ಹಿರಿಯ ನಟ ಅನಂತ್‍ನಾಗ್ ಅವರಿಂದ ಉದ್ಘಾಟನೆ, `ಗಾಂಧಿ ಪಥ’ ಶೀರ್ಷಿಕೆಯಡಿ ಈ ಬಾರಿ ಮಹಾ ನಾಟಕೋತ್ಸವ: ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ
ಮೈಸೂರು, ಜ.20(ಪಿಎಂ)- ಬಣ್ಣದ ಲೋಕದ ಅಪರೂಪದ `ಬಹುರೂಪಿ’ ಮೈಸೂರು ರಂಗಾಯಣದ ಪ್ರತಿಷ್ಠಿತ ಉತ್ಸವಗಳ ಪೈಕಿ ಬಹುಮುಖ್ಯವಾದ ರಾಷ್ಟ್ರೀಯ ನಾಟಕೋತ್ಸವ. ಪ್ರತಿವರ್ಷ ಸಂಕ್ರಾಂತಿ ಹಬ್ಬದ ಸುಗ್ಗಿ ಸಂಭ್ರಮದಲ್ಲಿ ಇದರ ವರ್ಣರಂಜಿತ ಲೋಕ ತೆರೆದು ಕೊಳ್ಳುವುದು ವಾಡಿಕೆ. ಆದರೆ ಈ ಬಾರಿ ತುಸು ತಡವಾಗಿಯಾದರೂ ವೈವಿ ಧ್ಯತೆಯನ್ನು ವೃದ್ಧಿಸಿಕೊಂಡು ಫೆ.14ರಿಂದ 19ರವರೆಗೆ ಮೈಸೂರಿನಲ್ಲಿ ಹಬ್ಬದ ಸಡಗರ ಮೂಡಿಸಲಿದೆ.
`ಗಾಂಧಿ ಪಥ’ ಶೀರ್ಷಿಕೆಯಡಿ ಈ ಬಾರಿಯ ಬಹುರೂಪಿ ನಡೆಯಲಿದ್ದು, ಮಹಾತ್ಮ ಗಾಂಧೀಯವರ ಬಹುಮುಖ ವ್ಯಕ್ತಿತ್ವ ಅನಾವರಣಗೊಳಿಸಲಿದೆ. ಫೆ.14 ರಂದು ಸಂಜೆ ರಂಗಾಯಣದ ವನರಂಗ ವೇದಿಕೆಯಲ್ಲಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಕನ್ನಡದ ಹಿರಿಯ ಚಲನಚಿತ್ರ ನಟ ಅನಂತ್‍ನಾಗ್ ಚಾಲನೆ ನೀಡಲಿದ್ದಾರೆ.
ಈ ಸಂಬಂಧ ಮೈಸೂರು ರಂಗಾ ಯಣದ ಆವರಣದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ, ಬಹುರೂಪಿ ರಂಗಾಯಣದ ಬಹುಮುಖ್ಯ ಘಟ್ಟ. ಈ ಬಾರಿಯ ಬಹು ರೂಪಿ ಇಡೀ ದೇಶದ ಗಮನ ಸೆಳೆಯು ವಂತಾಗಬೇಕು ಎಂಬ ಇಚ್ಛೆ ಹೊಂದಿ ದ್ದೇವೆ. ನಾಟಕೋತ್ಸವದ ಪೂರ್ವಭಾವಿ ಯಾಗಿ ಫೆ.13ರಂದು ರಂಗಾಯಣದ ಕಿಂದರಿಜೋಗಿ ವೇದಿಕೆಯಲ್ಲಿ ಜಾನಪದ ಉತ್ಸವಕ್ಕೆ ಜಾನಪದ ಅಕಾಡೆಮಿಯ ಅಧ್ಯಕ್ಷೆ ಮಂಜಮ್ಮ ಜೋಗತಿ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಗಾಂಧಿ ದೇಶದ ಹೆಮ್ಮೆ ಹಾಗೂ ಗೌರವದ ಸಂಕೇತ. ಅವರ 150ನೇ ಜನ್ಮ ದಿನೋತ್ಸವ ಆಚರಣೆಯ ಈ ಸುಸಂದ ರ್ಭದಲ್ಲಿ ರಂಗಾಯಣವೂ ಗಾಂಧಿ ಸ್ಮರಣೆಯಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವ ಉದ್ದೇಶದಿಂದ `ಗಾಂಧಿ ಪಥ’ ಶೀರ್ಷಿಕೆ ಆಯ್ಕೆ ಮಾಡಲಾಗಿದೆ. ಗಾಂಧಿ ಎಂದಾ ಕ್ಷಣ ಸತ್ಯ, ಅಹಿಂಸೆ, ಸಹಿಷ್ಣುತೆ, ಸಮಾ ನತೆ, ಸ್ವಚ್ಛತೆ, ಶ್ರಮ ಹಾಗೂ ಆಧ್ಯಾತ್ಮ ನಮ್ಮ ಕಣ್ಣ ಮುಂದೆ ಹಾದು ಹೋಗುತ್ತದೆ. `ಬಹುರೂಪಿ’ಯ ನಾಟಕೋತ್ಸವ, ವಿಚಾರ ಸಂಕಿರಣ, ಜಾನಪದೋತ್ಸವ, ಚಲನಚಿತ್ರೋತ್ಸವ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳಲ್ಲಿ ಗಾಂಧಿ ತತ್ವ ಮೇಳೈಸಲಿದೆ ಎಂದು ನುಡಿದರು.
6 ದಿನಗಳು ನಾಟಕ ಪ್ರದರ್ಶನ ಇರಲಿದ್ದು, ಒಟ್ಟು 24 ಪ್ರದರ್ಶನಗಳು ಇರಲಿವೆ. ಕನ್ನಡ ಭಾಷೆಯ 13 ಹಾಗೂ ಪರಭಾಷೆಯ 11 ನಾಟಕಗಳು ಪ್ರದರ್ಶನ ಗೊಳ್ಳಲಿವೆ. ನಾಟಕ ಪ್ರದರ್ಶನ ವೀಕ್ಷಿಸಲು 100 ರೂ.ಗಳ ಟಿಕೆಟ್ ವ್ಯವಸ್ಥೆ ಮಾಡ ಲಾಗಿದೆ. ಗಾಂಧಿ ಪಥಕ್ಕೆ ಪೂರಕ ವಾಗುವಂತೆ ನಮ್ಮ ಹಿರಿಯ ರೆಪರ್ಟರಿ ಕಲಾವಿದರ `ಗಾಂಧಿ ವರ್ಸಸ್ ಗಾಂಧಿ’ ನಾಟಕ ಹಾಗೂ ಮೈಸೂರು ಹವ್ಯಾಸಿ ಕಲಾವಿದರಿಂದ `ಮಹಾತ್ಮ’ ನಾಟಕ ಪ್ರದರ್ಶನಗೊಳ್ಳಲಿವೆ. ಹವ್ಯಾಸಿ ರಂಗ ಸಂಘಟನೆ ಮತ್ತು ಕಲಾವಿದರನ್ನು ಉತ್ಸವದಲ್ಲಿ ಪೂರ್ಣವಾಗಿ ತೊಡಗಿಸಿ ಕೊಂಡಿದ್ದೇವೆ. ಸ್ಥಳೀಯ ಹವ್ಯಾಸಿ ರಂಗತಂಡಗಳಿಗೆ ಆದ್ಯತೆ ನೀಡಿದ್ದೇವೆ. ಫೆ.14ರಂದು ಸಂಜೆ 5.30ಕ್ಕೆ ರಂಗಾ ಯಣದ ವನರಂಗದಲ್ಲಿ ಬಹುರೂಪಿಗೆ ನಟ ಅನಂತ್‍ನಾಗ್ ಚಾಲನೆ ನೀಡಲಿ ದ್ದಾರೆ. ಉತ್ಸವದ ಪರಿಚಯ ಪುಸ್ತಕವನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಸಿ.ಟಿ.ರವಿ ಬಿಡುಗಡೆ ಮಾಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್. ನಾಗೇಂದ್ರ ಪಾಲ್ಗೊಳ್ಳಲಿದ್ದಾರೆ ಎಂದರು.
ರಂಗಾಯಣ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಚೆನ್ನಪ್ಪ, ಬಹುರೂಪಿ ನಾಟಕೋತ್ಸವ ಸಂಚಾಲಕ ಹುಲಗಪ್ಪ ಕಟ್ಟಿಮನಿ, ಚಲನಚಿತ್ರೋತ್ಸವದ ಸಂಚಾಲಕರಾದ ಪ್ರಶಾಂತ್ ಹಿರೇಮಠ್, ಕೆ.ಮನು, ವಿಚಾರ ಸಂಕಿರಣ ಸಂಚಾಲಕ ಎಸ್.ರಾಮನಾಥ್, ಜನಪದೋತ್ಸವ ಸಂಚಾಲಕಿ ಗೀತಾ ಮೋಂಟಡ್ಕ ಮತ್ತಿತರರು ಗೋಷ್ಠಿಯಲ್ಲಿ ಹಾಜರಿದ್ದರು.
ಬಹುರೂಪಿ ಚಲನಚಿತ್ರೋತ್ಸವ
ಫೆ.14ರಂದು ಬೆಳಿಗ್ಗೆ 10ಕ್ಕೆ ರಂಗಾಯಣದ ಶ್ರೀರಂಗದಲ್ಲಿ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಬಹುರೂಪಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಈ ಕುರಿತು ವಿವರಿಸಿದ ಚಲನಚಿತ್ರೋತ್ಸವದ ಸಂಚಾಲಕ ಪ್ರಶಾಂತ್ ಹಿರೇಮಠ್, `ಗಾಂಧಿ ಪಥ’ ವಿಷಯಕ್ಕೆ ತಕ್ಕಂತೆ 7 ಸಿನಿಮಾಗಳು ಹಾಗೂ 10 ಸಾಕ್ಷ್ಯ ಚಿತ್ರಗಳನ್ನು ಪ್ರದರ್ಶಿಸಲು ಉದ್ದೇಶಿಸಲಾಗಿದೆ. ದಿನಕ್ಕೆ 3 ಪ್ರದರ್ಶನಗಳು ಇರಲಿದ್ದು, ಗಾಂಧಿಯವರ ಜೀವನಾಧಾರಿತ ಶ್ರೇಷ್ಠ ಸಿನಿಮಾಗಳು ಹಾಗೂ ಅಪರೂಪದ ಘಟನೆಗಳನ್ನು ಒಳಗೊಂಡ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸಲು ಸಿದ್ಧತೆ ನಡೆದಿದೆ. ಗಾಂಧಿಯ ಬಾಲ್ಯ, ಜೀವನ, ವ್ಯಕ್ತಿತ್ವ ವಿಕಸನ ಹಾಗೂ ಹೋರಾಟಗಳನ್ನು ಅವಲೋಕಿಸುವ ಹಾಗೂ ಅವರಿಂದ ಪ್ರೇರಿತರಾದ ಸಮಕಾಲೀನ ನಾಯಕರ ಕುರಿತ ಚಿತ್ರಗಳನ್ನು ಪ್ರದರ್ಶಿಸಲಾಗುವುದು. ಗಾಂಧಿ ಸತ್ಯದ ಬಗ್ಗೆ ಅತೀವ ನಂಬಿಕೆ ಹೊಂದಿದ್ದರು. ಡಾ.ರಾಜ್‍ಕುಮಾರ್ ಅಭಿನಯದ ಕನ್ನಡ ಸಿನಿಮಾ `ಸತ್ಯ ಹರಿಶ್ಚಂದ್ರ’ದ ಮೂಲಕ ಚಲನಚಿತ್ರೋತ್ಸವಕ್ಕೆ ತೆರೆ ಎಳೆಯಲಾಗುವುದು ಎಂದರು.
ಬಹುರೂಪಿ ರಾಷ್ಟ್ರೀಯ ವಿಚಾರ ಸಂಕಿರಣ
ಫೆ.16ರಂದು ಬೆಳಿಗ್ಗೆ 10.30ಕ್ಕೆ ಗಾಂಧಿ ಪಥ ಶೀರ್ಷಿಕೆಯಡಿ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಕವಿ ಸಿದ್ದಲಿಂಗಯ್ಯ ಉದ್ಘಾಟಿಸಲಿದ್ದಾರೆ ಎಂದು ವಿಚಾರ ಸಂಕಿರಣ ಸಂಚಾಲಕ ಎಸ್.ರಾಮನಾಥ್ ತಿಳಿಸಿದರು. ಗಾಂಧಿ ಪರ ವಾದ ಒಂದೆಡೆ ಯಾದರೆ, ಅವರ ವಿಚಾರಧಾರೆ ಪ್ರಶ್ನಿಸುವ ಮನೋಭಾವವೂ ಮತ್ತೊಂದೆಡೆ ಇದೆ. ಎಲ್ಲವನ್ನೂ ಮುಕ್ತವಾಗಿ ಚರ್ಚಿಸುವ ವೇದಿಕೆ ಇದಾಗಲಿದೆ. ವಿಚಾರ ಸಂಕಿರಣದಲ್ಲಿ 10 ಮಂದಿ ವಿದ್ವಾಂಸರು ವಿಚಾರ ಮಂಡಿಸಲಿದ್ದಾರೆ. ಪ್ರತಿ ಗೋಷ್ಠಿ 2 ಗಂಟೆ ಕಾಲ ನಡೆಯಲಿದ್ದು, ಪ್ರತಿಕ್ರಿಯಿಸಲು 15 ನಿಮಿಷ ಕಾಲಾವಕಾಶ ನಿಗದಿ ಮಾಡಲಾಗಿದೆ. ಕಿರುರಂಗಮಂದಿರದ ಪಕ್ಕದ ಆವರಣದಲ್ಲಿ ವಿಚಾರ ಸಂಕಿರಣ ನಡೆಸಲು ಉದ್ದೇಶಿಸಲಾಗಿದೆ ಎಂದರು.
ಬಹುರೂಪಿ ಜನಪದೋತ್ಸವ
ಫೆ.13ರಂದು ಸಂಜೆ 5.30ಕ್ಕೆ ರಂಗಾಯಣದ ಕಿಂದರಿಜೋಗಿ ವೇದಿಕೆಯಲ್ಲಿ ಜಾನಪದ ಉತ್ಸವಕ್ಕೆ ಜಾನಪದ ಅಕಾಡೆಮಿಯ ಅಧ್ಯಕ್ಷೆ ಮಾತಾ ಮಂಜಮ್ಮ ಜೋಗತಿ ಚಾಲನೆ ನೀಡಲಿದ್ದಾರೆ. ಈ ಕುರಿತು ವಿವರಿಸಿದ ಜನಪದೋತ್ಸವ ಸಂಚಾಲಕಿ ಗೀತಾ ಮೋಂಟಡ್ಕ, ಯಕ್ಷಗಾನ ಅಕಾಡೆಮಿ, ಬಯಲಾಟ ಅಕಾಡೆಮಿ, ಕೊಡವ ಅಕಾಡೆಮಿ, ಅರೆಭಾಷೆ ಅಕಾಡೆಮಿ, ಬ್ಯಾರಿ ಅಕಾಡೆಮಿ, ಕೊಂಕಣಿ ಅಕಾಡೆಮಿ, ತುಳು ಅಕಾಡೆಮಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ. ರಾಜ್ಯದ ಸ್ಥಳೀಯ ಜಾನಪದ ಕಲೆಗಳ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು.
ಪುಸ್ತಕ ಮಳಿಗೆ, ದೇಸಿ ಆಹಾರ ಸಂಸ್ಕøತಿ ಮಳಿಗೆಗಳು…
ಬಹುರೂಪಿ ಅಂಗವಾಗಿ ದೇಸಿ ಆಹಾರ ಸಂಸ್ಕøತಿ ಮಳಿಗೆಗಳನ್ನು ತೆರೆಯಲಾಗು ತ್ತಿದೆ. 24 ಪುಸ್ತಕ ಮಳಿಗೆಗಳು ಇರಲಿದ್ದು, 30ಕ್ಕೂ ಹೆಚ್ಚು ಕರಕುಶಲ ವಸ್ತುಗಳ ಮಳಿಗೆ ಗಳು ಇರಲಿವೆ ಎಂದು ಬಹುರೂಪಿ ಕುಟೀರಗಳ ಸಂಚಾಲಕ ಎಸ್.ರಾಮು ತಿಳಿಸಿದರು.
ಜ.29ರಂದು ಬಹುರೂಪಿ ಪೂರ್ಣ ಚಿತ್ರಣ ಬಿಡುಗಡೆ…
ಯಕ್ಷಗಾನ, ದೊಡ್ಡಾಟ, ಗೊಂಬೆಯಾಟ, ಗಾಂಧಿ ವಿಚಾರಧಾರೆಯ ಲಾವಣಿಗಳು, ಮೀರಾ ಭಜನ್, ರಂಗಗೀತೆಗಳು, ಬೀದಿ ನಾಟಕಗಳು, ಜನಪದ ಗಾಯನದೊಂದಿಗೆ ವೈವಿಧ್ಯಮಯ ತಾಣ ರಂಗಾಯಣದ ಆವರಣದಲ್ಲಿ ಅನಾವರಣಗೊಳ್ಳಲಿದೆ. ನಾಟಕೋತ್ಸವದಲ್ಲಿ ಪ್ರದರ್ಶನಗೊಳ್ಳುವ ಕನ್ನಡ ಮತ್ತು ಭಾರತೀಯ ಇತರೆ ಭಾಷೆಗಳ ನಾಟಕಗಳ ಆಯ್ಕೆ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಬಹುರೂಪಿಯ ವಿನ್ಯಾಸ ಮತ್ತು ನಾಟಕಗಳು, ಚಲನಚಿತ್ರಗಳ ಪೂರ್ಣ ವಿವರಗಳನ್ನು ಜ.29ರಂದು ಬಿಡುಗಡೆ ಮಾಡಲಾಗುವುದು. ಅಂದು ಜಿಲ್ಲಾಧಿಕಾರಿಗಳು ಸಮಗ್ರ ವಿವರಗಳ ಪೋಸ್ಟರ್ ಬಿಡುಗಡೆ ಮಾಡಲಿದ್ದಾರೆ ಎಂದು ಬಹುರೂಪಿ ನಾಟಕೋತ್ಸವ ಸಂಚಾಲಕ ಹುಲಗಪ್ಪ ಕಟ್ಟಿಮನಿ ತಿಳಿಸಿದರು.
ರಂಗಾಯಣದ ಆವರಣದಲ್ಲಿ ಸಬರಮತಿ ಆಶ್ರಮ…! ರಂಗಾಯಣದ ಕಲಾಕೃತಿ ಅನಾವರಣ…
ಈ ಬಾರಿಯ ಬಹುರೂಪಿ `ಗಾಂಧಿ ಪಥ’ ಶೀರ್ಷಿಕೆಯಡಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಂಗಾಯಣದ ಆವರಣದಲ್ಲಿ ಕಲಾವಿದ ದ್ವಾರಕನಾಥ್ ಅವರು ಗಾಂಧಿಯವರ ಶಬರಮತಿ ಆಶ್ರಮದ ವಾತಾವರಣ ನಿರ್ಮಾಣವಾಗುವಂತೆ ವಿನ್ಯಾಸ ಗೊಳಿಸಲಿದ್ದಾರೆ. ಕರ್ನಾಟಕ ಶಿಲ್ಪಕಲಾ ಅಕಾಡೆಮಿ ವತಿಯಿಂದ ಮೈಸೂರು ರಂಗಾಯಣದ ಶಿಲ್ಪಕಲಾಕೃತಿ ಸಿದ್ಧಪಡಿಸುತ್ತಿದ್ದು, ಇದನ್ನು ಫೆ.14ರಂದು ಅನಾವರಣಗೊಳಿಸಲಾಗುವುದು. ಸರ್ಕಾರದ ಎಲ್ಲಾ ಇಲಾಖೆಗಳು, ಪ್ರಾಧಿಕಾರ, ಅಕಾಡೆಮಿ ಹಾಗೂ ನಿಗಮಗಳು ಬಹುರೂಪಿಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಪ್ರಯತ್ನ ನಡೆದಿದೆ. ಮೈಸೂರು ದಸರಾ ನಂತರದ ದೊಡ್ಡ ಆಕರ್ಷಣೆ ಇದಾಗಬೇಕು ಎಂಬುದು ನಮ್ಮ ಆಕಾಂಕ್ಷೆ. – ಅಡ್ಡಂಡ ಸಿ.ಕಾರ್ಯಪ್ಪ, ರಂಗಾಯಣ ನಿರ್ದೇಶಕ