ದಲಿತರ ವಿಳ್ಯೆದೆಲೆ ತೋಟಗಳ ಉಳಿಸಲು ಆಗ್ರಹಿಸಿ ಅರೆಬೆತ್ತಲೆ ಮೆರವಣಿಗೆ, ಧರಣಿ

ಮೈಸೂರು: ದಲಿತರ ವಿಳ್ಯೆದೆಲೆ ತೋಟಗಳನ್ನು ಉಳಿಸಬೇಕು. 245 ವಿಳ್ಯೆದೆಲೆ ವ್ಯವಸಾಯಗಾರರಿಗೆ ಹಕ್ಕು ಪತ್ರ ನೀಡಬೇಕು ಎಂದು ಆಗ್ರಹಿಸಿ ವಿಳ್ಯೆದೆಲೆ ರೈತರ ಭೂ ಹೋರಾಟ ಸಮಿತಿ ಆಶ್ರಯದಲ್ಲಿ ನೂರಾರು ಮಂದಿ ಬುಧವಾರ ಮೈಸೂರಿನಲ್ಲಿ ಅರೆಬೆತ್ತಲೆ ಮೆರವಣಿಗೆ ನಡೆಸಿ, ಬಳಿಕ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಡೆಸಿದರು.

ಮೈಸೂರು ನ್ಯಾಯಾಲಯ ಎದುರಿನ ಗಾಂದಿ ಪುತ್ಥಳಿ ಬಳಿಯಿಂದ ಅರೆ ಬೆತ್ತಲೆ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಬಂದು ಅಲ್ಲಿ ಧರಣಿ ಕುಳಿತರು. ವಿಳ್ಯೆದೆಲೆ ಬೆಳೆದು ಜೀವನ ನಿರ್ವಹಿಸುತ್ತಿದ್ದ ಕುಟುಂಬಗಳು ಕೆಲವು ರಿಯಲ್ ಎಸ್ಟೇಟ್ ದಂಧೆಕೋರರ ಕುತಂತ್ರದಿಂದ ಬೀದಿ ಪಾಲಾಗಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಅಶೋಕಪುರಂ ಜನತೆಗೆ ದೇವರಾಜು ಅರಸು ಮತ್ತು ಬಸವಲಿಂಗಪ್ಪನವರು ಜಾರಿಗೆ ತಂದ ಭೂ ಸುಧಾರಣಾ ಕಾಯ್ದೆ 1976ರ ಅಡಿ ಸಿಕ್ಕಿದ್ದ ತುಂಡು ಭೂಮಿಯಲ್ಲಿ ನಮ್ಮ ಹಿರಿಯರು ವಿಳ್ಯೆದೆಲೆ ಬೇಸಾಯ ಮಾಡಿಕೊಂಡು ವಿಶ್ವವೇ ಕೊಂಡಾಡುವಂತೆ ಮೈಸೂರಿನ ಖ್ಯಾತಿಯನ್ನು ಮುಗಿಲೆತ್ತರಕ್ಕೆ ಬೆಳೆಸಿದ್ದರು. ಆದರೆ ಇಂತಹ ಚಿನ್ನದ ಭೂಮಿಯನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳುವ ಮೂಲಕ ಹಲವರು ದಲಿತ ಸಮುದಾಯದವರ ಜೀವನವನ್ನು ಹಾಳು ಮಾಡಿದ್ದಾರೆ. ಇವರಿಗೆ ಕೆಲವು ದಲಿತ ನಾಯಕರೇ ಮಧ್ಯವರ್ತಿಯಾಗಿ ಕೆಲಸ ಮಾಡಿ, ನಮ್ಮನ್ನು ನಡು ಬೀದಿಗೆ ತಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮಗಾಗಿರುವ ಅನ್ಯಾಯಕ್ಕೆ ನ್ಯಾಯ ಸಿಗಬೇಕು. ಪರಿಶಿಷ್ಟ ಜಾತಿ, ವರ್ಗಗಳ ವಿಳ್ಯೆದೆಲೆ ಭೂಮಿಯನ್ನು ಅಕ್ರಮ ಮತ್ತು ಕಾನೂನು ಬಾಹಿರವಾಗಿ ಕ್ರಯಕ್ಕೆ ಪಡೆದು ಸದರಿ ಭೂಮಿಗಳಲ್ಲಿ ಮುನಿಸಿಪಲ್ ಆಕ್ಟ್ 1976 ಕಾಲಂ 321ನ್ನು ಉಲ್ಲಂಘಿಸಿ ನಿರ್ಮಾಣಗೊಂಡಿರುವ ಕಟ್ಟಡಗಳನ್ನು ತೆರವುಗೊಳಿಸಬೇಕು. ವಿಳ್ಯೆದೆಲೆ ಭೂಮಿಗಳನ್ನು ಖರೀದಿಸಿರುವ ರಿಯಲ್ ಎಸ್ಟೇಟ್ ಮಾಫಿಯಾ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. 40 ವರ್ಷಗಳಿಂದಲೂ ಹಕ್ಕುಪತ್ರಕ್ಕಾಗಿ ಹೋರಾಟ ನಡೆಸುತ್ತಿರುವ 245 ಜನ ವಿಳ್ಯೆದೆಲೆ ಭೂಮಿ ರೈತರಿಗೆ ಮೈಸೂರು ಮಹಾನಗರ ಪಾಲಿಕೆ ಕೂಡಲೇ ಹಕ್ಕುಪತ್ರ ವಿತರಿಸಬೇಕು. ಜೆಎಸ್‍ಎಸ್ ಆಸ್ಪತ್ರೆಗಾಗಿ ಭೂಮಿ ಕಳೆದುಕೊಂಡ ವಿಳ್ಯೆದೆಲೆ ರೈತರಿಗೆ ತಲಾ 2 ಎಕರೆ ಜಮೀನು ನೀಡಬೇಕು. ಅಂದು ನೀಡಿದ್ದ ಭರವಸೆಯಂತೆ ಭೂಮಿ ಕಳೆದುಕೊಂಡ ಪ್ರತಿ ಕುಟುಂಬಕ್ಕೂ ಒಂದು ಉದ್ಯೋಗ ನೀಡಬೇಕು. ಸರ್ವೆ ನಂ:16 ಮತ್ತು 17ರ ಪ್ರಕರಣ ಸಂಖ್ಯೆ ಕೆಎಲ್‍ಆರ್‍ಎಂ:3566ರಿಂದ 3539/74-75ರ ಪ್ರಕರಣದಲ್ಲಿ ಮೈಸೂರು ಹಾಗೂ ವಿಶೇಷ ಭೂ ಸ್ವಾಧೀನಾಧಿಕಾಧಿಕಾರಿಯು ಬದುಕಿರುವ ದೂರುದಾರ ವೆಂಕಟೇಶ್ ಬದುಕಿದ್ದರೂ ನಿಧನರಾಗಿದ್ದಾರೆಂದು ಉಲ್ಲೇಖಿಸಿ ಏಕ ಪಕ್ಷೀಯ ನಿರ್ಧಾರ ಕೈಗೊಂಡು ಆದೇಶ ನೀಡಿರುವ ಅಧಿಕಾರಿಯನ್ನು ಅಮಾನತುಗೊಳಿಸಿ, ತನಿಖೆ ನಡೆಸಬೇಕು. ತಾಲೂಕು ಆಡಳಿತ ಸ್ವಯಂ ಪ್ರೇರಿತವಾಗಿ 1978ರಿಂದ 1984ರವರೆಗೆ ವಿಳ್ಯೆದೆಲೆ ಭೂಮಿಗೆ ಹಕ್ಕುಪತ್ರ ಪಡೆದಿರುವ ಗೇಣಿದಾರರ ಹೆಸರಿಗೆ ಖಾತೆ ನೊಂದಣಿ ಮಾಡುವ ಆದೇಶವನ್ನು ಜಿಲ್ಲಾಡಳಿತ ಹೊರಡಿಸಬೇಕು. ಸುಮಾರು 25 ಮಂದಿಗೆ ಚಿಕ್ಕಾಟೂರಿನಲ್ಲಿ ಬದಲಿ ಭೂಮಿ ನೀಡಿರುವ ಸರ್ಕಾರ ಸದರಿ ಭೂಮಿಯಲ್ಲಿರುವ ಅಕ್ರಮದಾರರನ್ನು ತೆರವುಗೊಳಿಸಿ ವಿಳ್ಯೆದೆಲೆ ಬೆಳೆಗಾರರ ಬೆಳೆ ಬೆಳೆಯಲು ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅವರಿಗೆ ಮನವಿ ಪತ್ರ ಸಲ್ಲಿಸಿದ ಪ್ರತಿಭಟನಾಕಾರರು ಆಗಿರುವ ಅನ್ಯಾಯ ಕುರಿತು ವಿವರಿಸಿದರು. ಬಳಿಕ ಜಿಲ್ಲಾಧಿಕಾರಿಗಳು, ಈ ಸಂಬಂಧ ಪಾಲಿಕೆ ಅಧಿಕಾರಿಗಳಿಂದ ಸಮಸ್ಯೆ ಕುರಿತಂತೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ತಿಳಿಸಲಾಗುವುದು. ಜು.30ರೊಳಗೆ ಸಾಧ್ಯವಾದಷ್ಟು ಸಮಸ್ಯೆ ಬಗೆಹರಿಸುವುದಾಗಿ ನೀಡಿದ ಭರವಸೆ ಮೇರೆಗೆ ಪ್ರತಿಭಟನಾಕಾರರು ಅನಿರ್ಧಿಷ್ಟಾವಧಿಯ ಧರಣಿ ವಾಪಸು ಪಡೆದುಕೊಂಡರು.

ಪ್ರತಿಭಟನೆಯಲ್ಲಿ ಮೈಸೂರಿನ ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ, ವಿಳ್ಯೆದೆಲೆ ರೈತರ ಭೂ ಹೋರಾಟ ಸಮಿತಿ ಗೌರವಾಧ್ಯಕ್ಷ ವೆಂಕಟೇಶ್, ಅಧ್ಯಕ್ಷ ಪಿ.ಕುಮಾರ್, ಉಪಾಧ್ಯಕ್ಷ ಚಿದಂಬರ, ಕಾರ್ಯದರ್ಶಿ ಜಯಶಂಕರ್, ಶ್ರೀಧರ್, ದಸಂಸದ ಬೆಟ್ಟಯ್ಯಕೋಟೆ, ಈಶ್ವರ ಚಕ್ಕಡಿ, ಶ್ರೀಧರ್ ಇನ್ನಿತರರು ಪಾಲ್ಗೊಂಡಿದ್ದರು.