ಮೈಸೂರಲ್ಲಿ ದಿನೇ ದಿನೆ ಹೆಚ್ಚುತ್ತಿವೆ ನಾಯಿ ಕಳವು ಪ್ರಕರಣಗಳು

ಮೈಸೂರು: ಸಾಕು ನಾಯಿಗಳನ್ನು ಕಳವು ಮಾಡಿ ಬ್ರೀಡರ್ ಗಳಿಗೆ ಮಾರುವವರ ಸಂಖ್ಯೆ ದಿನೇ ದಿನೆ ಮೈಸೂರಲ್ಲಿ ಹೆಚ್ಚಾಗುತ್ತಿದೆ.

ಪರಿಣಾಮ ಆತಂಕಗೊಂಡಿರುವ ಮಾಲೀಕರು, ಮನೆಗಳಿಂದ ಸಾಕು ನಾಯಿ ಗಳು ಕಳವಾಗುತ್ತಿರುವ ಬಗ್ಗೆ ಪೊಲೀಸ್ ಠಾಣೆಗಳಿಗೆ ದೂರು ನೀಡುತ್ತಿದ್ದಾರೆ. ನಾಯಿ ಗಳ ಅಪಹರಣ ಕುರಿತು ಡಿಸೆಂಬರ್ 23 ಮತ್ತು 28ರಂದು ಮೇಟಗಳ್ಳಿ ಠಾಣೆಯಲ್ಲಿ ದೂರು ನೀಡಲಾಗಿತ್ತು.

ಮೈಸೂರಿನ ವಿಜಯನಗರ 2ನೇ ಹಂತದ ನಿವಾಸಿ ಯಶಸ್ವಿನಿ ಎಂಬುವರ ಮನೆಯಲ್ಲೂ ಭಾನುವಾರ ಮುಂಜಾನೆ 6 ಗಂಟೆ ವೇಳೆಗೆ 2 ವರ್ಷದ ಇಂಗ್ಲಿಷ್ ಕಾಕರ್ ಸ್ಟಾನಿಯಲ್ ನಾಯಿ ಕಾಣೆಯಾಗಿ ರುವುದಾಗಿ ವಿಜಯನಗರ ಠಾಣೆಗೆ ದೂರು ನೀಡಲಾಗಿದೆ.

ತಮ್ಮ ನಾಯಿ ಕಣ್ಮರೆಯಾಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಯಶಸ್ವಿನಿ ಅವರು ಮಾಹಿತಿ ಪೋಸ್ಟ್ ಮಾಡಿದ್ದ ಹಿನ್ನೆಲೆಯಲ್ಲಿ ಅವರ ಮೊಬೈಲ್‍ಗೆ ಕರೆ ಮಾಡಿದ ಸ್ನೇಹಿತರು ಕೆ.ಡಿ. ಸರ್ಕಲ್‍ನಲ್ಲಿ `ನಾಯಿ ಮಾರಾಟಕ್ಕಿವೆ’ ಎಂಬ ಚೀಟಿ ಅಂಟಿಸಲಾಗಿದೆ ಎಂದು ತಿಳಿಸಿದರು.

ತಕ್ಷಣ ಅಲ್ಲಿದ್ದ ಮೊಬೈಲ್ ನಂಬರ್‍ಗೆ ಕರೆ ಮಾಡಿದ ಯಶಸ್ವಿನಿ ಅವರು, ನಂತರ ಅವರ ಸ್ಥಳಕ್ಕೆ ತೆರಳಿದಾಗ ಅಲ್ಲಿ ತಮ್ಮ ನಾಯಿ ಇರುವುದು ಪತ್ತೆಯಾಯಿತು. ನಮ್ಮ ನಾಯಿಯನ್ನು ಏಕೆ ತಂದಿದ್ದೀರಿ ಎಂದಾಗ `ಅದು ಪಾರ್ಕ್ ಬಳಿ ಅನಾಥ ವಾಗಿ ನಿಂತಿತ್ತು. ನಂತರ ನಮ್ಮನ್ನು ಹಿಂಬಾಲಿಸಿ ಬಂತು’ ಎಂಬುದಾಗಿ ಅವರು ಸುಳ್ಳು ಹೇಳಿದರು. ತಕ್ಷಣ ನಾವು ವಿಜಯನಗರ ಠಾಣೆಗೆ ತೆರಳಿ ದೂರು ನೀಡಿದೆವು ಎಂದು ಯಶಸ್ವಿನಿ ತಿಳಿಸಿದ್ದಾರೆ.

ಕೆಲವರು ನಾಯಿಗಳನ್ನು ಅಪಹರಿಸಿ ಮಾರುತ್ತಿದ್ದಾರೆ ಕೆನ್ನೆನ್ ಕ್ಲಬ್ ಅಧ್ಯಕ್ಷ ಬಿ.ಪಿ.ಮಂಜುನಾಥ ಪ್ರತಿಕ್ರಿಯೆ
ಮೈಸೂರು,ಡಿ.30(ಆರ್‍ಕೆ)-ಮೈಸೂರಲ್ಲಿ ಕೆಲವು ಕೆನೆಲ್ಸ್‍ಗಳು ಸಾಕು ನಾಯಿಗಳನ್ನು ಅಪಹರಿಸಿ ಮಾರಾಟ ಮಾಡುವ ದಂಧೆ ನಡೆಸುತ್ತಿವೆ ಎಂದು ಕೆನ್ನೆಲ್ ಕ್ಲಬ್ ಆಫ್ ಮೈಸೂರು ಅಧ್ಯಕ್ಷ ಬಿ.ಪಿ.ಮಂಜುನಾಥ ತಿಳಿಸಿ ದ್ದಾರೆ. ಮೈಸೂರಿನಲ್ಲಿ 134 ಕೆನೆಲ್ಸ್‍ಗಳಿದ್ದು ಕೆನ್ನೆನ್ ಕ್ಲಬ್ ಆಫ್ ಇಂಡಿಯಾದಿಂದ ಸಂಯೋಜನೆ ಪಡೆದಿವೆ. ನಾಯಿಗಳನ್ನು ಅಪರಿ ಚಿತರಿಂದ ಖರೀದಿಸುವ ಕೆನೆಲ್‍ಗಳನ್ನು ಕಪ್ಪು ಪಟ್ಟಿಗೆ ಸೇರಿಸಿ ಅವರ ಪರವಾನಗಿ ರದ್ದುಪಡಿಸುವಂತೆ ನಾನು ಸಿಐಐಗೆ ಪತ್ರ ಬರೆಯುತ್ತೇನೆ ಎಂದು ಅವರು ತಿಳಿಸಿದರು. ಪೊಲೀಸ್ ಕೇಸ್ ಆದರೆ, ಪರವಾನಗಿ ರದ್ದಾದರೆ ಅಂತಹ ಕೆನಲ್ಸ್‍ಗಳಿಗೆ ಯಾವುದೇ ಶ್ವಾನ ಪ್ರದರ್ಶನಗಳಲ್ಲಿ ಪಾಲ್ಗೊಳ್ಳದಂತೆ ನಿರ್ಬಂಧಿಸಲಾಗುವುದು ಎಂದ ಮಂಜುನಾಥ, ನಾಯಿ ಕಣ್ಮರೆಯಾದಲ್ಲಿ ತಕ್ಷಣ ಮಾಲೀಕರು ಹತ್ತಿರದ ಪೊಲೀಸ್ ಠಾಣೆ ಹಾಗೂ ಕೆನ್ನೆನ್ ಕ್ಲಬ್ ಆಫ್ ಮೈಸೂರ್ ಅನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ.