ಶ್ರೀರಂಗಪಟ್ಟಣ, ಜು.29(ವಿನಯ್ ಕಾರೇಕುರ)- ಕೆಆರ್‍ಎಸ್ ಜಲಾಶಯದ ಹೊರ ಹರಿವಿನ ಪ್ರಮಾಣ ಹೆಚ್ಚಳವಾದ ಹಿನ್ನೆಲೆಯಲ್ಲಿ ತಾಲೂಕಿನ ರಂಗನತಿಟ್ಟು ಪಕ್ಷಿಧಾಮದಲ್ಲಿ ಮುಂಜಾಗ್ರತಾ ಕ್ರಮವಾಗಿ ಮತ್ತೆ ಭಾನುವಾರದಿಂದ ಬೋಟಿಂಗ್ ಸ್ಥಗಿತಗೊಳಿಸಲಾಗಿದೆ. ಈ ಸಂಬಂಧ ಪತ್ರಿಕೆಯೊಂದಿಗೆ ರಂಗನತಿಟ್ಟು ಉಪವಲಯ ಅರಣ್ಯಾಧಿಕಾರಿ ಎಂ.ಪುಟ್ಟಮಾದೇಗೌಡ ಮಾತನಾಡಿ, ಕೆಆರ್‍ಎಸ್ ಜಲಾಶಯದಿಂದ ಹೊರ ಹರಿವು ಹೆಚ್ಚಳವಾಗಿರುವುದರಿಂದ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಹಾಗೂ ವಲಯ ಅರಣ್ಯಾಧಿಕಾರಿ ಅನನ್ಯಕುಮಾರ್ ಸೂಚನೆ ಮೇರೆಗೆ ಬೋಟಿಂಗ್ ನಿಲ್ಲಿಸಲಾಗಿದೆ ಎಂದರು.
ಭಾನುವಾರ ಹಾಗೂ ಸೋಮವಾರ ಧಾಮಕ್ಕೆ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಬರುವ ನಿರೀಕ್ಷೆಯಿತ್ತು. ಬೋಟಿಂಗ್ ಸ್ಥಗಿತಗೊಂಡಿದ್ದರಿಂದ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿ ಇಲಾಖೆಗೆ 4 ಲಕ್ಷ ರೂ.ಆದಾಯ ಖೋತಾ ಆಗಿದೆ ಎಂದ ಅವರು, ಬೋಟಿಂಗ್ ಸ್ಥಗಿತವಾಗಿರುವ ಬಗ್ಗೆ ಧಾಮದ ಮುಖ್ಯದ್ವಾರದ ಬಳಿಯೇ ಸೂಚನ ಫಲಕ ಹಾಕಲಾಗಿದೆ. ನೀರಿನ ಮಟ್ಟ ಕಡಿಮೆಯಾಗುವವರೆಗೂ ಮುಂಜಾಗ್ರತಾ ದೃಷ್ಟಿಯಿಂದ ಬೋಟಿಂಗ್ ಸ್ಥಗಿತ ಮುಂದುವರೆಯಲಿದೆ ಎಂದು ತಿಳಿಸಿದರು. ‘ನಾವು 8 ಜನರ ತಂಡ ಇಟಲಿಯಿಂದ ಬಂದಿದ್ದೇವೆ. ಇಲ್ಲಿ ಬೋಟಿಂಗ್ ಮಾಡಿ ಪಕ್ಷಿ ವೀಕ್ಷಣೆ ಮಾಡಿ ನಮ್ಮ ಕ್ಯಾಮೆರಾದÀಲ್ಲಿ ಸುಂದರ ಕ್ಷಣಗಳನ್ನು ಸೆರೆ ಹಿಡಿಯಬೇಕು ಎಂದುಕೊಂಡಿದ್ದೆವು. ಆದರೆ, ನೀರಿನ ಮಟ್ಟ ಹೆಚ್ಚಾದ್ದರಿಂದ ಬೋಟಿಂಗ್ ಸ್ಥಗಿತವಾಗಿದೆ. ಇದರಿಂದ ನಮಗೆ ತುಂಬಾ ನಿರಾಸೆಯಾಗಿದೆ ಎಂದು ವಿದೇಶಿ ಪ್ರವಾಸಿ ಗರೊಬ್ಬರು ಬೇಸರ ವ್ಯಕ್ತಪಡಿಸಿದರು.