ಚಾಮರಾಜನಗರ ಮೀಸಲು ಲೋಕಸಭಾ ಚುನಾವಣೆ-2019 ಶ್ರೀನಿವಾಸ್ ಪ್ರಸಾದ್‍ಗೆ 14, ಧ್ರುವಗೆ 6ನೇ ಚುನಾವಣೆ

ಚಾಮರಾಜನಗರ: ಚಾಮ ರಾಜನಗರ ಮೀಸಲು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ವಿ.ಶ್ರೀನಿವಾಸ್ ಪ್ರಸಾದ್ ಇದುವರೆಗೆ 13 ಚುನಾವಣೆಗಳನ್ನು ಎದುರಿಸಿದ್ದಾರೆ. ಇದರಲ್ಲಿ 7 ಬಾರಿ ಗೆಲುವು ಕಂಡಿದ್ದರೆ, 6 ಬಾರಿ ಸೋಲಿನ ಕಹಿ ಉಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಮತ್ತೊಮ್ಮೆ ಕಣಕ್ಕೆ ಇಳಿಯುತ್ತಿರುವ ಆರ್.ಧ್ರುವನಾರಾಯಣ್ 5 ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ. ಈ ಪೈಕಿ 1 ಬಾರಿ ಸೋಲು ಕಂಡಿದ್ದು, 4 ಚುನಾವಣೆಗಳಲ್ಲಿ ಸತತವಾಗಿ ಗೆಲುವಿನ ನಗೆ ಬೀರಿದ್ದಾರೆ.

ವಿ.ಶ್ರೀನಿವಾಸ್ ಪ್ರಸಾದ್ ಎದುರಿಸಿರುವ 13 ಚುನಾವಣೆಗಳಲ್ಲಿ 8 ಲೋಕಸಭೆ ಚುನಾವಣೆಯಾಗಿದ್ದು, 5 ವಿಧಾನಸಭೆ ಚುನಾವಣೆ ಆಗಿದೆ. 5 ಬಾರಿ ಲೋಕಸಭೆ, 2 ಬಾರಿ ವಿಧಾನಸಭೆ ಪ್ರವೇಶಿಸಿರುವ ಇವರು, ಒಟ್ಟಾರೆ 14ನೇ ಚುನಾವಣೆಗೆ ಅಣಿ ಆಗಿದ್ದಾರೆ.
ಆರ್.ಧ್ರುವನಾರಾಯಣ್ ಇದುವರೆಗೆ ಸ್ಪರ್ಧಿಸುವ 5 ಚುನಾವಣೆಗಳಲ್ಲಿ 2ಲೋಕ ಸಭೆ ಚುನಾವಣೆ, 3 ವಿಧಾನಸಭೆ ಚುನಾ ವಣೆ ಆಗಿದೆ. ಇವರು 2 ಬಾರಿ ಲೋಕ ಸಭೆ, 2 ಬಾರಿ ವಿಧಾನಸಭೆ ಪ್ರವೇಶಿಸಿದ್ದಾರೆ. ಈ ಲೋಕಸಭೆ ಚುನಾವಣೆ 6ನೇಯ ದ್ದಾಗಿದ್ದು, ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಶ್ರೀನಿವಾಸ್ ಪ್ರಸಾದ್: 1974ರಲ್ಲಿ ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಅಣ್ಣಾ ಡಿಎಂಕೆ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮೂಲಕ ವಿ.ಶ್ರೀನಿವಾಸ ಪ್ರಸಾದ್ ರಾಜಕೀಯ ಪ್ರವೇಶಿಸಿ ಸೋತರು. 1978ರ ವಿಧಾನಸಭಾ ಚುನಾವಣೆಯಲ್ಲಿ ಟಿ.ನರಸೀಪುರ ವಿಧಾನಸಭಾ ಕ್ಷೇತ್ರದಿಂದ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತರು. ನಂತರ ನಡೆದ ರಾಜಕೀಯ ಬದಲಾವಣೆಯಿಂದ ಶ್ರೀನಿವಾಸ್ ಪ್ರಸಾದ್ ಕಾಂಗ್ರೆಸ್ ಸೇರಿದರು. 1980ರ ಲೋಕ ಸಭಾ ಚುನಾವಣೆಯಲ್ಲಿ ಚಾಮರಾಜ ನಗರ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಬಾರಿಗೆ ಜಯದ ರುಚಿ ಕಂಡ ಅವರು ನಂತರ ನಡೆದ 1984, 1989, 1991ರಲ್ಲಿ ನಡೆದ ಲೋಕಸಭೆ ಚುನಾವಣೆ ಯಲ್ಲಿ ಸತತವಾಗಿ ಗೆಲುವು ಸಾಧಿಸಿ 4 ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆ ಆದರು. 1994ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಆಯ್ಕೆ ಆಗುವ ಮೂಲಕ 5ನೇ ಬಾರಿಗೆ ಸಂಸತ್ ಪ್ರವೇಶಿಸಿದ ಕೀರ್ತಿಗೆ ಪಾತ್ರರಾದರು.

2008ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ನಂಜನಗೂಡು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿ ಮೊದಲ ಬಾರಿಗೆ ಶಾಸಕರಾದರು. 2013ರ ವಿಧಾನಸಭಾ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ(ನಂಜನಗೂಡು) ಜಯ ಗಳಿಸಿದರು. 2017ರಲ್ಲಿ ನಡೆದ ನಂಜನಗೂಡು ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಯಾಗಿ ಸ್ಪರ್ಧಿಸಿ ಸೋಲು ಕಂಡರು.

ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದ ಶ್ರೀನಿವಾಸ್ ಪ್ರಸಾದ್, ಪಕ್ಷದ ಮುಖಂಡರು, ಕಾರ್ಯಕರ್ತರ ಒತ್ತಾಯಕ್ಕೆ ಮಣಿದು, ಈ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಸ್ಪರ್ಧಿಸುವ ಮೂಲಕ ಗಮನ ಸೆಳೆದಿದ್ದಾರೆ.

ಧ್ರುವನಾರಾಯಣ್: 1999ರಲ್ಲಿ ಸಂತೇ ಮರಹಳ್ಳಿ ವಿಧಾನಸಭಾ ಕ್ಷೇತ್ರದಿಂದ (ಈಗ ಈ ಕ್ಷೇತ್ರ ರದ್ದಾಗಿದೆ) ಬಿಜೆಪಿ ಅಭ್ಯರ್ಥಿ ಯಾಗಿ ಮೊದಲ ಬಾರಿಗೆ ಸ್ಪರ್ಧಿಸಿದ್ದ ಧ್ರುವನಾರಾಯಣ್ ಚುನಾವಣೆಯಲ್ಲಿ ಸೋತರು. ನಂತರ 2004ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಂತೇಮರಹಳ್ಳಿ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸಿ ದರು. ಈ ಚುನಾವಣೆಯಲ್ಲಿ ಧ್ರುವನಾರಾ ಯಣ್ ಕೇವಲ 1 ಮತದ ಅಂತರದಿಂದ ತಮ್ಮ ಪ್ರತಿಸ್ಪರ್ಧಿ ಅಭ್ಯರ್ಥಿ(ಎ.ಆರ್. ಕೃಷ್ಣಮೂರ್ತಿ) ಯನ್ನು ಪರಾಭವಗೊಳಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆ ಆದರು. 2008ರ ಚುನಾವಣೆ ವೇಳೆಗೆ ಸಂತೇಮರಹಳ್ಳಿ ಕ್ಷೇತ್ರ ರದ್ದಾಗಿತ್ತು. ಹಾಗಾಗಿ ಧ್ರುವನಾರಾಯಣ್ ಕೊಳ್ಳೇಗಾಲ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಯಾಗಿ ಸ್ಪರ್ಧಿಸಿ ಎರಡನೇ ಬಾರಿಗೆ ಶಾಸಕರಾಗಿ ಪುನರಾಯ್ಕೆ ಆದರು.

2009ರಲ್ಲಿ ಲೋಕಸಭಾ ಚುನಾವಣೆ ಎದುರಾಯಿತು. ಹಾಲಿ ಶಾಸಕರಾಗಿದ್ದ ಧ್ರುವನಾರಾಯಣ್ ಅವರನ್ನು ಕಾಂಗ್ರೆಸ್ ಪಕ್ಷ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಸಿತು. ಈ ಚುನಾ ವಣೆಯಲ್ಲಿ ಗೆಲುವು ಸಾಧಿಸಿದ ಧ್ರುವನಾರಾ ಯಣ್ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದರು. ನಂತರ ನಡೆದ 2014ರ ಲೋಕಸಭಾ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಭಾರೀ ಅಂತರದಿಂದ (1,41, 182 ಮತಗಳು) ಗೆಲುವು ಸಾಧಿಸಿ ಎರಡನೇ ಬಾರಿಗೆ ಸಂಸತ್ ಪ್ರವೇಶಿಸಿದರು.

ಸಕ್ರೀಯ ರಾಜಕೀಯದಲ್ಲಿ ಇದ್ದು, ಕ್ಷೇತ್ರದ ಅಭಿವೃದ್ಧಿಯೇ ನನ್ನ ಮೂಲ ಮಂತ್ರ ಎಂದು ತಿಳಿದು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವ ಧ್ರುವನಾರಾಯಣ್, ಈಗ ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.

ಸಿದ್ದಲಿಂಗಸ್ವಾಮಿ