ಮಳವಳ್ಳಿ ಬಳಿ ಬಸ್ ಡಿಕ್ಕಿ: ಬೈಕ್ ಸವಾರರಿಬ್ಬರು ಸಾವು

ಮಂಡ್ಯ,ಮೇ 19(ನಾಗಯ್ಯ)- ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಮೃತಪಟ್ಟಿರುವ ಘಟನೆ ಮಳವಳ್ಳಿ ಪಟ್ಟಣದ ಹೊರವಲಯದ ಮದ್ದೂರು-ಮಳವಳ್ಳಿ ಮುಖ್ಯರಸ್ತೆಯ ಕೆರೆ ಏರಿ ಬಳಿ ಶನಿವಾರ ರಾತ್ರಿ ನಡೆದಿದೆ.
ಮಳವಳ್ಳಿ ಪಟ್ಟಣದ ಗಂಗಾಮತ ಬಡಾವಣೆ ನಿವಾಸಿಗಳಾದ ಶಿವು(40), ನಾರಾಯಣ(45) ಮೃತಪಟ್ಟವರು.

ಘಟನೆ ವಿವರ: ಶಿವು ಮತ್ತು ನಾರಾ ಯಣ ಇಬ್ಬರು ಶನಿವಾರ ರಾತ್ರಿ 10 ಗಂಟೆ ಸಮಯದಲ್ಲಿ ಮಲವಿಸರ್ಜನೆಗೆ ಬೈಕ್‍ನಲ್ಲಿ ಕೆರೆಯತ್ತ ತೆರಳುತ್ತಿದ್ದರು. ಈ ವೇಳೆ ಪಟ್ಟಣದ ಹೊರವಲಯದ ಕೆರೆ ಏರಿ ಪಕ್ಕದಲ್ಲಿರುವ ನಾಲೆ ರಸ್ತೆಗೆ ಸ್ಕೂಟರ್ ತಿರುವು ಪಡೆಯುತ್ತಿದ್ದಾಗ ಬೆಂಗಳೂರಿನಿಂದ ಮಳವಳ್ಳಿ ಕಡೆಗೆ ಬರುತ್ತಿದ್ದ ಖಾಸಗಿ ಬಸ್ ಬೈಕ್‍ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರ ತಲೆಗೂ ತೀವ್ರ ಪೆಟ್ಟು ಬಿದ್ದಿದ್ದು, ಅವರನ್ನು ತಕ್ಷಣ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವು ಅವರನ್ನು ಮಂಡ್ಯ ಮಿಮ್ಸ್‍ಗೂ ನಾರಾಯಣನನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಶನಿವಾರ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಶಿವು ಮತ್ತು ನಾರಾಯಣ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಸ್‍ನ್ನು ವಶಕ್ಕೆ ಪಡೆದಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.