ಶರವೇಗದಲ್ಲಿ ಮುನ್ನುಗ್ಗಿ ಧೂಳೆಬ್ಬಿಸಿದ ಕಾರುಗಳು

ಮೈಸೂರು, ಅ.13(ಪಿಎಂ)-ಶರವೇಗದಲ್ಲಿ ಮುನ್ನುಗ್ಗುತ್ತಿದ್ದ ಸ್ಫೋಟ್ರ್ಸ್ ಕಾರುಗಳು… ಭೋರ್ಗರೆ ಯುವ ಸದ್ದಿನೊಂದಿಗೆ ಕಲ್ಲು-ಮಣ್ಣಿನ ರಸ್ತೆ ಯಲ್ಲಿ ಧೂಳೆಬ್ಬಿಸುತ್ತ ಕಂಡು ಮರೆಯಾಗುತ್ತಿದ್ದ ಕಾರುಗಳು… ನೋಡುಗರಲ್ಲಿ ರೋಚಕ ಕ್ಷಣಗಳ ಆಲಿಂಗನ… ರೋಮಾಂಚನ…

ಮೈಸೂರಿನ ಲಲಿತ ಮಹಲ್ ಅರಮನೆ ಹೆಲಿ ಪ್ಯಾಡ್ ಮೈದಾನದಲ್ಲಿ ಈ ರೀತಿ ಮೈನವೀರೆ ಳುವ ದೃಶ್ಯಾವಳಿಗಳು ಭಾನುವಾರ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು. ಮೈಸೂರು ದಸರಾ ಮಹೋತ್ಸವ ಅಂಗವಾಗಿ ಆಟೋ ಮೋಟಿವ್ ಸ್ಪೋಟ್ರ್ಸ್ ಕ್ಲಬ್ ಆಫ್ ಮೈಸೂರ್ (ಅಸ್ಕಾಮ್) ಹಾಗೂ ಪ್ರವಾಸೋದ್ಯಮ ಇಲಾಖೆ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಗ್ರಾವೆಲ್ ಫೆಸ್ಟ್ ಆಟೋಕ್ರಾಸ್ (ಕಾರ್ ರೇಸಿಂಗ್) ರೇಸ್‍ನ ಈ ಸಾಹಸಮಯ ಕ್ಷಣಗಳು ಪ್ರೇಕ್ಷಕರ ಹರ್ಷೋ ದ್ಗಾರ, ಶಿಳ್ಳೆ ಹಾಗೂ ಚಪ್ಪಾಳೆಗೆ ಸಾಕ್ಷಿಯಾಯಿತು.

ರಾಜ್ಯದ ವಿವಿಧ ಭಾಗಗಳೂ ಸೇರಿದಂತೆ ದೆಹಲಿ, ಮಹಾರಾಷ್ಟ್ರ, ಗೋವಾ, ತೆಲಂಗಾಣ, ತಮಿಳುನಾಡು, ಕೇರಳ ಸೇರಿದಂತೆ ದೇಶದ ನಾನಾ ಭಾಗಗಳ ಅಗ್ರಮಾನ್ಯ ರೇಸ್ ಚಾಲಕರು ಡ್ರೈವಿಂಗ್ ನಲ್ಲಿ ತೋರಿದ ಕೈಚಳಕ ನೋಡುಗರ ಎದೆ ಝಲ್ ಎನಿಸಿತು. `ಗ್ರಾವೆಲ್‍ಕಿಂಗ್’ ಟೈಟಲ್ ಸೇರಿ ದಂತೆ ಎಂಜಿನ್ ಸಾಮಥ್ರ್ಯದ ಆಧಾರದಲ್ಲಿ 9 ವಿಭಾಗಗಳಲ್ಲಿ ರೇಸಿಂಗ್ ಜರುಗಿತು. 2 ಕಿ.ಮೀ. ಅನ್ನು ಅತ್ಯಂತ ಕಡಿಮೆ ಸಮಯದಲ್ಲಿ ಕ್ರಮಿಸುವ ರೇಸಿಂಗ್‍ನಲ್ಲಿ ಬೆಳಿಗ್ಗೆ 8.30ರಿಂದ ಸಂಜೆ 5ರವ ರೆಗೆ 100 ಮಂದಿ ನುರಿತ ಚಾಲಕರು ತಮ್ಮ ಚಾಲನ ಕೌಶಲ್ಯ ಮೆರೆದು ಪ್ರೇಕ್ಷಕರು ಬೆರಗುಣ್ಣಿನಿಂದ ನೋಡು ವಂತೆ ಮಾಡಿದರು. ಮಹಿಳಾ ವಿಭಾಗದಲ್ಲಿ 10 ಮಹಿಳೆಯರು ರೇಸಿಂಗ್‍ನಲ್ಲಿ ಪಾಲ್ಗೊಂಡಿದ್ದರು. ಈ ಪೈಕಿ ಕಳೆದ ಬಾರಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದ್ದ ಬೆಂಗಳೂರಿನ ಹರ್ಷಿತಾಗೌಡ ಈ ಸಲವೂ 1600 ಸಿಸಿ ಎಂಜಿನ್‍ನ ಕಾರಿನೊಂದಿಗೆ ಸ್ಪರ್ಧೆಗೆ ಇಳಿದರು. ಅದೇ ರೀತಿ ಕಳೆದ ಬಾರಿ `ಗ್ರಾವೆಲ್‍ಕಿಂಗ್’ ಟೈಟಲ್‍ಗೆ ಭಾಜನರಾಗಿದ್ದ ಬೆಂಗಳೂರಿನ ಧ್ರುವಚಂದ್ರಶೇಖರ್ ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾದರು. ಇವರು ತಮ್ಮ 1600 ಸಿಸಿ ಎಂಜಿನ್ ಕಾರಿನೊಂದಿಗೆ ಸ್ಪರ್ಧ ಕಣಕ್ಕಿಳಿದರು. ಖ್ಯಾತ ರೇಸಿಂಗ್ ಚಾಲಕರಾದ ಮೈಸೂರಿನ ಡೆನ್ ತಿಮ್ಮಯ್ಯ, ಮಂಗಳೂರಿನ ಡೀನ್ ಮಸ್ಕರೆನ್ಹಾಸ್, ಚೇತನ ಶಿವರಾಂ, ದೆಹಲಿಯ ಅಮನ್ ಪ್ರಿತ್ ಸಿಂಗ್ ಹಾಗೂ ಕಳೆದ ಬಾರಿ ದ್ವಿತೀಯ ಅತ್ಯಂತ ವೇಗದ ಚಾಲಕರಾಗಿ ಹೊರಹೊಮ್ಮಿದ ಹಿಮಾಚಲ ಪ್ರದೇಶದ ಅಚಿಂತ್ಯ ಮಹ್ರೋತ್ರ ಸೇರಿದಂತೆ ಅನೇಕ ಪ್ರಸಿದ್ಧ ರೇಸ್ ಚಾಲಕರು ರೇಸ್ ಪ್ರಿಯರಿಗೆ ಸಾಹಸದ ರಸದೌತಣ ಉಣಬಡಿಸಿದರು. ಮೈಸೂರು ಲೋಕಲ್ ನೋವೈಸ್ ವಿಭಾಗದಲ್ಲಿ ಮೈಸೂರು ನಗರದ 16 ಯುವಕರು ತಮ್ಮ ಹೊಸ ಅನುಭವದೊಂದಿಗೆ ಚಾಲನಾ ಚಾಕಚಕ್ಯತೆ ಪ್ರದರ್ಶಿಸಿದರು. ಈ ಬಾರಿ 3ನೇ ವರ್ಷದ ರೇಸಿಂಗ್ ಹಮ್ಮಿಕೊಳ್ಳಲಾಗಿದೆ. 40 ವರ್ಷಗಳ ಹಿಂದೆ ಇದೇ ಜಾಗದಲ್ಲಿ ಭಾರತದ ಮೊಟ್ಟ ಮೊದಲ ಆಟೋ ಕ್ರಾಸಿಂಗ್ ರೇಸ್ ನಡೆದಿತ್ತು ಎನ್ನುತ್ತಾರೆ ಅಸ್ಕಾಮ್‍ನ ನಿರ್ದೇಶಕ ಅರುಣ್ ಅರಸ್. ರೋಚಕ ರೇಸಿಂಗ್ ಕಣ್ತುಂಬಿ ಕೊಳ್ಳಲು 8 ಸಾವಿರ ಆಸನ ವ್ಯವಸ್ಥೆ ಮಾಡಲಾಗಿತ್ತು. ಉಚಿತ ಪ್ರವೇಶದೊಂದಿಗೆ ಪಾಸ್ ವ್ಯವಸ್ಥೆ ಮಾಡಲಾಗಿತ್ತು. ಎಲ್‍ಇಡಿ ಪರದೆಗಳನ್ನು ಅಲ್ಲಲ್ಲಿ ಅಳವಡಿಸಿ ಪ್ರೇಕ್ಷಕರು ಸನಿಹ ದಿಂದ ಸಾಹಸಮಯ ದೃಶ್ಯಗಳನ್ನು ನೋಡಿ ಆನಂದಿಸಲು ವ್ಯವಸ್ಥೆ ಮಾಡಲಾಗಿತ್ತು. ಮಕ್ಕಳು, ಯುವಕ-ಯುವತಿಯರು ಸೇರಿದಂತೆ ಸಾವಿರಾರು ಮಂದಿ ಅತ್ಯದ್ಭುತ ಆಟೋಕ್ರಾಸಿಂಗ್ ಕಂಡು ಪುಳಕಗೊಂಡರು. ಪ್ರವಾಸೋ ದ್ಯಮ ಇಲಾಖೆ ಉಪನಿರ್ದೇಶಕ ಹೆಚ್.ಜನಾರ್ಧನ್ ಗ್ರಾವೆಲ್ ಫೆಸ್ಟ್‍ಗೆ ಹಸಿರು ನಿಶಾನೆ ತೊರೆದರು. ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿವಿಧ ವಿಭಾಗಗಳ ರೇಸಿಂಗ್‍ಗೆ ಹಸಿರು ನಿಶಾನೆ ನೀಡಿ ನೆರೆದಿದ್ದ ತಮ್ಮ ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿದರು. ಬಳಿಕ ಮಾಜಿ ಸಚಿವ ಜಿ.ಟಿ.ದೇವೇಗೌಡ ಭೇಟಿ ನೀಡಿ ಫೆಸ್ಟ್‍ಗೆ ಶುಭ ಕೋರಿದರು. ಮಧ್ಯಾಹ್ನ ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಹ ಭೇಟಿ ನೀಡಿ ನಾನಾ ವಿಭಾಗದ ರೇಸಿಂಗ್‍ಗೆ ಹಸಿರು ನಿಶಾನೆ ತೋರಿದರು. ಪೊಲೀಸ್ ಬಂದೋಬಸ್ತ್ ಸೇರಿದಂತೆ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗಿತ್ತು.