕೆ ತಂದಿದ್ದಾರೆ. ರಾಜ್ಯಪಾಲರ ಭೇಟಿ ಮಾಡಿ ರಾಜೀನಾಮೆ ನೀಡುತ್ತಿದ್ದಂತೆ ವಿಧಾನಸಭಾಧ್ಯಕ್ಷರ ಕಾರ್ಯಾಲಯ ಹೇಳಿಕೆ ಬಿಡುಗಡೆ ಮಾಡಿ, ಇಂದು ಮಧ್ಯಾಹ್ನ 2 ಗಂಟೆಗೆ ಆನಂದ್ ಸಿಂಗ್ ಅವರ ರಾಜೀನಾಮೆ ಪತ್ರ ಕಚೇರಿಗೆ ತಲುಪಿರುತ್ತದೆ. ಈ ಕುರಿತು ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆ ನಿಯಮಗಳ ಪ್ರಕಾರ ನಿಯಮಾನುಸಾರ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದೆ.

ಇದರ ನಡುವೆ, ಆಡಳಿತದಲ್ಲಿ ಅವಕಾಶ ದೊರೆಯದ ಸಿದ್ದರಾಮಯ್ಯ ವಿರೋಧಿ ಬಣದ ಕೆಲವು ಕಾಂಗ್ರೆಸ್ ನಾಯಕರು ಹಾಗೂ ಜೆಡಿಎಸ್‍ನ ಒಬ್ಬ ಮುಖಂಡ ಆನಂದ್ ಸಿಂಗ್ ಅವರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಕೆಲ ದಿನಗಳ ಹಿಂದೆ ಆನಂದ್ ಸಿಂಗ್ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ತಮ್ಮ ಈ ಬೇಡಿಕೆ ಗಳನ್ನು ಮುಂದಿಟ್ಟಿದ್ದರು. ಅಷ್ಟೇ ಅಲ್ಲ ಜಿಲ್ಲಾ ಉಸ್ತುವಾರಿ ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಬಳಿಯೂ ಹೇಳಿಕೊಂಡಿದ್ದರು. ಎಲ್ಲವನ್ನು ಸರಿಪಡಿಸುತ್ತೇನೆ ಎಂಬ ಭರವಸೆ ಅವರಿಂದ ದೊರೆತಿತ್ತು, ಆದರೆ ಜಿಂದಾಲ್ ವಿಷಯದಲ್ಲಿ ಪರೋಕ್ಷವಾಗಿ ಸಿದ್ದರಾಮಯ್ಯ ಅವರ ಆಪ್ತರೇ ಭೂಮಿ ಪರಭಾರೆಗೆ ಮುಂದಾಗಿರುವುದರಿಂದ ಸಚಿವರು ಹಿಂದೆ ಸರಿದರು. ಇದರಿಂದ ಬೇಸರಗೊಂಡ ಆನಂದ್ ಸಿಂಗ್, ಸರ್ಕಾರವನ್ನು ಎಚ್ಚರಿಸಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜ್ಯಪಾಲರ ಭೇಟಿ ನಂತರ ಸುದ್ದಿಗಾರರೊಂ ದಿಗೆ ಮಾತನಾಡಿದ ಆನಂದ್ ಸಿಂಗ್, ರಾಜ್ಯದ ಜನರಿಗೆ ಉದ್ಯೋಗ ಸಿಗಬೇಕು, ಹಾಗೆಂದು ಜಿಂದಾಲ್‍ಗೆ ಭೂಮಿ ಪರಭಾರೆ ಮಾಡಬೇಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದೆ. ಅದಕ್ಕೆ ಬೆಲೆ ಸಿಗದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದೇನೆ, ಅಷ್ಟೇ ಅಲ್ಲ ನನ್ನ ಜಿಲ್ಲೆಗೆ ದೊರೆಯಬೇಕಾದ ನ್ಯಾಯ ಈ ಸರ್ಕಾರದಿಂದ ಸಿಗುತ್ತಿಲ್ಲ, ಅನ್ಯಾಯವನ್ನೂ ಸರಿಪಡಿಸಿಲ್ಲ, ಇದರ ವಿರುದ್ಧ ಧ್ವನಿ ಎತ್ತದಿದ್ದರೆ ನಾನು ಇದ್ದೂ ಇಲ್ಲದಂತೆ. ಈ ವಿಷಯ ದಲ್ಲಿ ಬೇರೆ-ಬೇರೆ ಸರ್ಕಾರಗಳು ತಪ್ಪು ಮಾಡಿರಬಹುದು, ಅದೇ ತಪ್ಪನ್ನು ನಮ್ಮ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಮಾಡಬಾರದಿತ್ತು ಎಂದರು. ನಾನೇನು ಆಪರೇಷನ್ ಕಮಲಕ್ಕೆ ಒಳಗಾಗಿಲ್ಲ, ನನಗೆ, ನನ್ನ ಜಿಲ್ಲೆ ಮುಖ್ಯ, ಸಚಿವ ಸ್ಥಾನಕ್ಕೂ ಅಂಟಿಕೊಂಡು ಕೂತಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಮಧ್ಯೆ, ರಮೇಶ್ ಜಾರಿಕಿಹೊಳಿ, ವಿಧಾನಸಭಾ ಕಾರ್ಯಾಲಯಕ್ಕೆ ಫ್ಯಾಕ್ಸ್ ಮೂಲಕ ರಾಜೀನಾಮೆ ಪತ್ರ ಕಳುಹಿಸಿದ್ದಾರೆ ಎಂಬ ಸುದ್ದಿ ಪ್ರಕಟಗೊಂಡಿದೆ. ವಿಧಾನಸಭಾ ಸದಸ್ಯತ್ವಕ್ಕೆ ಮತ್ತಷ್ಟು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿ ಪ್ರಸಾರವಾಗುತ್ತಿದ್ದಂತೆ, ವಾಹಿನಿಗಳಲ್ಲಿ ಹೆಸರಿಸಲಾಗುತ್ತಿರುವ ಶಾಸಕರು, ತಮಗೆ ಅಸಮಾಧಾನವಿದೆ, ಆದರೆ, ಶಾಸಕ ಸ್ಥಾನ ತೊರೆಯುವ ತೀರ್ಮಾನ ಕೈಗೊಳ್ಳುವುದಿಲ್ಲ ಎಂದಿದ್ದಾರೆ. ನಾನು ಯಾವುದೇ ಶಾಸಕರ ಗುಂಪಿನಲ್ಲಿ ಗುರು ತಿಸಿಕೊಂಡಿಲ್ಲ, ಆನಂದ್‍ಸಿಂಗ್ ರಾಜೀನಾಮೆ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ ಎಂದು ಕಾಂಗ್ರೆಸ್ ಶಾಸಕ ಬಿ.ಸಿ.ಪಾಟೀಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ನಾನು ಮನೆಯಲ್ಲೇ ಇದ್ದೇನೆ. ಆದರೂ ಬಿ.ಸಿ.ಪಾಟೀಲ್ ರಾಜೀನಾಮೆ ಎಂಬ ಸುದ್ದಿಗಳು ಹರಡುತ್ತಿವೆ, ನಾನು ರಾಜೀನಾಮೆ ಕೊಡುವುದಿಲ್ಲ ಎಂದಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಹಿರಿಯರನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿರುವ ಶಾಸಕ ವಿ.ಮುನಿಯಪ್ಪ, ಪಕ್ಷ ಬಿಡುವ ಪ್ರಯತ್ನ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಸಚಿವ ಸಂಪುಟ ವಿಸ್ತರಣೆ ವೇಳೆ ತಮಗೆ ಅವಕಾಶ ತಪ್ಪಿದೆ. ಇದರಿಂದ ನನಗೂ ತುಂಬ ನೋವಿದೆ, ದಶಕಗಳಿಂದ ಪಕ್ಷಕ್ಕಾಗಿ ದುಡಿದಿದ್ದರೂ ಗುರುತಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿದರು.

ಅತೃಪ್ತರ ಗುಂಪಿನಿಂದ ನಮ್ಮ ಹೆಸರು ತೆಗೆದು ಹಾಕಿ ಮಾಧ್ಯಮಗಳಿಗೆ `ಕೈ’ ಶಾಸಕರಿಂದ ಮನವಿ
ಬೆಂಗಳೂರು: ಕಾಂಗ್ರೆಸ್ ಶಾಸಕರಾದ ಆನಂದ್ ಸಿಂಗ್ ಮತ್ತು ರಮೇಶ್ ಜಾರಕಿಹೊಳಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇನ್ನೂ ಅತೃಪ್ತಗೊಂಡಿರುವ ಶಾಸಕರು ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಅತೃಪ್ತರ ಗುಂಪಿನಲ್ಲಿ ತಮ್ಮ ಹೆಸರು ಕೇಳಿ ಬಂದಿರುವ ಹಿನ್ನೆಲೆ ಆ ಗುಂಪನಿಂದ ತಮ್ಮ ಹೆಸರನ್ನು ತೆಗೆದು ಹಾಕುವಂತೆ ಮಾಧ್ಯಮದವರಿಗೆ ಕಾಂಗ್ರೆಸ್ ಶಾಸಕರಾದ ಭೀಮಾನಾಯ್ಕ್, ಪ್ರತಾಪ್ ಗೌಡ ಪಾಟೀಲ್ ಮತ್ತು ಅಮರೇಗೌಡ ಬಯ್ಯಪುರ ಮನವಿ ಮಾಡಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿರುವ ಮೂವರು ಶಾಸಕರು, ನಾವು ಕಾಂಗ್ರೆಸ್ ಪಕ್ಷದಲ್ಲೇ ಇರುತ್ತೇವೆ. ಅತೃಪ್ತರ ಗುಂಪಿನಿಂದ ನಮ್ಮ ಹೆಸರನ್ನ ತೆಗೆದು ಹಾಕಿ. ನಾವು ಬಿಜೆಪಿಗೆ ಹೋಗುವ ಅನಿವಾರ್ಯತೆ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇದಕ್ಕೂ ಮುನ್ನ ಟ್ವಿಟ್ಟರ್‍ನಲ್ಲಿ ಟ್ವಿಟ್ ಮಾಡಿದ್ದ ಶಾಸಕ ಭೀಮನಾಯ್ಕ್, ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡ್ತಿಲ್ಲ. ರಾಜೀನಾಮೆ ನೀಡ್ತೇನೆ ಅನ್ನೊದು ಸುಳ್ಳು ಸುದ್ದಿ. ನಾನು ಕಾಂಗ್ರೆಸ್ ಸಿದ್ಧಾಂತ ಒಪ್ಪಿಕೊಂಡವನು. ಈ ರೀತಿಯ ನಿರಾಧಾರ ಸುದ್ದಿ ಯಾರೂ ನಂಬಬೇಡಿ. ಸುದ್ದಿ ಪ್ರಕಟಿಸುವ ಮುನ್ನ ಮಾಧ್ಯಮದವರು ದೃಢಪಡಿಸಿಕೊಳ್ಳಿ ಎಂದು ಟ್ವೀಟ್ ಮಾಡಿದ್ದರು.

ರಿವರ್ಸ್ ಆಪರೇಷನ್ ಮಾಡಲು ಹಿಂಜರಿಯಲ್ಲ: ದಿನೇಶ್ ಗುಂಡೂರಾವ್
ಬೆಂಗಳೂರು: ಬಿಜೆಪಿಯವರು ಮೈತ್ರಿ ಸರ್ಕಾರ ಅಸ್ಥಿರಗೊಳಿಸಿ, ಗೊಂದಲ ಮೂಡಿಸಲು ಮುಂದಾಗಿದ್ದಾರೆ. ಸರ್ಕಾರ ಅಸ್ಥಿರ ಗೊಳಿಸಲು ಮುಂದಾದರೆ ನಾವೂ ಸಹ ರಿವರ್ಸ್ ಆಪರೇಷನ್ ಮಾಡಲು ಹಿಂಜರಿಯುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾ ಡಿದ ಅವರು, ಬಿಜೆಪಿ ನಾಯಕರು ಕೆಲ ಶಾಸಕರನ್ನು ಬೆದರಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಐಟಿ, ಇಡಿ, ಸಿಬಿಐ ಸಂಸ್ಥೆಗಳನ್ನು ಬಳಸಿಕೊಂಡು ಬೆದರಿಕೆಯ ಕುತಂತ್ರ ರಾಜ ಕಾರಣವನ್ನು ಮಾಡುತ್ತಿದ್ದಾರೆ. ಮೈತ್ರಿ ಸರ್ಕಾ ರಕ್ಕೆ ಬಹುಮತವಿದೆ. ರಾಜಕಾರಣದಲ್ಲಿ ಅಂತಹ ಪರಿಸ್ಥಿತಿಗಳು ಎದುರಾದರೆ ಎದುರಿಸುವ ಶಕ್ತಿ ಸಾಮಥ್ರ್ಯ ನಮಗೆ ಇದೆ. ಅವಶ್ಯಕತೆ ಬಿದ್ದರೆ ತಿರುಗೇಟು ನೀಡಲೂ ನಾವು ಸಿದ್ಧರಿದ್ದೇವೆ. ಅವರು ಪ್ರಯತ್ನ ಮುಂದು ವರಿಸಿದರೆ ತಕ್ಕ ಉತ್ತರವನ್ನು ಹೇಗೆ, ಯಾವಾಗ, ನೀಡಬೇಕು ಎಂಬುದು ನಮಗೂ ತಿಳಿದಿದೆ ಎಂದು ದಿನೇಶ್ ಗುಂಡೂರಾವ್ ಬಿಜೆಪಿ ನಾಯಕ ರಿಗೆ ಎಚ್ಚರಿಕೆ ಸಂದೇಶ ರವಾನಿಸಿ ದ್ದಾರೆ. ಆನಂದ್ ಸಿಂಗ್ ಯಾವ ಕಾರಣಕ್ಕೆ ರಾಜೀ ನಾಮೆ ನೀಡಿದ್ದಾರೆ ಎಂಬುದು ಇನ್ನೂ ಅರ್ಥ ವಾಗುತ್ತಿಲ್ಲ. ಆನಂದ್ ಸಿಂಗ್ ಬಳಿ ಖುದ್ದಾಗಿ ತಾವೇ ಕರೆ ಮಾಡಿ ಮಾತನಾಡುತ್ತೇನೆ. ಅವರು ತಮ್ಮ ಒಳ್ಳೆಯ ಸ್ನೇಹಿತರು, ಜಿಂದಾಲ್ ವಿಚಾರದಲ್ಲಿ ಆನಂದ್ ಸಿಂಗ್ ರಾಜಿನಾಮೆ ನೀಡುವ ಅಗತ್ಯವಿರಲಿಲ್ಲ, ಜಿಂದಾಲ್ ಜಮೀನು ಹಂಚಿಕೆ ಪ್ರಕರಣದ ಮರು ಪರಿಶೀಲನೆಗೆ ಸಚಿವ ಸಂಪುಟ ಉಪಸಮಿತಿ ರಚಿಸಲಾಗಿದೆ. ಅದಕ್ಕಾಗಿ ಅವರು ರಾಜಿನಾಮೆ ನೀಡುವ ವಿಚಾರವಲ್ಲ. ಆನಂದ್ ಸಿಂಗ್ ಯಾವ ಕಾರಣಕ್ಕೆ, ಏನು ಒತ್ತಡಕ್ಕೆ ಒಳಗಾಗಿ ರಾಜೀನಾಮೆ ನೀಡಿದ್ದಾರೆ ಎಂಬುದು ತಿಳಿದಿಲ್ಲ ಎಂದರು.

ಕಂಗೆಟ್ಟ ಕಾಂಗ್ರೆಸ್‍ನಿಂದ ಸರಣಿ ಸಭೆ
ಬೆಂಗಳೂರು: ಕಾಂಗ್ರೆಸ್ ಶಾಸಕರ ರಾಜೀನಾಮೆ ಪರ್ವ ಆರಂಭವಾಗುತ್ತಿ ದ್ದಂತೆಯೇ ರಾಜ್ಯ ಕಾಂಗ್ರೆಸ್ ನಾಯಕರು ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಕಾರ್ಯ ತಂತ್ರ ಹೆಣೆಯುವಲ್ಲಿ ಮಗ್ನರಾಗಿದ್ದಾರೆ. ಆನಂದ್ ಸಿಂಗ್ ಮತ್ತು ರಮೇಶ್ ಜಾರಕಿಹೊಳಿ ರಾಜೀನಾಮೆ ವಿಷಯ ಹೊರ ಬೀಳುತ್ತಿದ್ದಂತೆಯೇ ಕಾಂಗ್ರೆಸ್ ಮುಖಂಡರು ಸರಣಿ ಸಭೆ ನಡೆಸಲು ಆರಂಭಿಸಿದರು. ಕೆಲವು ಅತೃಪ್ತ ಶಾಸಕರನ್ನು ಬೆಂಗಳೂರಿಗೆ ಕರೆಸಿ ಕೊಂಡು ಮನವೊಲಿಸಲು ಆರಂಭಿಸಿದರು. ಸದಾಶಿವನಗರದ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಆಗಮಿಸಿದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಹತ್ವದ ಸಮಾ ಲೋಚನೆ ಸಭೆ ನಡೆಸಿದರು. ನಂತರ ಇವರಿಬ್ಬರೂ ಒಂದೇ ಕಾರಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ತೆರಳಿ ಸರ್ಕಾರ ಉಳಿಸಿಕೊಳ್ಳುವ ಬಗ್ಗೆ ಚರ್ಚೆ ನಡೆಸಿದರು. ಈ ವೇಳೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಹ ಈ ಚರ್ಚೆಯಲ್ಲಿ ಭಾಗವಹಿಸಿದ್ದರು. ಅತೃಪ್ತ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ನಿಟ್ಟಿನಲ್ಲಿ ಚರ್ಚೆಗಳು ನಡೆದಿದ್ದು, ಕೆಲ ಸಚಿವರಿಂದ ರಾಜೀನಾಮೆ ಕೊಡಿಸಿ, ಅತೃಪ್ತ ಶಾಸಕರಿಗೆ ಸಚಿವ ಸ್ಥಾನ ನೀಡುವ ಬಗ್ಗೆಯೂ ಚರ್ಚಿಸಲಾಯಿತು ಎಂದು ಹೇಳಲಾಗಿದೆ. ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಡಾ. ಜಿ. ಪರಮೇಶ್ವರ್, ಬಿಜೆಪಿಯವರು ಮೈತ್ರಿ ಸರ್ಕಾರವನ್ನು ಪತನಗೊಳಿಸಲು ಒಂದು ವರ್ಷದಿಂದ ಪ್ರಯತ್ನಿಸುತ್ತಿದ್ದಾರೆ. ಆದರೆ, ಅದು ನಡೆಯುವುದಿಲ್ಲ ಎಂದು ಹೇಳಿದರು.