ಪ್ರೊ ಕಬಡ್ಡಿ ಗೆದ್ದ ಚಾಮುಂಡೇಶ್ವರಿ ಬುಲ್ಸ್

ಮೈಸೂರು: ಶೇಷಾದ್ರಿ ಅಯ್ಯರ್ ರಸ್ತೆಯಲ್ಲಿರುವ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ಪ್ರೊ ಕಬಡ್ಡಿ ಪಂದ್ಯಾವಳಿ ಯಲ್ಲಿ `ಚಾಮುಂಡೇಶ್ವರಿ ಬುಲ್ಸ್’ ಗೆಲುವು ಸಾಧಿಸಿದೆ. ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ 40ನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ಆಯೋಜಿಸಿದ್ದ ಮೈಸೂರು ನಗರ ಮಟ್ಟದ ಪುರುಷರ ಪ್ರೊ ಕಬಡ್ಡಿ ಪಂದ್ಯಾವಳಿಯಲ್ಲಿ ಚಾಮುಂಡೇಶ್ವರಿ ಬುಲ್ಸ್ ತಂಡವು ಅಂಜನಿ ಪ್ಯಾಂಥರ್ಸ್ ವಿರುದ್ಧ ಗೆಲುವು ಸಾಧಿಸಿ ಪ್ರಥಮ ಸ್ಥಾನ ಪಡೆದರೆ, ಅಂಜನಿ ಪ್ಯಾಂಥರ್ಸ್ ತಂಡ ದ್ವಿತೀಯ ಬಹುಮಾನಕ್ಕೆ ತೃಪ್ತಿಪಡಬೇಕಾಯಿತು. ಎಸ್‍ಎಲ್‍ಡಿ ಬುಲ್ಸ್ ತೃತೀಯ ಮತ್ತು ಮೈಸೂರು ವಲ್ಚರ್ಸ್ ತಂಡ 4ನೇ ಬಹುಮಾನ ಪಡೆದುಕೊಂಡಿತು.

ಉತ್ತಮ ದಾಳಿಕಾರ ಗೌತಮ್, ಉತ್ತಮ ಹಿಡಿತಕಾರ ಕೃಷ್ಣಮೂರ್ತಿ, ಸರ್ವೋತ್ತಮ ಆಟಗಾರರಾಗಿ ಹೇಮಂತ್ ಹೊರ ಹೊಮ್ಮಿದರು. ನಗರ ಪಾಲಿಕೆ ಸದಸ್ಯ ಕೆ.ವಿ.ಶ್ರೀಧರ್ ಬಹುಮಾನ ವಿತರಿಸಿದರು. ಪ್ರಾಂಶುಪಾಲ ಡಾ.ಎಸ್.ಮರಿಗೌಡ, ದೈಹಿಕ ಶಿಕ್ಷಣ ನಿರ್ದೇಶಕರಾದ ಚಂದ್ರಕುಮಾರ್, ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಅಂದರೆ, ಜ.26ರಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇ ಗೌಡ ಅವರು ಪ್ರೊ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿದ್ದರು. ಈ ವೇಳೆ ಸಚಿವರು ಮಾತನಾಡಿ, ವ್ಯಕ್ತಿಯೊಬ್ಬನ ಸರ್ವಾಂಗೀಣ ಬೆಳವಣಿಗೆಗೆ ಶಿಕ್ಷಣ ಎಷ್ಟು ಮುಖ್ಯವೋ ಕ್ರೀಡೆಯೂ ಅಷ್ಟೇ ಮುಖ್ಯ. ಕ್ರೀಡೆ ಎಂದರೆ ಕ್ರಿಕೆಟ್ ಎಂದಾಗಿದೆ. ಆದರೆ, ಇತ್ತೀಚೆಗೆ ಕಬ್ಬಡಿ ಕೂಡ ವಿಶ್ವಮಾನ್ಯತೆ ಪಡೆಯುವಲ್ಲಿ ಯಶಸ್ವಿಯಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

10 ಲಕ್ಷ ರೂ.ಗಳ ನೆರವು: ವಿದ್ಯಾವರ್ಧಕ ಸಂಘದ ನೌಕರ ವರ್ಗದವರು ಹಾಗೂ ಆಡಳಿತ ಮಂಡಳಿಯವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಒಂದು ದಿನದ ವೇತನದ ಹಣವಾದ 10 ಲಕ್ಷ ರೂ.ಗಳನ್ನು ನೀಡಿದ್ದು, ಅದರ ಡಿಡಿಯನ್ನು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರ ಮೂಲಕ ಕಬಡ್ಡಿ ಉದ್ಘಾಟನಾ ಸಮಾರಂಭದಲ್ಲಿ ಹಸ್ತಾಂತರಿಸಲಾಯಿತು. ಈ ವೇಳೆ ವಿದ್ಯಾವರ್ಧಕ ಸಂಘದ ಗೌರವ ಅಧ್ಯಕ್ಷ ಗುಂಡಪ್ಪಗೌಡ, ಗೌರವ ಕಾರ್ಯದರ್ಶಿ ಪಿ.ವಿಶ್ವನಾಥ್, ಕಾಲೇಜಿನ ಆಡಳಿತ ನಿರ್ವಹಣಾ ಮಂಡಳಿಯ ಅಧ್ಯಕ್ಷ ಟಿ.ನಾಗರಾಜು, ಸದಸ್ಯ ಅಬ್ದುಲ್ ಜಮೀಲ್, ಜಿಪಂ ಸದಸ್ಯ ದಿನೇಶ್, ಮೈಸೂರು ವಿ.ವಿ. ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಸಿ. ವೆಂಕಟೇಶ್, ಸಂಚಾಲಕ ಪ್ರೊ.ಎಚ್.ಜೆ.ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.