ಈರುಳ್ಳಿ ಬೆಲೆ ತಗ್ಗಿಸಲು ಆಮದು ಹೆಚ್ಚಳಕ್ಕೆ ಕೇಂದ್ರದ ಕ್ರಮ

ನವದೆಹಲಿ,ಡಿ.1- ಈರುಳ್ಳಿ ಬೆಲೆ ತಗ್ಗು ವಂತೆ ಮಾಡಲು ಕೇಂದ್ರ ಸರ್ಕಾರ ವಿದೇಶದಿಂದ ಈರುಳ್ಳಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿ ಕೊಳ್ಳಲು ಮುಂದಾಗಿದೆ. ಈಜಿಪ್ಟ್‍ನಿಂದ ಈರುಳ್ಳಿ ಭಾರತಕ್ಕೆ ಆಮದಾಗುತ್ತಿದೆ. ಟರ್ಕಿಯಿಂದಲೂ ಹೆಚ್ಚುವರಿಯಾಗಿ ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಈಜಿಪ್ಟ್‍ನಿಂದ 6090 ಟನ್ ಮತ್ತು ಟರ್ಕಿಯಿಂದ 11 ಸಾವಿರ ಟನ್ ಈರುಳ್ಳಿ ಆಮದು ಮಾಡಿಕೊಳ್ಳಲಾಗುವುದು ಎಂದು ಸರ್ಕಾರದ ಮೂಲಗಳು ಹೇಳಿವೆ. ಡಿಸೆಂಬರ್ 2 ಅಥವಾ 3ನೇ ವಾರದ ವೇಳೆಗೆ ಈ ಈರುಳ್ಳಿ ಭಾರತದ ಮಾರುಕಟ್ಟೆಗಳಲ್ಲಿ ಲಭ್ಯವಾಗ ಲಿದೆ. ಈರುಳ್ಳಿ ದರ ಹೆಚ್ಚಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನ.20ರಂದು 1.2 ಲಕ್ಷ ಟನ್ ಈರುಳ್ಳಿ ಆಮದಿಗೆ ಸಮ್ಮತಿ ನೀಡಿತ್ತು. ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆ ಆಗಿ ದ್ದರಿಂದ ಉತ್ತರ ಪ್ರದೇಶ, ದೆಹಲಿ ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಈರುಳ್ಳಿ ಬೆಲೆ ತಗ್ಗಿಸಲು ತಕ್ಷಣವೇ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದವು. ಹಾಗಾಗಿಯೇ ಆಮದು ಪ್ರಮಾಣವನ್ನು ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.