ಎನ್.ಆರ್.ಕ್ಷೇತ್ರ ವ್ಯಾಪ್ತಿಯ 23 ವಾರ್ಡ್‍ಗಳಲ್ಲಿ ವಿವಿಧ ಪಕ್ಷದ ಅಭ್ಯರ್ಥಿಗಳ ಬಿರುಸಿನ ಪ್ರಚಾರ

ಮೈಸೂರು:  ಮೈಸೂರು ಮಹಾನಗರಪಾಲಿಕೆ ಚುನಾವಣೆಯಲ್ಲಿ ನರಸಿಂಹರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 23 ವಾರ್ಡ್‍ಗಳಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳು, ಪಕ್ಷೇತರ ಅಭ್ಯರ್ಥಿಗಳ ಪ್ರಚಾರ ಕಾಂiÀರ್i ಬಿರುಸುಗೊಂಡಿದೆ.
ಕಾಂಗ್ರೆಸ್, ಜೆಡಿಎಸ್, ಬಿಜೆಪಿಯ ಪ್ರಮುಖ ಹುರಿಯಾಳುಗಳು ಮನೆ ಮನೆಗೆ ಭೇಟಿ ನೀಡಿ ಮತಯಾಚನೆಯಲ್ಲಿ ತೊಡಗಿದ್ದು, ಮತದಾರರ ಗಮನ ಸೆಳೆಯಲು ಹರಸಾಹಸ ಪಡುತ್ತಿದ್ದಾರೆ. ಎಸ್‍ಡಿಪಿಐ, ಬಿಎಸ್‍ಪಿ ಅಭ್ಯರ್ಥಿಗಳು ಸಹ ತೀವ್ರ ಪ್ರಚಾರದಲ್ಲಿ ತೊಡಗಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿಗಳ ಪರ ಶಾಸಕ ತನ್ವೀರ್‍ಸೇಠ್, ಎಂಎಲ್‍ಸಿ ರಿಜ್ವಾನ್ ಹರ್ಷದ್ ಇನ್ನಿತರ ಮುಖಂಡರು ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಪಣ ತೊಟ್ಟು ಪ್ರಚಾರದಲ್ಲಿ ನಿರತರಾಗಿದ್ದಾರೆ.

ಬಿಜೆಪಿ ಕೂಡ ತಮ್ಮದೇ ಧಾಟಿಯಲ್ಲಿ ಪ್ರಚಾರದಲ್ಲಿ ನಿರತರಾಗಿದ್ದು, ಎನ್.ಆರ್.ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಸಂದೇಶ್ ಸ್ವಾಮಿ, ಪಕ್ಷದ ಕ್ಷೇತ್ರದ ಅಧ್ಯಕ್ಷ ಸು.ಮುರಳಿ, ಹೆಚ್.ಜಿ.ಗಿರಿಧರ್ ಇನ್ನಿತರರು ಕ್ಷೇತ್ರ ವ್ಯಾಪ್ತಿಯ ವಾರ್ಡ್‍ಗಳಲ್ಲಿ ಸಂಚರಿಸಿ ಅಭ್ಯರ್ಥಿಗಳ ಗೆಲುವಿಗೆ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ.

ಜೆಡಿಎಸ್ ಅಭ್ಯರ್ಥಿಗಳ ಪರ ಪಕ್ಷದ ಜಿಲ್ಲಾಧ್ಯಕ್ಷ ಅಬ್ದುಲ್ಲಾ ಪ್ರಚಾರದಲ್ಲಿ ತೊಡಗಿದ್ದು, ಶತಾಯ ಗತಾಯ ಕ್ಷೇತ್ರದಲ್ಲಿ ಜೆಡಿಎಸ್‍ನ ಹೆಚ್ಚು ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂಬ ಪ್ರಯತ್ನದಲ್ಲಿದ್ದಾರೆ. ಕ್ಷೇತ್ರದಲ್ಲಿ ಬಿಎಸ್‍ಪಿ ಮತ್ತು ಎಸ್‍ಡಿಪಿಐ ಅಭ್ಯರ್ಥಿಗಳು ಕೂಡ ಪ್ರಮುಖ ಪಕ್ಷಗಳ ವಿರುದ್ಧ ತುರುಸಿನ ಸ್ಪರ್ಧೆ ಒಡ್ಡಿದ್ದಾರೆ.

ಎನ್.ಆರ್.ಕ್ಷೇತ್ರ ವ್ಯಾಪ್ತಿಯ 23 ವಾರ್ಡ್‍ಗಳಲ್ಲಿ ಕಾಂಗ್ರೆಸ್ ಎಲ್ಲಾ ವಾರ್ಡ್‍ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಬಿಜೆಪಿ 21ರಲ್ಲೂ, ಜೆಡಿಎಸ್ 18 ವಾರ್ಡ್‍ಗಳಲ್ಲಿ ಕಣಕ್ಕಿಳಿಸಿವೆ. ಎಸ್‍ಡಿಪಿಐ 11 ವಾರ್ಡ್‍ಗಳಲ್ಲಿ ಹಾಗೂ ಬಿಎಸ್‍ಪಿ 8 ವಾರ್ಡ್‍ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

31ನೇ ವಾರ್ಡ್‍ನಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಶಾಹಿದ್ ಖಾದರ್ ಅವರು ಸೋಮವಾರ ವಾರ್ಡ್ ವ್ಯಾಪ್ತಿಯ ಗೌಸಿಯಾನಗರ, ಕೆ.ಎನ್.ಪುರ, ಹರಿಶ್ಚಂದ್ರ ಘಾಟ್, ಇಂದಿರಾಗಾಂಧಿ ರಸ್ತೆ ಇನ್ನಿತರ ಕಡೆಗಳಲ್ಲಿ ಪಾದಯಾತ್ರೆ ಮೂಲಕ ಮತ ಯಾಚಿಸಿದರು. ಅವರೊಂದಿಗೆ ಮಾಜಿ ಮೇಯರ್ ಹೆಚ್.ಎನ್.ಶ್ರೀಕಂಠಯ್ಯ, ಪಕ್ಷದ ಮುಖಂಡರಾದ ಹನೀಫ್, ಸ್ವಾಮಿ, ಮಂಜು, ಸೂರಿ ಇನ್ನಿತರರು ಮತಯಾಚಿಸಿದರು.

35ನೇ ವಾರ್ಡ್ ಸಾತಗಳ್ಳಿ ಬಡಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸಾತ್ವಿಕ್ ಸಂದೇಶ್ ಪರವಾಗಿ ಸಂಸದ ಪ್ರತಾಪ್‍ಸಿಂಹ ಇಂದು ಪಾದಯಾತ್ರೆಯಲ್ಲಿ ಪಾಲ್ಗೊಂಡು, ಮತ ಯಾಚಿಸಿದರು. ರಾಜಕುಮಾರ್ ರಸ್ತೆ, ಕಲ್ಯಾಣಗಿರಿ, ಜೆಎಸ್‍ಎಸ್ ಲೇಔಟ್, ಶಕ್ತಿನಗರ, ವಿದ್ಯಾಶಂಕರ ಬಡಾವಣೆಗಳಲ್ಲಿ ಪಕ್ಷದ ಎನ್.ಆರ್.ಕ್ಷೇತ್ರ ಮುಖಂಡರಾದ ಸಂದೇಶ್ ಸ್ವಾಮಿ, ಅಧ್ಯಕ್ಷ ಸು.ಮುರಳಿ, ಪ್ರಧಾನ ಕಾರ್ಯದರ್ಶಿ ಆನಂದ್ ಇನ್ನಿತರರು ಪಾದಯಾತ್ರೆ ನಡೆಸಿ ಬಿಜೆಪಿ ಅಭ್ಯರ್ಥಿಗೆ ಮತ ನೀಡುವಂತೆ ಮತದಾರರಲ್ಲಿ ಮನವಿ ಮಾಡಿದರು.

29ನೇ ವಾರ್ಡ್‍ನ ಎನ್.ಆರ್.ಮೊಹಲ್ಲಾ ವ್ಯಾಪ್ತಿಯ ಎ.ಜೆ.ಬ್ಲಾಕ್, ಬೆಟ್ಟಪ್ಪನ ತೋಟ ಇನ್ನಿತರ ಕಡೆಗಳಲ್ಲಿ ಜೆಡಿಎಸ್ ಅಭ್ಯರ್ಥಿ ಬಿ.ಎಂ. ನಟರಾಜು ಪ್ರಚಾರ ಕೈಗೊಂಡರು. ಅವರೊಂದಿಗೆ ಪಾಲಿಕೆ ಸದಸ್ಯ ಆರ್.ಪುಟ್ಟಲಿಂಗು, ಚಂದ್ರು, ವೆಂಕಟೇಶ್, ಪುಟ್ಟಣ್ಣ ಮುಂತಾದವರು ಇದ್ದು ಅಭ್ಯರ್ಥಿಗೆ ಮತ ನೀಡುವಂತೆ ಮತದಾರರಲ್ಲಿ ಮನವಿ ಮಾಡಿದರು.