ನಡೆದಾಡುವ ದೇವರಿಗೆ ಮೈಸೂರಿನಲ್ಲಿ ಭಕ್ತಿ ನಮನ

ಮೈಸೂರು: ನಡೆದಾಡುವ ದೇವರು, ಶತಾಯುಷಿ, ತ್ರಿವಿಧ ದಾಸೋಹಿ, ಅಭಿನವ ಬಸವಣ್ಣ ಎಂದೇ ಹೆಸರಾಗಿದ್ದ ಸಿದ್ಧಗಂಗಾ ಮಠದ ಹಿರಿಯ ಶ್ರೀ ಡಾ.ಶಿವಕುಮಾರ ಸ್ವಾಮೀಜಿ ಅಗಲಿಕೆಗೆ ಮೈಸೂರಿನಾದ್ಯಂತ ಮಂಗಳವಾರ ನಾನಾ ಕಡೆಗಳಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮಗಳು ನಡೆದವು.

ಮೈಸೂರು ಜಿಲ್ಲಾ ಕುಂಚ ನಾಮಫಲಕ ಕಲಾವಿದರ ಸಂಘ, ಮೈಸೂರು ಕನ್ನಡ ವೇದಿಕೆ, ರಾಜ್ಯ ಕಬ್ಬು ಬೆಳೆಗಾರರ ಸಂಘ, ಬಸವೇಶ್ವರ ಸೇವಾ ಸಂಘ, ಸಂತೇಪೇಟೆ ಕಾರ್ಮಿಕರ ಸಂಘ, ಬಸವ ಚಿಂತನ ಬಳಗ, ಶ್ರೀಗಳ ಭಕ್ತ ವೃಂದ ಸೇರಿದಂತೆ ನಾನಾ ಸಂಘಟನೆಗಳು ಶ್ರೀಗಳ ಭಾವಚಿತ್ರ ಪೂಜಿಸಿ, ನಮನ ಸಲ್ಲಿಸಿದರು.

ಸಂತೇಪೇಟೆ ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಶ್ರೀಗಳಿಗೆ ಗೌರವ ಸಲ್ಲಿಸಿದರು. ಮೈಸೂರು ಅರಮನೆ ಪ್ರವೇಶ ರದ್ದುಪಡಿಸಿದ್ದರಿಂದ ಅರಮನೆ ದ್ವಾರಗಳೆಲ್ಲವೂ ಮುಚ್ಚಲ್ಪಟ್ಟಿ ದ್ದವು. ದ್ವಾರಗಳಲ್ಲಿ ಶ್ರೀಗಳ ಭಾವಚಿತ್ರ ತೂಗು ಹಾಕಲಾಗಿತ್ತು.

ಮೈಸೂರಿನ ಬಹುತೇಕ ರಸ್ತೆ, ವೃತ್ತಗಳಲ್ಲಿ ಡಾ.ಶಿವಕುಮಾರ ಸ್ವಾಮೀಜಿಯವರ ಆಳೆತ್ತರದ ಭಾವಚಿತ್ರಗಳನ್ನು ಇಟ್ಟು ಪೂಜೆ ಸಲ್ಲಿಸಿ, ಭಕ್ತಿ ಸಮರ್ಪಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.

ಮೈಸೂರಿನ ರಾಮಕೃಷ್ಣಗರ ವೃತ್ತದಲ್ಲಿ ರಾಮಕೃಷ್ಣ ಪರಮ ಹಂಸರ ಪ್ರತಿಮೆ ಎದುರು ಬಸವೇಶ್ವರ ಸೇವಾ ಸಂಘದ ಆಶ್ರಯ ದಲ್ಲಿ ರಾಮಕೃಷ್ಣನಗರ ನಿವಾಸಿಗಳು ಶ್ರೀಗಳ ಭಾವಚಿತ್ರವಿಟ್ಟು ಪೂಜಿಸಿ, ಶ್ರದ್ಧಾಂಜಲಿ ಸಮರ್ಪಿಸಿದರು. ವಚನ ಪಾರಾಯಣ ಮಾಡಿ ಶ್ರೀಗಳಿಗೆ ನಮನ ಸಲ್ಲಿಸಿದರು. ಮಹಾನಗರ ಪಾಲಿಕೆ ಸದಸ್ಯರಾದ ಲಕ್ಷ್ಮಿ, ಮಾಜಿ ಎಂಎಲ್‍ಸಿ ಮಾದೇಗೌಡ ಇನ್ನಿತರರು ಉಪಸ್ಥಿತರಿದ್ದರು.

ಅಗ್ರಹಾರ ವೃತ್ತದ ಬಳಿ ಮೈಸೂರು ಕನ್ನಡ ವೇದಿಕೆ ಕಾರ್ಯ ಕರ್ತರು ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಶ್ರೀಗಳ ಕೊಡುಗೆ ಯನ್ನು ಸ್ಮರಿಸಿದರು. ಈ ವೇಳೆ ಮಾತನಾಡಿದ ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ, ಯಾವ ಸರ್ಕಾರವೂ ಮಾಡಲಾಗದ ಕಾರ್ಯವನ್ನು ಸಿದ್ಧಗಂಗಾ ಶ್ರೀಗಳು ಮಾಡಿದ್ದಾರೆ. ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು. ಮೈಸೂರಿನ ಪ್ರಮುಖ ವೃತ್ತದಲ್ಲಿ ಶ್ರೀಗಳ ಪ್ರತಿಮೆ ಸ್ಥಾಪಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು. ಈ ಸಂದರ್ಭದಲ್ಲಿ ವೇದಿಕೆ ಪದಾಧಿಕಾರಿಗಳಾದ ನಾಲಾಬೀದಿ ರವಿ, ಬೋಗಾದಿ ಸಿದ್ದೇ ಗೌಡ, ಪ್ಯಾಲೇಸ್ ಬಾಬು ಇನ್ನಿತರರು ಉಪಸ್ಥಿತರಿದ್ದರು.

ಆರ್‍ಟಿಓ ಕಚೇರಿ ಬಳಿಯಿರುವ ಲಕ್ಷ್ಮಿಪುರಂ ಪೊಲೀಸ್ ಠಾಣೆಯ ಎದುರು ಪೊಲೀಸರು ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಉದಯಗಿರಿ ಪೊಲೀಸ್ ಠಾಣೆಯಲ್ಲೂ ಪೊಲೀಸರು ಶ್ರೀಗಳ ಭಾವಚಿತ್ರಕ್ಕೆ ಹಾರ ಹಾಕಿ, ಪೂಜೆ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು. ಡಾ.ರಾಜ್‍ಕುಮಾರ್ ಉದ್ಯಾನದ ಬಳಿಯೂ ಶ್ರೀಗಳ ಭಾವಚಿತ್ರ ಇಟ್ಟು ಸಂತಾಪ ಸೂಚಿಸಲಾಯಿತು.

ಮಧ್ಯಾಹ್ನದ ಬಿಸಿಯೂಟಕ್ಕೆ ಶ್ರೀಗಳ ಹೆಸರಿಡಲು ಸಲಹೆ
ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಗನ್‍ಹೌಸ್ ಬಳಿಯ ಕುವೆಂಪು ಉದ್ಯಾನವನದಲ್ಲಿ ಶ್ರದ್ಧಾಂಜಲಿ ಸಭೆ ಏರ್ಪಡಿಸಿ, ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಈ ಸಂದರ್ಭ ದಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ವಿಶ್ವಾದ್ಯಂತ ಭಕ್ತರನ್ನು ಹೊಂದಿರುವ ಶ್ರೀಗಳು ರಾಜ್ಯ ಸರ್ಕಾರ ವನ್ನೇ ನಾಚಿಸುವ ರೀತಿಯಲ್ಲಿ ಅನ್ನ ಮತ್ತು ಅಕ್ಷರ ದಾಸೋಹ ನಡೆಸಿದ್ದಾರೆ. ಭಕ್ತಿ ದಾಸೋಹದ ಮೂಲಕ ಅಪಾರ ಭಕ್ತರನ್ನು ಹೊಂದಿರುವ ಅವರಿಗೆ ಭಾರತ ರತ್ನ ನೀಡಬೇಕು. ಸರ್ಕಾರ ಶಾಲಾ ಮಕ್ಕಳಿಗೆ ನೀಡುವ ಮಧ್ಯಾಹ್ನದ ಬಿಸಿ ಯೂಟಕ್ಕೆ `ಸಿದ್ಧಗಂಗಾ ಶ್ರೀ ದಾಸೋಹ ಯೋಜನೆ’ ಎಂದು ನಾಮಕರಣ ಮಾಡಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಸಂಘದ ರಾಜ್ಯ ಕಾರ್ಯದರ್ಶಿ ಅತ್ತಹಳ್ಳಿ ದೇವ ರಾಜ್, ಜಿಲ್ಲಾಧ್ಯಕ್ಷ ಪಿ.ಸೋಮಶೇಖರ್, ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯ ರಾಜ್, ಪ್ರಧಾನ ಕಾರ್ಯದರ್ಶಿ ಕಿರಗ ಸೂರು ಶಂಕರ್, ತಾಲೂಕು ಅಧ್ಯಕ್ಷ ರಾದ ಕುರುಬೂರು ಸಿದ್ದೇಶ್, ವರಕೋಡು ಕೃಷ್ಣೇಗೌಡ, ರಂಗಸಮುದ್ರ ಸುರೇಶ್, ಪಿ.ರಾಜು, ಪ್ರಸಾದನಾಯ್ಕ, ಅಂಬಳೆ ಮಂಜುನಾಥ್, ನಯನಗೌಡ, ವೆಂಕ ಟೇಶ್ ಇನ್ನಿತರರು ಉಪಸ್ಥಿತರಿದ್ದರು.