ಥೈಲ್ಯಾಂಡ್ ಮುಕ್ತ ವಿಶ್ವ ಕರಾಟೆ ಚಾಂಪಿಯನ್ ಶಿಪ್‍ನಲ್ಲಿ ಕೊಡಗಿನ ಕರಾಟೆ ಪಟುವಿಗೆ ಕಂಚಿನ ಪದಕ

ಮಡಿಕೇರಿ, ಆ.23- ಥೈಲ್ಯಾಂಡ್ ದೇಶದ ಫುಕೆಟ್‍ನಲ್ಲಿ ನಡೆದ ಥೈಲ್ಯಾಂಡ್ ಮುಕ್ತ ವಿಶ್ವ ಕರಾಟೆ ಚಾಂಪಿಯನ್ ಶಿಪ್‍ನಲ್ಲಿ ಕೊಡಗು ಮೂಲದ ಬಬ್ಬೀರ ಅಂಕಿತಾ ತಿಮ್ಮಯ್ಯ ಕಂಚಿನ ಪದಕ ಜಯಿಸಿದ್ದಾರೆ.

ಆ.19ರಿಂದ 23ರವರೆಗೆ ನಡೆದ ಈ ಕ್ರೀಡಾಕೂಟದಲ್ಲಿ ವಿಶ್ವದ ವಿವಿಧ ದೇಶಗಳ ಸ್ಪರ್ಧಿಗಳು ಪಾಲ್ಗೊಂಡಿದ್ದರು. ಮಹಿಳೆಯರ ಕುಮಿಟೆ 68 ಕೆಜಿ ವಿಭಾಗ ದಲ್ಲಿ ಭಾರತವನ್ನು ಪ್ರತಿನಿಧಿಸಿದ ಅಂಕಿತಾ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಎದುರಾಳಿ ಗಳ ವಿರುದ್ಧ ಸುಲಭ ಜಯ ಸಾಧಿಸಿದರು. ಬಳಿಕ ಪದಕ ಸುತ್ತಿನ ಪಂದ್ಯದಲ್ಲಿ ಮಲೇಷ್ಯಾ ಎದುರು 1-3 ಅಂಕಗಳಿಂದ ಜಯಭೇರಿ ಬಾರಿಸಿದರು. ಅಂತಿಮ ಹಂತದಲ್ಲಿ ಹಾಂಕಾಂಗ್ ವಿರುದ್ಧ 1-4 ಅಂಗಳಿಂದ ಸೋಲು ಅನುಭವಿಸಿ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.

ಭಾರತದಿಂದ ಒಟ್ಟು 94 ಮಂದಿ ಕರಾಟೆಪಟುಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು, ವೈಯಕ್ತಿಕ ಮತ್ತು ತಂಡ ವಿಭಾಗದಲ್ಲಿ ಒಟ್ಟು 80 ಪದಕ ಜಯಿಸಿ ದ್ದಾರೆ. ಕರ್ನಾಟಕದಿಂದ 12 ಕರಾಟೆಪಟುಗಳು ಭಾಗವಹಿಸಿದ್ದು ಅಂಕಿತಾ ಸೇರಿ ಒಟ್ಟು ನಾಲ್ಕು ಕರಾಟೆಪಟುಗಳು ಪದಕ ಜಯಿಸಿದ್ದಾರೆ. ವಿಶ್ವ ಕರಾಟೆ ಫೆಡರೇಷನ್ ತರಬೇತುದಾರ ಕುಂದಾಪುರದ ಕೀರ್ತಿ ಜಿ.ಕೆ ಅವರ ಗರಡಿಯಲ್ಲಿ ಈ ಕರಾಟೆ ಪಟುಗಳು ತರಬೇತಿ ಪಡೆದಿದ್ದರು. ಅಂಕಿತಾ ಮೂಲತಃ ಚೇರಂಬಾಣೆ ಗ್ರಾಮದ ಬಬ್ಬೀರ ತಿಮ್ಮಯ್ಯ ಮತ್ತು ಮಿನ್ನು ದಂಪತಿಯ ಪುತ್ರಿಯಾಗಿದ್ದಾರೆ.