ಅರಸೀಕೆರೆಯಲ್ಲಿ ಆಭರಣ ಚೋರರ ಕಾಟ

* ಒಂದೇ ದಿನದಲ್ಲಿ 2 ಘಟನೆ

* ಒಟ್ಟು 3.25 ಲಕ್ಷ ರೂ. ಚಿನ್ನಾಭರಣ ಅಪಹರಣ

* ಗೃಹಿಣಿಯರೇ ಟಾರ್ಗೆಟ್

* ನಾಗರಿಕರಲ್ಲಿ ಕಳವಳ

ಅರಸೀಕೆರೆ: ಅರಸೀಕೆರೆ ಪಟ್ಟಣದಲ್ಲಿ ಚಿನ್ನಾ ಭರಣ ಕಳ್ಳರ ಕಾಟ ಮಿತಿಮೀರಿದೆ. ಒಂದೇ ದಿನದಲ್ಲಿ ನಡೆದ 2 ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಮಹಿಳೆಯರು ಒಟ್ಟು 3.25 ಲಕ್ಷ ರೂ. ಬೆಲೆಯ ಚಿನ್ನಾಭರಣ ಕಳೆದು ಕೊಂಡಿದ್ದಾರೆ. ಒಂದೆಡೆ ವಾಯುವಿಹಾರ ಮಾಡುತ್ತಿದ್ದ ಗೃಹಿಣಿಯ ಮಾಂಗಲ್ಯಸರ ಕಿತ್ತೊಯ್ದಿದ್ದರೆ, ಇನ್ನೊಂದೆಡೆ ಬಸ್ ಹತ್ತುತ್ತಿದ್ದ ಗೃಹಿಣಿಯ ಬ್ಯಾಗ್‍ನಿಂದ ಚಿನ್ನಾಭರಣ ಕದಿಯಲಾಗಿದೆ. ಗೃಹಿಣಿಯರನ್ನೇ ಗುರಿಯಾಗಿಸಿ ಕೊಂಡಿರುವ ಆಭರಣ ಚೋರರ ಸರಣಿ ಕೃತ್ಯ ಅರಸೀಕೆರೆ ಪೊಲೀಸರಿಗೆ ಸವಾಲೆಸೆಯುವಂತಿದೆ.

ಬಸ್ ಹತ್ತುತ್ತಿದ್ದ ಗೃಹಿಣಿ ಬ್ಯಾಗ್‍ನಿಂದ 2.50 ಲಕ್ಷ ರೂ. ಚಿನ್ನಾಭರಣ ಕಳವು
ಅರಸೀಕೆರೆ ಬಸ್ ನಿಲ್ದಾಣದಲ್ಲಿ ಬಾಣಾವರಕ್ಕೆ ಹೋಗುವ ಬಸ್ ಹತ್ತುತ್ತಿದ್ದ ಗೃಹಿಣಿಯೊಬ್ಬರ ಬ್ಯಾಗ್‍ನಿಂದ 2.50 ಲಕ್ಷ ರೂ. ಬೆಲೆಯ ಚಿನ್ನಾಭರಣ ಕಳುವಾಗಿದೆ.

ಮೈಸೂರು ಜಿಲ್ಲೆ ಕೆಆರ್ ನಗರದ ಆಸ್ಮಾಭಾನು ಎಂಬು ವರು ಬಾಣಾವಾರದಲ್ಲಿ ನಡೆಯಲಿದ್ದ ಮಾವನ ಮಗನ ಮದುವೆಗೆ ಹೋಗಲು ಕೆಆರ್‍ನಗರದಿಂದ ಶನಿವಾರ ರೈಲಿನಲ್ಲಿ ಅರಸೀಕೆರೆಗೆ ಬಂದಿದ್ದಾರೆ. ಅಲ್ಲಿಂದ ಬಾಣಾ ವರಕ್ಕೆ ತೆರಳಲು ಬೆಳಿಗ್ಗೆ 9.20ರಲ್ಲಿ ಬಸ್ ಹತ್ತಿದ್ದಾರೆ. ಟಿಕೆಟ್ ತೆಗೆದುಕೊಳ್ಳಲು ಹಣಕ್ಕಾಗಿ ಬ್ಯಾಗ್‍ಗೆ ಕೈಹಾಕಿ ದಾಗ ಬ್ಯಾಗಿನೊಳಗಿಟ್ಟಿದ್ದ ಒಟ್ಟು 103.5 ಗ್ರಾಂ ತೂಕದ ಚಿನ್ನಾಭರಣಗಳ ಡಬ್ಬಿ ಕಳುವಾಗಿರುವುದು ಕಂಡುಬಂದಿದೆ.

35 ಗ್ರಾಂ ತೂಕದ ಚಿನ್ನದ ಸರ, 17 ಗ್ರಾಂ ತೂಕದ ಹ್ಯಾಂಗಿಂಗ್ಸ್, 6.50 ಗ್ರಾಂ ತೂಕದ ಉಂಗುರ, 11 ಗ್ರಾಂ ತೂಕದ ಉಂಗುರ, 7 ಮತ್ತು 6 ಗ್ರಾಂ ತೂಕದ 2 ಉಂಗುರ, 10 ಮತ್ತು 6 ಗ್ರಾಂಗಳ 2 ಸರ, 5 ಗ್ರಾಂಗಳ ಕಿವಿಯೋಲೆ, 2 ಮೂಗುಬೊಟ್ಟು ಕಳ್ಳರ ಪಾಲಾಗಿದೆ.

ಆಸ್ಮಾಭಾನು ಕೊಟ್ಟ ದೂರಿನ ಮೇರೆಗೆ ಅರಸೀಕೆರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಾಯುವಿಹಾರ ವೇಳೆ ಮಾಂಗಲ್ಯಸರ ಕಿತ್ತೊಯ್ದ ಮುಸುಕುಧಾರಿ!
ಮತ್ತೊಂದು ಪ್ರಕರಣದಲ್ಲಿ ಶನಿವಾರ ಮುಂಜಾನೆ ವಾಯುವಿಹಾರ ನಡೆಸುತ್ತಿದ್ದ ಗೃಹಿಣಿಯೊಬ್ಬರ ಮೇಲೆ ದಾಳಿ ನಡೆಸಿದ ಮುಸುಕುಧಾರಿ ವ್ಯಕ್ತಿಯೊಬ್ಬ ಬಲ ಪ್ರಯೋಗಿಸಿ 75 ಸಾವಿರ ರೂ. ಬೆಲೆಯ ಮಾಂಗಲ್ಯ ಸರವನ್ನು ಕಿತ್ತೊಯ್ದಿದ್ದಾನೆ. ಅರಸೀಕೆರೆ ಪಟ್ಟಣದ ಮಾರುತಿನಗರ ಬಡಾವಣೆಯ ಗಂಗಾಧರ್ ಎಂಬವರ ಪತ್ನಿ ಪುಷ್ಪ ಸರ ಕಳೆದುಕೊಂಡವರು.

ಅವರು ಶನಿವಾರ ಬೆಳಿಗ್ಗೆ 5.30ರ ವೇಳೆ ಮಾರುತಿ ದೇವಸ್ಥಾನದ ಹತ್ತಿರ ವಾಕಿಂಗ್ ಮಾಡುತ್ತಿದ್ದಾಗ ಎದುರು ಗಡೆಯಿಂದ ಬಂದ ಮುಸುಕುಧಾರಿ ವ್ಯಕ್ತಿ ಪುಷ್ಪಾ ಅವರ ಕೊರಳಲ್ಲಿದ್ದ ಮಾಂಗಲ್ಯಸರ ಕೀಳಲು ಕೈಹಾಕಿದ್ದಾನೆ. ಸರಗಳ್ಳನ ಹಠಾತ್ ದಾಳಿಯಿಂದ ಆಘಾತಕ್ಕೊಳಗಾದರೂ ತಕ್ಷಣ ಸಾವರಿಸಿಕೊಂಡ ಪುಷ್ಪಾ ಅವರು ಪ್ರತಿರೋಧ ತೋರಿದ್ದಾರೆ. ಮಾಂಗಲ್ಯಸರವನ್ನು ಎರಡೂ ಕೈಗಳಲ್ಲಿ ಬಲ ವಾಗಿ ಹಿಡಿದುಕೊಂಡು ಸರಗಳ್ಳನನ್ನು ಎದುರಿಸಿದ್ದಾರೆ. ಆದರೆ, ಬಹಳ ಬಲಿಷ್ಠನಾಗಿದ್ದ 30-35 ವರ್ಷದ ಚೋರ ತನ್ನೆಲ್ಲಾ ಬಲವನ್ನೂ ಪ್ರಯೋಗಿಸಿ 25 ಗ್ರಾಂಗಳಷ್ಟು ತೂಕದ ಸರವನ್ನು ಕಿತ್ತೊಯ್ಯುವಲ್ಲಿ ಸಫಲನಾಗಿದ್ದಾನೆ. ಆದರೆ, ಪುಷ್ಪಾ ಅವರು ಮುಷ್ಟಿಯಲ್ಲಿ ಬಿಗಿಯಾಗಿ ಹಿಡಿದುಕೊಂಡಿ ದ್ದಕ್ಕೆ 10 ಗ್ರಾಂಗಳಷ್ಟು ತೂಕದ ಸರ ಉಳಿದುಕೊಂಡಿದೆ.

ಖದೀಮ ಕಿತ್ತೊಯ್ದ ಸರದ ಮೌಲ್ಯ 75,000 ರೂ. ಎಂದು ಅಂದಾಜು ಮಾಡಲಾಗಿದೆ.
ಪುಷ್ಪಾ ಅವರು ಕೊಟ್ಟ ದೂರಿನ ಮೇರೆಗೆ ಮೇರೆಗೆ ಅರಸೀಕೆರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಭರಣ ಚೋರರ ಸರಣಿ ಕೃತ್ಯಗಳಿಂದಾಗಿ ನಗರದ ನಾಗರಿಕರು, ಅದರಲ್ಲೂ ಮಹಿಳೆಯರು ಆತಂಕಕ್ಕೀಡಾಗಿ ದ್ದಾರೆ. ಪೊಲೀಸರು ತಕ್ಷಣ ಕಾರ್ಯೋನ್ಮುಖರಾಗಿ ಚೋರರನ್ನು ಹಿಡಿದು ನಾಗರಿಕರ ಹಿತ ಕಾಪಾಡ ಬೇಕೆಂದು ಮನವಿ ಮಾಡಿದ್ದಾರೆ.