ಮುಡಾದಿಂದ ಬಲ್ಲಹಳ್ಳಿ ಭೂಸ್ವಾಧೀನ ಖಂಡಿಸಿ ಮಾ.19ರಂದು ರೈತರ ಪ್ರತಿಭಟನೆ

ಮೈಸೂರು: ಬಡಾವಣೆ ನಿರ್ಮಿಸಲು ಬಲ್ಲಹಳ್ಳಿ ಸೇರಿ ಸುತ್ತಮುತ್ತಲ ಹಳ್ಳಿ ಗಳಲ್ಲಿ ಬಲವಂತವಾಗಿ ಭೂಸ್ವಾಧೀನಕ್ಕೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಮುಂದಾ ಗಿದೆ ಎಂದು ಆರೋಪಿಸಿರುವ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ್ ಬಣ), ಮಾ.19ರಂದು ಮೈಸೂ ರಿನಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯ ಕಾರ್ಯದರ್ಶಿ ಡಾ.ಗುರು ಪ್ರಸಾದ್, ಬಡಾವಣೆ ನಿರ್ಮಿಸುವ ಸಲುವಾಗಿ ಫಲವತ್ತಾದ ರೈತರ ಜಮೀನುಗಳನ್ನು ಮುಡಾ ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳಲು ಮುಂದಾ ಗಿದೆ. ಬಲ್ಲಹಳ್ಳಿ ಹಾಗೂ ಇದರ ಸುತ್ತಮುತ್ತಲ ಗ್ರಾಮಗಳಾದ ರಾಮನಹುಂಡಿ, ಮರಟಿಕ್ಯಾತನ ಹಳ್ಳಿ, ಗೌಹಳ್ಳಿ, ಬೀರಿಹುಂಡಿ, ಸಾಲುಂಡಿ, ಕುಮಾರಬೀಡು, ಬಡಗಲಹುಂಡಿ ಸೇರಿದಂತೆ ಮತ್ತಿತರ ಹಳ್ಳಿಗಳಲ್ಲಿ ರೈತರ ಜಮೀನು ಸ್ವಾಧೀನ ಮಾಡಿಕೊಳ್ಳಲಾಗುತ್ತಿದೆ. ರೈತರ ವಿರೋಧ ವಿದ್ದರೂ ಒತ್ತಾಯಪೂರ್ವಕವಾಗಿ ಸ್ವಾಧೀನಕ್ಕೆ ಮುಡಾ ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರ ಭೂ ಸ್ವಾಧೀನ ಕಾಯ್ದೆಗೆ ತಿದ್ದುಪಡಿ ತರಲು ಹೊರ ಟಿದ್ದು, ಬಲ್ಲಹಳ್ಳಿ ಭೂಸ್ವಾಧೀನ ಕೈಬಿಡಬೇಕು ಹಾಗೂ ಭೂಸ್ವಾಧೀನ ಕಾಯ್ದೆಯ ತಿದ್ದುಪಡಿ ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕದಂತೆ ಒತ್ತಾಯಿಸಿ, ಬಲ್ಲಹಳ್ಳಿ ಉಳಿಸಿ ಹೋರಾಟ ಸಮಿತಿ ವತಿಯಿಂದ ಮಾ.19ರಂದು ಬೆಳಿಗ್ಗೆ ಮೈಸೂರಿನ ನ್ಯಾಯಾಲಯದ ಎದುರಿನ ಗಾಂಧಿ ಪುತ್ಥಳಿ ಎದುರಿನಿಂದ ಮುಡಾ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು. ಬಳಿಕ ಮುಡಾ ಎದುರು ಅನಿರ್ದಿಷ್ಟಾವಧಿ ಪ್ರತಿ ಭಟನಾ ಧರಣಿ ನಡೆಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು. ಭೂಸ್ವಾಧೀನ ಮಾಡಲು ಉದ್ದೇಶಿಸಿರುವ ಎಲ್ಲಾ ಹಳ್ಳಿಗಳಲ್ಲಿ ಲೋಕಸಭಾ ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡಲಾಗುವುದು.
ಈಗಾಗಲೇ ಮುಡಾ ದಿವಾಳಿಯಾಗಿದೆ. 1993-94ರಲ್ಲಿ ರಮ್ಮನಹಳ್ಳಿ ಹಾಗೂ ಕೆಸರೆಯಲ್ಲಿ ಭೂ ಸ್ವಾದೀನ ಮಾಡಲಾಗಿದ್ದು, ಈವರೆಗೂ ಇಲ್ಲಿನ ರೈತರಿಗೆ ಪರಿಹಾರ ನೀಡಿಲ್ಲ. ಹಳ್ಳಿ ಬೋಗಾದಿ ಯಿಂದ ಬೀರಿಹುಂಡಿಯವರೆಗಿನ ಎಲ್ಲಾ ಹಳ್ಳಿ ಗಳನ್ನು ಬಿಟ್ಟು ಬಲ್ಲಹಳ್ಳಿ ಹಾಗೂ ಸುತ್ತಮುತ್ತ ಬಡಾವಣೆ ನಿರ್ಮಿಸಲು ಉದ್ದೇಶಿಸಿರುವುದೇಕೆ? ಎಂದು ಪ್ರಶ್ನಿಸಿದರು. ಸಂಘದ ಮುಖಂಡರಾದ ಹೊನ್ನೂರು ಪ್ರಕಾಶ್, ನರಸಿಂಹಮೋಜಿ, ಮಂಜೇಶ್ ಗೌಡ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.