ಶತಮಾನ ಪೂರೈಸಿದ ಶಾಲೆಯ ಶಿಥಿಲಾವಸ್ಥೆ!

ಮೈಸೂರು: ನೋಡಿದರೆ ಸಾಕು ಯಾವಾಗ ಬೀಳು ತ್ತದೋ ಎಂಬ ಆತಂಕ ಮೂಡದೇ ಇರದು. ಅಷ್ಟರ ಮಟ್ಟಿಗೆ ಶಿಥಿಲಾವಸ್ಥೆಗೆ ತಲುಪಿದೆ ಶತಮಾನ ಪೂರೈಸಿದ ಸರ್ಕಾರಿ ಶಾಲೆಯ ಕಟ್ಟಡ.

ಮೈಸೂರಿನ ತಿಲಕನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ ಇದು. ಪಾಳು ಬಿದ್ದಂತೆ ಕಂಡು ಬರುವ ವಾತಾವರಣ ಅಲ್ಲಿ ನಿರ್ಮಾಣವಾಗಿದ್ದು, ಕಟ್ಟಡದ ಗೋಡೆಗಳಲ್ಲಿ ಬಿರುಕು, ಸಿಮೆಂಟ್ ಕಿತ್ತು ಬಂದಿರುವುದು ಸೇರಿದಂತೆ ದುರಾವಸ್ಥೆಯೇ ಇಲ್ಲಿ ನೆಲೆ ನಿಂತಂತಿದೆ.

ತಲೆ ಎತ್ತಿ ನೋಡಿದರೆ ಮೇಲ್ಛಾವಣಿ ಬೀಳುವಂತೆ ಭಾಸವಾಗದೇ ಇರದು. ಕತ್ತಲಲ್ಲಿ ಇತ್ತ ಕಣ್ಣಾಯಿಸಿದರೆ ಇದು ಯಾವುದೋ ಭೂತ ಬಂಗಲೆ ಇರಬೇಕು ಎನ್ನಿಸದಿರದು. ಇಷ್ಟೆಲ್ಲಾ ಅವ್ಯವಸ್ಥೆಗಳ ನಡುವೆಯೂ ಕಟ್ಟಡದ ಎಡಭಾಗದಲ್ಲಿ ಪಾಠ ಪ್ರವಚನ ಕೇಳುವ ಪರಿಸ್ಥಿತಿಯಲ್ಲಿ ಇದ್ದಾರೆ ಈ ಶಾಲೆಯ ಮಕ್ಕಳು. ಪ್ರಸ್ತುತ 1ರಿಂದ 7ನೇ ತರಗತಿವರೆಗೆ ಒಟ್ಟು 59 ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಪ್ರಸಕ್ತ ಸಾಲಿನಲ್ಲಿ 10 ಮಕ್ಕಳು ಹೊಸದಾಗಿ ಈ ಶಾಲೆಗೆ ಪ್ರವೇಶಾತಿ ಪಡೆದಿದ್ದಾರೆ. ಇಬ್ಬರೇ ಶಿಕ್ಷಕರು ಈ ಎಲ್ಲಾ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದಾರೆ.

ಈ ಕಟ್ಟಡ 1857ರಲ್ಲಿ ನಿರ್ಮಾಣವಾಗಿದೆ ಎನ್ನುವ ಸ್ಥಳೀಯರು, ಅಂದು ಕ್ರಿಶ್ಚಿಯನ್ ಮಿಷನರಿಗಳ ಮೂಲಕ ಈ ಕಟ್ಟಡದಲ್ಲಿ ಬಾಲಕಿಯರ ಪ್ರಾಥಮಿಕ ಶಾಲೆ ಆರಂಭವಾಯಿತು. ಅಂದಿನ ಬ್ರಿಟಿಷ್ ಸರ್ಕಾರ ಮಿಷನರಿಗಳಿಗೆ ಶಾಲೆ ಆರಂಭಿ ಸಲು ಈ ಕಟ್ಟಡ ನೀಡಿತ್ತು. 1952ರಿಂದ ರಾಜ್ಯ ಸರ್ಕಾರದ ಸುಪರ್ದಿಯಲ್ಲಿ ಸರ್ಕಾರಿ ಶಾಲೆಯಾಗಿ ನಡೆಯುತ್ತಿದೆ ಎನ್ನುತ್ತಾರೆ ಇಲ್ಲಿನ ಸಾರ್ವಜನಿಕರು.

ದುರಸ್ತಿಗೂ ಅಡ್ಡಿ: ಶಾಲಾ ಕಟ್ಟಡದ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ನ್ಯಾಯಾ ಲಯದಲ್ಲಿ ವ್ಯಾಜ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಟ್ಟಡದ ದುರಸ್ತಿಗೂ ಗ್ರಹಣ ಹಿಡಿದಿದೆ. ಈ ಸಂಬಂಧ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಕೆ.ಪ್ರಕಾಶ್, ನಾನು 2011ರಲ್ಲಿ ಈ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷನಾದೆ. ಆ ಬಳಿಕ ಶಾಲೆಯ ಹಿನ್ನೆಲೆಯನ್ನು ಇಲ್ಲಿನ ಅನೇಕ ಹಿರಿಯರೊಂದಿಗೆ ಸಮಾಲೋಚಿಸಿ ತಿಳಿದುಕೊಂಡಿದ್ದೇನೆ. ಈ ಕಟ್ಟಡವನ್ನು 1857ರಲ್ಲಿ ನಿರ್ಮಿಸಲಾಗಿದ್ದು, 1865ರಲ್ಲಿ ಬ್ರಿಟಿಷ್ ಸರ್ಕಾರದ ಮೂಲಕ ಕ್ರಿಶ್ಚಿಯನ್ ಮಿಷನರಿಗಳು ಈ ಕಟ್ಟಡದಲ್ಲಿ ಬಾಲಕಿಯರ ಪ್ರಾಥಮಿಕ ಶಾಲೆ ಆರಂಭಿಸಿದ್ದರು ಎಂದು ವಿವರಿಸಿದರು.

2011ರಲ್ಲಿ ಸರ್ವ ಶಿಕ್ಷಣ ಅಭಿಯಾನದಡಿ ಈ ಶಾಲೆಯ ಆವರಣದಲ್ಲಿ ಹೆಚ್ಚುವರಿ ಯಾಗಿ ಐದು ಕೊಠಡಿ ನಿರ್ಮಿಸಲು 15.27 ಲಕ್ಷ ರೂ. ಅನುದಾನ ಬಂದಿತ್ತು. ಇದಕ್ಕೆ ಚಾಲನೆ ನೀಡಲು ಗುದ್ದಲಿ ಪೂಜೆ ನಡೆಸಿದಾಗ, ಸಿಎಸ್‍ಐ ಚರ್ಚ್‍ನವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದರು. 1951-52ರಿಂದ ಈ ಕಟ್ಟಡದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ನಡೆಯುತ್ತಿರುವ ಬಗ್ಗೆ ದಾಖಲೆಗಳು ಇವೆ. ಈ ಮಧ್ಯೆ 1985ರಲ್ಲಿ ಶಾಲೆಯ ಮುಖ್ಯ ಶಿಕ್ಷಕರಾಗಿದ್ದವರು ಸಿಎಸ್‍ಐ ಚರ್ಚ್‍ನವರಿಗೆ ಶಾಲಾ ಕಟ್ಟಡ ಬಾಡಿಗೆ ಹಣವೆಂದು ಪಾವತಿ ಮಾಡಿ ದ್ದಾರೆ. ತಡೆಯಾಜ್ಞೆ ವಜಾಗೊಂಡರು ಬಾಡಿಗೆ ಕಟ್ಟಿಸಿಕೊಂಡ ರಶೀದಿ ಮೇರೆಗೆ ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂದು ತಿಳಿಸಿದರು.

1997ರಲ್ಲಿ ಸಿಎಸ್‍ಐ ಚರ್ಚ್‍ನವರು ಶಾಲೆಯ ಆಸ್ತಿಯನ್ನು ಖರೀದಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಆದರೆ ತಮ್ಮ ಮಾಲೀಕತ್ವಕ್ಕೆ ಸೂಕ್ತ ದಾಖಲೆಗಳನ್ನು ಚರ್ಚ್‍ನವರು ಹಾಜರುಪಡಿಸಲು ಸಾಧ್ಯವಾಗದೇ ಈ ಪ್ರಕ್ರಿಯೆ ನೆನೆಗುದಿಗೆ ಬಿದ್ದಿತು. ನ್ಯಾಯಾಲಯದ ಅಂತಿಮ ತೀರ್ಪು ಎದುರು ನೋಡುತ್ತಿದ್ದು, ನ್ಯಾಯಾಲಯದ ತೀರ್ಪಿಗೆ ತಲೆ ಬಾಗ ಬೇಕಾಗುತ್ತದೆ. ನಮಗೆ ಮಕ್ಕಳ ಹಿತ ಕಾಯುವುದು ಮುಖ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಶೀಘ್ರದಲ್ಲಿ ಸಮೀಪದಲ್ಲೇ ಇರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಕ್ಕಳನ್ನು ವರ್ಗಾಯಿಸಲಾಗು ವುದು ಎಂದು ಹೇಳಿದರು.

ಜೂ.17ಕ್ಕೆ ವಿಚಾರಣೆ: ಈ ಸಂಬಂಧ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಈ ಶಾಲೆ ಒಳಪಡುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಉದಯಕುಮಾರ್, ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಷ್ ಸರ್ಕಾರದ ಮೂಲಕ ಕ್ರಿಶ್ವಿಯನ್ ಮಿಷನರಿ ಗಳು ಶಾಲೆ ನಡೆಸಿರುವ ಬಗ್ಗೆ ದಾಖಲೆ ಗಳಿದ್ದು, ಹೀಗಾಗಿ ಅವರು ನಮ್ಮದು ಎನ್ನುತ್ತಿದ್ದಾರೆ. ಆದರೆ ಬ್ರಿಟಿಷ್ ಸರ್ಕಾರ ಹೋದ ಬಳಿಕ ಅದು ರಾಜ್ಯ ಸರ್ಕಾರದ ಸುಪರ್ದಿಗೆ ಸೇರಬೇಕಾಗು ತ್ತದೆ. 1952ರಿಂದಲೂ ಈ ಕಟ್ಟಡದಲ್ಲಿ ಸರ್ಕಾರಿ ಶಾಲೆ ನಡೆಯುತ್ತಿದ್ದು, ಹೀಗಾಗಿ ಮಕ್ಕಳ ಹಿತದೃಷ್ಟಿಯಿಂದ ನವೀಕರಣ ಹಾಗೂ ದುರಸ್ತಿಗೆ ಅವಕಾಶ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದು, ಜೂ.17ಕ್ಕೆ ವಿಚಾರಣೆ ನಡೆಯಲಿದೆ. ಅಲ್ಲಿವರೆಗೆ ಕಾಯದೇ ಶೀಘ್ರದಲ್ಲಿ ಮಕ್ಕಳನ್ನು ಇಲ್ಲಿಗೆ ಸಮೀಪದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಟ್ಟಡಕ್ಕೆ ಸ್ಥಳಾಂತರ ಮಾಡ ಲಾಗುವುದು ಎಂದರು.