ರಾಜ್ಯದಲ್ಲಿ 20ರಿಂದ 23 ಲೋಕಸಭಾ  ಸ್ಥಾನ ಗೆಲ್ಲಲು ಬಿಜೆಪಿ ಪಣ

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಅತೀ ಹೆಚ್ಚು ಸ್ಥಾನ ಗೆಲ್ಲಲು ರಾಜ್ಯ ಬಿಜೆಪಿ ಇಂದಿನಿಂದಲೇ ಅಖಾಡಕ್ಕೆ ಇಳಿದಿದೆ. ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿ ಆಗುವುದನ್ನು ಖಚಿತಪಡಿಸಲು ರಾಜ್ಯದಿಂದ ಕನಿಷ್ಠ 20ರಿಂದ 23 ಸ್ಥಾನಗಳಲ್ಲಿ ಗೆಲ್ಲಲೇಬೇಕೆಂದು ಪಕ್ಷ ಪಣ ತೊಟ್ಟಿದೆ.

ಗೆಲುವೇ ಮಾನದಂಡವಾಗಿ ಇಟ್ಟು ಕೊಂಡು ಚುನಾವಣಾ ಕಣಕ್ಕೆ ಇಳಿಯುವ ಸಂದರ್ಭದಲ್ಲಿ ಅಗತ್ಯ ಕಂಡು ಬಂದರೆ ಜೆಡಿಎಸ್ ಇಲ್ಲವೇ ಕಾಂಗ್ರೆಸ್‍ನ ಪ್ರಬಲ ವ್ಯಕ್ತಿಗಳನ್ನು ಸೆಳೆಯುವ ತೀರ್ಮಾನ ತೆಗೆದುಕೊಂಡಿದೆ.

ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಚುನಾವಣಾ ಅಭಿಯಾನ ವನ್ನು ಈಗಿನಿಂದಲೇ ಆರಂಭಿಸಲು ರೂಪರೇಷೆ ಸಿದ್ಧಪಡಿಸಲಾಗುತ್ತಿದೆ. ಈ ದಿಸೆಯಲ್ಲಿ ನಗರದಲ್ಲಿಂದು ಪಕ್ಷದ ರಾಜ್ಯ ಕೋರ್ ಕಮಿಟಿ ಸಭೆ ಸೇರಿ ಚುನಾವಣಾ ರಣನೀತಿ ಕುರಿತು ಚರ್ಚಿಸಲಾಯಿತು.

ಮುಂಬೈ, ಹೈದರಾಬಾದ್-ಕರ್ನಾ ಟಕ ಭಾಗದಲ್ಲಿ ಅಭ್ಯರ್ಥಿಗಳ ಆಯ್ಕೆ ಮತ್ತು ಸಂಘಟನೆಯ ಪೂರ್ಣಾಧಿಕಾರವನ್ನು ಯಡಿಯೂರಪ್ಪ ಅವರಿಗೇ ಬಿಡಲಾಗಿದೆ. ಮಲೆನಾಡು, ಕರಾವಳಿ ಹೊಣೆಗಾರಿಕೆಯನ್ನು ಆರ್‌ಎಸ್‌ಎಸ್ ಕೈಗೆತ್ತಿಕೊಳ್ಳಲಿದೆ. ಹಳೇ ಮೈಸೂರು ಭಾಗ ವನ್ನು ಕೇಂದ್ರದಲ್ಲಿ ರಾಜ್ಯ ಪ್ರತಿನಿಧಿಸುವ ಸಚಿವರಾದ ಅನಂತಕುಮಾರ್, ಸದಾ ನಂದಗೌಡ, ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್, ಮಾಜಿ ಸಚಿವ ಸಿ.ಟಿ. ರವಿ ಹೆಗಲಿಗೆ ಬಿದ್ದಿದೆ.

ಇವರು ಚುನಾವಣಾ ಪ್ರಕ್ರಿಯೆ ಆರಂಭಗೊಳ್ಳುವುದಕ್ಕೂ ಮುನ್ನ ತಮ್ಮ ಭಾಗಗಳಲ್ಲಿ ಸಂಚರಿಸಿ ಪಕ್ಷ ಸಂಘಟಿಸುವುದಲ್ಲದೆ, ಅಭ್ಯರ್ಥಿ ಯಾರಾಗಬೇಕೆಂಬ ಬಗ್ಗೆ ಕೋರ್ ಕಮಿಟಿಗೆ ಶಿಫಾರಸು ಮಾಡಲಿದ್ದಾರೆ. ರಾಷ್ಟ್ರೀಯ ನಾಯಕರ ಮಾರ್ಗದರ್ಶನದಲ್ಲಿ ಈಗಿನಿಂದಲೇ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಲೋಪದೋಷಗಳನ್ನು ಜನರ ಮುಂದಿಟ್ಟು ಕಳೆದ 5 ವರ್ಷಗಳಲ್ಲಿ ಪ್ರಧಾನಿ ನೇತೃತ್ವದ ಸರ್ಕಾರದ ಕಾರ್ಯಕ್ರಮಗಳನ್ನು ಮತದಾರರ ಮುಂದಿಡುವುದು. ಇದೇ ಸಂದರ್ಭದಲ್ಲಿ ಬೂತ್ ಕಮಿಟಿಗಳನ್ನು ಮತ್ತಷ್ಟು ಗಟ್ಟಿಗೊಳಿಸಿ, ಕೆಳಮಟ್ಟದಲ್ಲಿ ಎಲ್ಲಿಯಾದರೂ ಪಕ್ಷದಲ್ಲಿ ಭಿನ್ನಾಭಿಪ್ರಾಯ ಇದ್ದರೆ ಸರಿಪಡಿಸುವುದು, ಇಲ್ಲವೇ ಕೇಂದ್ರ ಘಟಕದ ಗಮನಕ್ಕೆ ತರುವಂತೆ ಸ್ಥಳೀಯರಿಗೆ ಸಲಹೆ ನೀಡಲಿದೆ.

ಅಷ್ಟೇ ಅಲ್ಲ, ಚುನಾವಣಾ ಪ್ರಕ್ರಿಯೆಗೂ ಮುನ್ನವೇ ಪ್ರಧಾನಿ ಹಾಗೂ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ರಾಜ್ಯದಲ್ಲಿ ಒಂದು ಸುತ್ತಿನ ಪ್ರವಾಸ ಕೈಗೊಳ್ಳುವಂತೆ ಕೋರಲು ಕೋರ್ ಕಮಿಟಿ ತೀರ್ಮಾನಿಸಿದೆ.