ಮೈಸೂರು ನಗರಪಾಲಿಕೆ ಸದಸ್ಯರ ಯೋಗಾಭ್ಯಾಸ: ನೀರಸ ಪ್ರತಿಕ್ರಿಯೆ

ಮೈಸೂರು: ಮೈಸೂರಿನ ರೇಸ್‍ಕೋರ್ಸ್‍ನಲ್ಲಿ ಜೂ.21ರಂದು ಅಂತಾರಾಷ್ಟ್ರೀಯ ಯೋಗ ದಿನೋತ್ಸವ ದಂದು 1 ಲಕ್ಷಕ್ಕೂ ಹೆಚ್ಚು ಯೋಗಪಟುಗಳು ಸಾಮೂಹಿಕ ಯೋಗ ಪ್ರದರ್ಶಿಸಲು ಸಿದ್ಧತೆ ನಡೆದಿದ್ದು, ಇದರ ಅಂಗವಾಗಿ ಮೈಸೂರು ಮಹಾನಗರಪಾಲಿಕೆ ಸದಸ್ಯರು ಮತ್ತು ಅಧಿಕಾರಿಗಳಿಗಾಗಿ ಬುಧವಾರ ಮೈಸೂರು ಅರಮನೆಯಲ್ಲಿ ಯೋಗಾ ಭ್ಯಾಸ ಏರ್ಪಡಿಸಲಾಗಿತ್ತು.

ಯೋಗ ಫೆಡರೇಷನ್ ಆಫ್ ಮೈಸೂರು ಮತ್ತು ಮಹಾನಗರಪಾಲಿಕೆ ಜಂಟಿಯಾಗಿ ಆಯೋಜಿಸಿದ್ದ ಯೋಗಾಭ್ಯಾಸ ಕಾರ್ಯ ಕ್ರಮದಲ್ಲಿ ಮೇಯರ್ ಪುಷ್ಪಲತಾ ಜಗ ನ್ನಾಥ್, ಉಪಮೇಯರ್ ಶಫೀ ಅಹಮದ್, ಹಾಗೂ ಬಿ.ವಿ.ಮಂಜುನಾಥ್, ಶಿವ ಕುಮಾರ್, ರಮೇಶ್ ರಮಣಿ ಸೇರಿದಂತೆ 19 ಪಾಲಿಕೆ ಸದಸ್ಯರು, ಪಾಲಿಕೆ ಆಯುಕ್ತೆ ಶಿಲ್ಪಾನಾಗ್, ಹೆಚ್ಚುವರಿ ಆಯುಕ್ತ ಶಿವಾನಂದ ಮೂರ್ತಿ, ಆರೋಗ್ಯಾಧಿಕಾರಿಗಳಾದ ಡಾ.ಡಿ. ಜಿ.ನಾಗರಾಜ್, ಡಾ.ಜಯಂತ್ ಸೇರಿ ದಂತೆ ಬೆರಳೆಣಿಕೆಯಷ್ಟು ಅಧಿಕಾರಿಗಳು ಯೋಗಾಭ್ಯಾಸ ನಡೆಸಿದರು.

ಮೈಸೂರು ನಗರಪಾಲಿಕೆಯಲ್ಲಿ 65 ಸದಸ್ಯರಿದ್ದು, ಅವರಿಗಾಗಿ ಈ ಯೋಗಾ ಭ್ಯಾಸ ಏರ್ಪಡಿಸಲಾಗಿದ್ದರೂ 19 ಸದಸ್ಯ ರನ್ನುಳಿದು ಉಳಿದ ಸದಸ್ಯರು ಯೋಗಾ ಭ್ಯಾಸದಲ್ಲಿ ಪಾಲ್ಗೊಳ್ಳಲು ಆಸಕ್ತಿ ತೋರದೆ ಗೈರು ಹಾಜರಾಗಿದ್ದದ್ದು ಕಂಡು ಬಂದಿತು.

ಪ್ರತಿಯೊಬ್ಬ ಪಾಲಿಕೆ ಸದಸ್ಯರಿಗಾಗಿ ಯೋಗಾಭ್ಯಾಸ ಆಯೋಜಿಸಿದರೆ, ಅವರ ಅನುಯಾಯಿಗಳು, ಅಭಿಮಾನಿಗಳು ಜೊತೆ ಯಲ್ಲಿ ಬಂದು ಭಾಗವಹಿಸಿ, ಯೋಗ ದಿನೋ ತ್ಸವ ಯಶಸ್ವಿಗೊಳಿಸುವ ಉದ್ದೇಶಕ್ಕಾಗಿ ಈ ಯೋಗಾಭ್ಯಾಸ ಏರ್ಪಡಿಸಲಾಗಿತ್ತು. ಈ ಸಂಬಂಧ ಮೇಯರ್ ಅವರು ಸಭೆಯನ್ನೂ ನಡೆಸಿ ಪಾಲಿಕೆಯ ಎಲ್ಲಾ ಸದಸ್ಯರು ಭಾಗ ವಹಿಸುವಂತೆ ಮನವಿಯನ್ನೂ ಮಾಡಿ ದ್ದರು. ಆದರೆ ಇಂದಿನ ಯೋಗಾಭ್ಯಾಸ ದಲ್ಲಿ 19 ಮಂದಿ ಮಾತ್ರ ಭಾಗವಹಿಸಿದ್ದು, ಬಹುತೇಕ ಸದಸ್ಯರಿಗೆ ಯೋಗಾಭ್ಯಾಸದಲ್ಲಿ ಆಸಕ್ತಿ ಇಲ್ಲ ಎಂಬುದು ಕಂಡು ಬಂತು.

ಇಂದು ನಡೆದ ಯೋಗಾಭ್ಯಾಸದಲ್ಲಿ ಪಾಲ್ಗೊಂಡಿದ್ದ ಪಾಲಿಕೆ ಸದಸ್ಯರು, ಪಾಲಿಕೆ ಅಧಿಕಾರಿಗಳಿಗೆ ಯೋಗ ಗುರುಗಳಾದ ಶ್ರೀಹರಿ, ಬಿ.ಪಿ.ಮೂರ್ತಿ, ಗಣೇಶ್ ಕುಮಾರ್, ರಂಗನಾಥ್ ಯೋಗಾಭ್ಯಾಸ ಹೇಳಿ ಕೊಟ್ಟರು. ಬೆಳಿಗ್ಗೆ 6.45ರಿಂದ 7.30ರೊಳಗೆ ನಡೆದ ಯೋಗಾಭ್ಯಾಸ ಶಂಖನಾದ ದೊಂದಿಗೆ ಪ್ರಾರಂಭವಾಯಿತು. ಚಾಲನ ಕ್ರಿಯೆ, ಆಸನಗಳು, ಪ್ರಾಣಾಯಾಮ, ಧ್ಯಾನ, ಸಂಕಲ್ಪ ನಂತರ ಶಾಂತಿ ಮಂತ್ರ ದೊಂದಿಗೆ ಕಾರ್ಯಕ್ರಮ ಮುಗಿಯಿತು.