ವಿರಾಜಪೇಟೆಯಲ್ಲಿ ಲೂರ್ದು ಮಾತೆ ಕ್ಯಾಂಡಲ್ ಹಬ್ಬ

ವಿರಾಜಪೇಟೆ: ವಿರಾಜಪೇಟೆ ಸಂತ ಅನ್ನಮ್ಮ ದೇವಾಲಯದ ಹಾಗೂ ಲೂರ್ದು ಮಾತೆಯ ವಾರ್ಷಿಕ ಮಹೋತ್ಸವ (ಕ್ಯಾಂಡಲ್ ಹಬ್ಬ) ವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ವಾರ್ಷಿಕ ಮಹೋತ್ಸವದ ಅಂಗವಾಗಿ ಫೆ.8 ರಂದು ಧ್ವಜಾರೋಹಣದೊಂದಿಗೆ ಪ್ರಾರಂಭಗೊಂಡು ದಿವ್ಯ ಬಲಿಪೂಜೆ, ಜಪಸರ ನಡೆದು ಫೆ.11 ರಂದು ಮೈಸೂರಿನ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಕೆ.ಎ.ವಿಲಿಯಂ ಅವರಿಂದ ಸಂತ ಅನ್ನಮ್ಮ ದೇವಾಲಯದಲ್ಲಿ ಗಾಯನ ಬಲಿಪೂಜೆ ನಡೆಯಿತು.

ಕ್ರೈಸ್ತ ಬಾಂಧವರು ಹಾಗೂ ಭಕ್ತಾಧಿಗಳು ಸಂತ ಅನ್ನಮ್ಮ ದೇವಾಲಯದಿಂದ ಮೇಣದ ಬತ್ತಿ ಹಿಡಿದು ಲೂರ್ದು ಮಾತೆ ಹಾಗೂ ಸಂತ ಅನ್ನಮ್ಮ ಅವರ ವಿದ್ಯುತ್ ಅಲಂಕೃತ ಮಂಟಪ, ವಾದ್ಯಗೋಷ್ಠಿಯೊಂದಿಗೆ ದೇವರ ಕೀರ್ತನೆಗಳನ್ನು ಜಪಿಸುತ್ತ ಪಟ್ಟಣದ ತೆಲುಗರ ಬೀದಿ, ಜೈನರ ಬೀದಿ, ದೊಡ್ಡಟ್ಟಿ ಚೌಕಿ ಮುಖ್ಯ ರಸ್ತೆ, ಗಡಿಯಾರ ಕಂಭದ ಮಾರ್ಗವಾಗಿ ಖಾಸಗಿ ಬಸ್ಸು ನಿಲ್ದಾಣ, ಗೋಣಿಕೊಪ್ಪ ರಸ್ತೆಯಿಂದ ಸಂತ ಅನ್ನಮ್ಮ ದೇವಾಲಯದವರೆಗೆ ಮೆರವಣಿಗೆ ನಡೆಸಿದರು.

ಮೆರವಣಿಗೆ ಮತ್ತು ಗಾಯನ ಬಲಿಪೂಜೆಯಲ್ಲಿ ಸಂತ ಅನ್ನಮ್ಮ ದೇವಾಲಯದ ಧರ್ಮಗುರು ಮದುಲೈಮುತ್ತು, ಐಸಕ್ ರತ್ನಾಕರ, ಸಹಾಯಕಗುರು ರೋಷನ್‍ಬಾಬು ಹಾಗೂ ಕೊಡಗಿನ 30ಕ್ಕೂ ಹೆಚ್ಚು ಧರ್ಮಗುರುಗಳು ಆಗಮಿಸಿದ್ದರು. ಮಹೋತ್ಸವದಲ್ಲಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಮೆರವಣಿಗೆಯ ನಂತರ ಪರಮಪ್ರಸಾದ ಆಶೀರ್ವಾದ ನಡೆಯಿತು.