ಯಾತ್ರಾ ಸ್ಥಳಗಳ ಅಭಿವೃದ್ಧಿ ಯೋಜನೆಗೆ ಚಾಮುಂಡಿ ಬೆಟ್ಟ ಆಯ್ಕೆ: ಪ್ರಧಾನಿ ಮೋದಿಗೆ ನಗರ ಬಿಜೆಪಿ ಧನ್ಯವಾದ

ಮೈಸೂರು: ಕೇಂದ್ರ ಸರ್ಕಾರವು ಯಾತ್ರಾ ಸ್ಥಳಗಳ ಅಭಿವೃದ್ಧಿ ಯೋಜನೆಯಡಿ ಚಾಮುಂಡಿ ಬೆಟ್ಟವನ್ನು ಆಯ್ಕೆ ಮಾಡಿರುವುದಕ್ಕೆ ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರಕ್ಕೆ ಬಿಜೆಪಿ ನಗರಾಧ್ಯಕ್ಷ ಡಾ.ಬಿ.ಹೆಚ್. ಮಂಜುನಾಥ್ ಧನ್ಯವಾದ ಅರ್ಪಿಸಿದ್ದಾರೆ. ಪುರಿ, ದ್ವಾರಕೆ, ಅಮರಾವತಿ, ಗಯಾ, ಅಮೃತಸರ, ಅಜ್ಮೀರ್, ಕಾಂಚಿಪುರ, ವಾರಣಾಸಿ ಮತ್ತು ಮಥುರಾ ತೀರ್ಥ ಕ್ಷೇತ್ರಗಳ ಜೊತೆಗೆ ಚಾಮುಂಡಿ ಬೆಟ್ಟವನ್ನು ಅಭಿವೃದ್ಧಿಪಡಿಸುವ ನಿರ್ಣಯಗಳನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ಈ ಯೋಜನೆಯಡಿ 100 ಕೋಟಿ ವೆಚ್ಚದಲ್ಲಿ ಚಾಮುಂಡಿಬೆಟ್ಟವನ್ನು ಅಭಿವೃದ್ಧಿಪಡಿಸಲಾಗುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದರಿಂದಾಗಿ ಯಾವುದೇ ರೀತಿಯ ಕಾಂಕ್ರಿಟ್ ನಿರ್ಮಾಣಗಳಿಲ್ಲದೆ, ಪರಿಸರದ, ಜೀವ ಸಂಕುಲದ ಅಭಿವೃದ್ಧಿಗೆ ಈ ಯೋಜನೆ ಸಹಕಾರಿಯಾಗಲಿದೆ. ಕೇಂದ್ರ ಸರ್ಕಾರ ಒದಗಿಸುವ 100 ಕೋಟಿ ರೂ ಒಳಿತಿಗೆ ವಿನಿ ಯೋಗವಾಗಲಿ, ಚಾಮುಂಡಿಬೆಟ್ಟದ ಪ್ರಕೃತಿ ಸೌಂದರ್ಯ ಇನ್ನಷ್ಟು ಹೆಚ್ಚುವಂತಾಗಲಿ, ಅಭಿವೃದ್ಧಿ ಹೆಸರಲ್ಲಿ ಯಾವುದೇ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಕೇಂದ್ರ ಸಕಾರ ಅನುಮತಿ ನೀಡದಿರಲಿ ಎಂದು ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.