ಕಾಶ್ಮೀರಿ ಪ್ರತ್ಯೇಕತಾವಾದಿಗಳ ಭದ್ರತೆ ಹಿಂಪಡೆದ ಕೇಂದ್ರ ಸರ್ಕಾರ

ಜಮ್ಮು-ಕಾಶ್ಮೀರ: ಪಾಕಿಸ್ತಾನ ಹಾಗೂ ಐಎಸ್‍ಐ ಜೊತೆಗಿನ ನಂಟಿನ ಹಿನ್ನೆಲೆಯಲ್ಲಿ ಮಿರ್ವೈಜ್ ಉಮರ್ ಫಾರುಖ್ ಸೇರಿದಂತೆ ಪ್ರತ್ಯೇಕತಾವಾದಿಗಳಿಗೆ ನೀಡಲಾಗಿದ್ದ ಭದ್ರತೆಯನ್ನು ಕೇಂದ್ರ ಸರ್ಕಾರ ಇಂದು ಹಿಂಪಡೆದಿದೆ.

ಪುಲ್ವಾಮಾ ಉಗ್ರರ ದಾಳಿಯಲ್ಲಿ 40 ಸಿಆರ್‍ಪಿಎಫ್ ಯೋಧರು ಹುತಾತ್ಮರಾದ ಬೆನ್ನಲ್ಲೇ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಪಾಕಿಸ್ತಾನ ಹಾಗೂ ಅದರ ಗುಪ್ತಚರ ಸಂಸ್ಥೆ ಐಎಸ್‍ಐ ಪರವಾಗಿ ಕೆಲಸ ಮಾಡುತ್ತಿರುವ ಪ್ರತ್ಯೇಕತಾ ವಾದಿಗಳಿಗೆ ನೀಡಲಾಗಿರುವ ಭದ್ರತೆಯನ್ನು ಹಿಂಪಡೆಯಲು ಸರ್ಕಾರ ಯೋಚನೆ ಮಾಡುತ್ತಿದೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ತಿಳಿಸಿದ್ದರು.

ಪಾಕಿಸ್ತಾನ ಹಾಗೂ ಐಎಸ್‍ಐಯಿಂದ ಹಣವನ್ನು ತೆಗೆದುಕೊಳ್ಳುವ ಅಂಶಗಳು ಕೇಳಿಬಂದಿದ್ದು, ಭದ್ರತೆಯನ್ನು ಪರಿಶೀಲಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ ದ್ದೇನೆ ಎಂದು ಕಾಶ್ಮೀರಕ್ಕೆ ಭೇಟಿ ನೀಡಿದ್ದ ರಾಜನಾಥ್ ಸಿಂಗ್ ಹೇಳಿದ್ದರು. ಪಾಕಿಸ್ತಾನದ ಐಎಸ್‍ಐ ಹಾಗೂ ಉಗ್ರ ಸಂಘಟನೆಗಳೊಂದಿಗೆ ಜಮ್ಮ- ಕಾಶ್ಮೀರದಲ್ಲಿನ ಕೆಲವರು ಸಂಪರ್ಕದಲ್ಲಿರುವ ಅಂಶ ತಿಳಿದುಬಂದಿದೆ. ಆದರೆ, ಅವರ ಯೋಜನೆಯನ್ನು ಸರ್ಕಾರ ಬುಡಮೇಲು ಮಾಡಲಿದೆ ಎಂದು ಅವರು ಹೇಳಿದ್ದರು. ಇಂತಹ ಜನರು ಜಮ್ಮು-ಕಾಶ್ಮೀರದಲ್ಲಿನ ಜನರು ಹಾಗೂ ಯುವಕರ ಭವಿಷ್ಯದ ಜೊತೆಗೆ ಆಟವಾಡುತ್ತಿದ್ದಾರೆ. ಉಗ್ರರ ವಿರುದ್ಧ ನಮ್ಮ ಹೋರಾಟ ಮುಂದುವರೆಯಲಿದ್ದು, ಅದರಲ್ಲಿ ನಾವುಗಳು ಜಯಗಳಿಸುವ ವಿಶ್ವಾಸ ಇರುವುದಾಗಿ ರಾಜನಾಥ್ ಸಿಂಗ್ ತಿಳಿಸಿದ್ದರು.