ಹೆದ್ದಾರಿಯಲ್ಲಿ ಚಿರತೆಗಳ ಚೆಲ್ಲಾಟ ವಾಹನ ಸವಾರರ ಪೇಚಾಟ

ಚಾಮರಾಜನಗರ:  ಕಾಡಿನಿಂದ ರಾಷ್ಟ್ರೀಯ ಹೆದ್ದಾರಿ ಪ್ರವೇಶಿಸಿದ ಎರಡು ಚಿರತೆಗಳು ನಿಶ್ಚಿಂತೆಯಿಂದ ರಸ್ತೆ ಮಧ್ಯೆಯೇ ಚೆಲ್ಲಾಟದಲ್ಲಿ ತೊಡಗಿದ ಘಟನೆ ತಮಿಳುನಾಡಿನ ಸತ್ಯಮಂಗಲಂ ಅರಣ್ಯ ಪ್ರದೇಶದ ಬಣ್ಣಾರಿ ಘಾಟ್‍ನಲ್ಲಿ ಬುಧವಾರ ಕಂಡು ಬಂದಿದೆ.

ಚಾಮರಾಜನಗರದಿಂದ ಸತ್ಯಮಂಗಲಂಗೆ ತೆರಳುವ ಮಾರ್ಗ ಮಧ್ಯೆ ಹಾಸನೂರು ದಾಟಿದ ನಂತರ ದಿಂಬಂನಲ್ಲಿ ಬಣ್ಣಾರಿ ಘಾಟ್ ಆರಂಭವಾಗುತ್ತದೆ. ಈ ಘಾಟ್‍ನ 27ನೇ ತಿರುವಿನಲ್ಲಿ ರಸ್ತೆ ಮಧ್ಯೆಯೇ ಎರಡು ಚಿರತೆಗಳು ಸರಸ ಸಲ್ಲಾಪದಲ್ಲಿ ತೊಡಗಿದವು.

ಕರ್ನಾಟಕ ಮತ್ತು ತಮಿಳುನಾಡನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಾದ ಈ ರಸ್ತೆಯಲ್ಲಿ ಸದಾ ವಾಹನ ಸಂಚಾರ ದಟ್ಟವಾಗಿರುತ್ತದೆ. ಚಿರತೆಗಳ ಚೆಲ್ಲಾಟ ಕಂಡ ವಾಹನ ಸವಾರರು ತಮ್ಮ ವಾಹನವನ್ನು ಮುಂದೆ ಚಲಿಸಲಾಗದೇ, ನಿಲ್ಲಿಸಿದ್ದರು.

ಕೆಲವರು ವಾಹನದೊಳಗಿಂದಲೇ ತಮ್ಮ ಮೊಬೈಲ್ ಗಳಲ್ಲಿ ಚಿರತೆಗಳ ಸರಸ ಸಲ್ಲಾಪವನ್ನು ಸೆರೆ ಹಿಡಿದರು. ನಂತರ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಸತ್ಯಮಂಗಲಂ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಗಳನ್ನು ಕಾಡಿಗೆ ಅಟ್ಟಿದರು. ಇದರಿಂದಾಗಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ಥಗೊಂಡಿತ್ತು. ಇದೇ ರಸ್ತೆಯ 16ನೇ ತಿರುವಿನಲ್ಲಿ ಈ ಹಿಂದೆ ಇಬ್ಬರು ವ್ಯಕ್ತಿಗಳನ್ನು ಹುಲಿ ಬಲಿ ತೆಗೆದುಕೊಂಡಿದ್ದು, ಇದೀಗ ಚಿರತೆಗಳು ರಸ್ತೆಗೆ ಬಂದಿರುವುದು ವಾಹನ ಸವಾರರಲ್ಲಿ ಆತಂಕವನ್ನು ಉಂಟುಮಾಡಿದೆ.