ಬೈಕ್ ಡಿಕ್ಕಿ: ಗುಳ್ಳೆ ನರಿ ಸಾವು

ಮೈಸೂರು: ಮೈಸೂರಿನ ಮಾನಸ ಗಂಗೋತ್ರಿಯ ಬಯಲು ರಂಗಮಂದಿರದ ಬಳಿ ಕಳೆದ ರಾತ್ರಿ ಬೈಕ್ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ಗುಳ್ಳೆನರಿ ಸಾವನ್ನಪ್ಪಿದೆ.

ಬೋಗಾದಿ ರಸ್ತೆ- ಹುಣಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ಕುಕ್ಕರಹಳ್ಳಿ ಕೆರೆಯಿಂದ ಬಯಲು ರಂಗಮಂದಿರ ದತ್ತ ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ನರಿ ರಸ್ತೆಯ ಬದಿ ಕೆಲ ಅಡಿ ತೆವಳಿ ಅಸುನೀಗಿದೆ. ಇಂದು ಬೆಳಿಗ್ಗೆ ದಾರಿ ಹೋಕರು ನರಿಯ ಮೃತದೇಹ ಗಮನಿಸಿ, ಅರಣ್ಯ ಇಲಾಖೆ ಸಿಬ್ಬಂದಿಗೆ ತಿಳಿಸಿದ್ದಾರೆ. ಮಧ್ಯಾಹ್ನ ಸ್ಥಳಕ್ಕೆ ಬಂದ ಅರಣ್ಯ ಸಿಬ್ಬಂದಿ, ನರಿಯ ದೇಹವನ್ನು ಮರಣೋತ್ತರ ಪರೀಕ್ಷೆ ನಂತರ ಅಂತ್ಯಸಂಸ್ಕಾರ ನೆರವೇರಿಸಿದರು.

ಮಾನಸ ಗಂಗೋತ್ರಿ, ಕುಕ್ಕರಹಳ್ಳಿ ಕೆರೆ ಸುತ್ತಮುತ್ತ ಗುಳ್ಳೆನರಿ, ಸಿವೆಟ್ ಕ್ಯಾಟ್, ಮುಂಗೂಸಿಗಳಿರುವುದು ಸಾಮಾನ್ಯ ಸಂಗತಿ. ಒಮ್ಮೊಮ್ಮೆ ಚಿರತೆಗಳು ಕಾಣಿಸಿಕೊಂಡಿರುವ ನಿದರ್ಶನಗಳಿವೆ. ಕಳೆದ ರಾತ್ರಿ ಅಪಘಾತದಲ್ಲಿ ಗುಳ್ಳೆನರಿ ಮೃತಪಟ್ಟಿದ್ದ ಸ್ಥಳ ದಲ್ಲಿಯೇ 2017 ಆಗಸ್ಟ್ 16ರಂದು ಒಂದು ನರಿ ಹೀಗೇ ಮೃತಪಟ್ಟಿತ್ತು. ಅದೇ ದಿನ ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಮತ್ತೊಂದು ನರಿ ನಿಂತು, ಸಾವಿಗೀಡಾಗಿದ್ದ ನರಿಯ ಕಳೇಬರ ವನ್ನೇ ದಿಟ್ಟಿಸುತ್ತ, ನೋಡುಗರಲ್ಲಿ ಮರುಕ ಹುಟ್ಟಿಸಿತ್ತು.

`ಮೈಸೂರು ಮಿತ್ರ’ನೊಂದಿಗೆ ಈ ಸಂಬಂಧ ಮಾತನಾಡಿದ ಡಿಸಿಎಫ್ ಸಿದ್ರಾಮಪ್ಪ ಚಲ್ಕಾಪುರೆ, ಮಾನಸ ಗಂಗೋತ್ರಿ ಬಯಲು ರಂಗಮಂದಿರ ಬಳಿ ನರಿ ಸಾವನ್ನಪ್ಪಿರುವ ಮಾಹಿತಿ ಲಭ್ಯವಾಗಿದೆ. ಕುಕ್ಕರಹಳ್ಳಿ ಕೆರೆ, ಮಾನಸಗಂಗೋತ್ರಿಯಲ್ಲಿರುವ ಗುಳ್ಳೆನರಿ, ಸಿವೆಟ್ ಕ್ಯಾಟ್ ಸೇರಿದಂತೆ ಇತರೆ ಪ್ರಾಣಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಈ ವ್ಯಾಪ್ತಿಯ ಡಿಸಿಎಫ್ ಸಿದ್ರಾಮಪ್ಪ ಅವ ರೊಂದಿಗೆ, ಈ ರಸ್ತೆಗಳಲ್ಲಿ ವಾಹನಗಳ ವೇಗಕ್ಕೆÉ ಬ್ರೇಕ್ ಹಾಕಲು ಸ್ಪೀಡ್ ಬ್ರೇಕರ್‍ಗಳನ್ನು ಅಳವಡಿಸಲು ಮೈಸೂರು ವಿವಿ ಹಾಗೂ ಸಂಚಾರ ಪೊಲೀಸರಿಗೆ ಮಾಹಿತಿ ನೀಡುವುದಾಗಿ ಹೇಳಿದರು.